ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಶಾಸಕರ ಸಭೆ

0

ಮಾಸ್ಟರ್ ಫ್ಲಾನ್‌ನಂತೆ ಅಭಿವೃದ್ಧಿ ಕಾರ್ಯ: ಅಶೋಕ್ ಕುಮಾರ್ ರೈ

ಉಪ್ಪಿನಂಗಡಿ: ಇಲ್ಲಿನ ಇತಿಹಾಸ ಪ್ರಸಿದ್ದ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಿತ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲ್ಯಾನ್ ಅನ್ನು ರಚಿಸಿ ಅದರಂತೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಬೇಕೆಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸೂಚನೆ ನೀಡಿದರು.


ಅವರು ಮಂಗಳವಾರ ಸಂಜೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ಅಲ್ಲಿನ ಆಡಳಿತ ಮಂಡಳಿ ಸದಸ್ಯರ ಜೊತೆ ಮಾಸ್ಟರ್ ಪ್ಲ್ಯಾನ್ ರಚಿಸಿದ ಸಂಸ್ಥೆಯ ಅಧಿಕಾರಿಗಳೊಂದಿಗೆ ದೇವಾಲಯದ ಅಭಿವೃದ್ಧಿಯ ಬಗ್ಗೆ ವಿಚಾರ ವಿಮರ್ಷೆ ನಡೆಸಿ ಮಾತನಾಡುತ್ತಿದ್ದರು.


ಈಗಾಗಲೇ ದೇವಾಲಯದ ಅಭಿವೃದ್ಧಿ ನಿಟ್ಟಿನಲ್ಲಿ 22.47 ಕೋ. ರೂ. ವೆಚ್ಚದ ಮಾಸ್ಟರ್ ಪ್ಲ್ಯಾನ್ ರಚಿಸಲಾಗಿದೆ. ಎರಡು ನದಿಗಳ ಸಂಗಮ ಸ್ಥಳವಾಗಿಯೂ, ಪೌರಾಣಿಕ ನೆಲೆಗಟ್ಟಿನಲ್ಲಿ ಧಾರ್ಮಿಕವಾಗಿ ಮಹತ್ವವನ್ನು ಪಡೆದುಕೊಂಡ ಉಪ್ಪಿನಂಗಡಿ ಕ್ಷೇತ್ರ ಇದೀಗ ಅಪರ ಕರ್ಮಾದಿಗಳಿಗೆ ರಾಜ್ಯಾದಾದ್ಯಂತ ಭಕ್ತರನ್ನು ಸೆಳೆಯುತ್ತಿದ್ದು, ಸುವ್ಯವಸ್ಥಿತ ಪ್ರವಾಸಿತಾಣವನ್ನಾಗಿಸುವ ನಿಟ್ಟಿನಲ್ಲಿ ದೂರಗಾಮಿ ಯೋಜನೆಯನ್ನು ರೂಪಿಸಲಾಗಿದೆ ಹಾಗೂ ನದಿಗಳ ಸಂಗಮ ಸ್ಥಳಕ್ಕೆ ತ್ಯಾಜ್ಯ ನೀರು ಹರಿಯದಂತೆ ಗಮನಹರಿಸಬೇಕಾಗಿದೆ. ಇದಕ್ಕಾಗಿ ದೇವಾಲಯದಲ್ಲಿ ಸರ್ವ ಸವಲತ್ತುಗಳನ್ನು ಒಳಗೊಂಡ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಚಿಂತನೆ ನಡೆದಿದೆ. ಮನಸೋ ಇಚ್ಚೆ ನಿರ್ಮಾಣ ಕಾರ್ಯಗಳನ್ನು ಮಾಡುವುದನ್ನು ತಪ್ಪಿಸಲು ಯೋಜಿತವಾದ ಮಾಸ್ತಾರ್ ಪ್ಲ್ಯಾನ್ ರಚಿಸಲಾಗಿದೆ ಎಂದರು.


ಸಂಸದರ ಪ್ರಯತ್ನ ಸ್ವಾಗತಾರ್ಹ:
ದ.ಕ ಜಿಲ್ಲೆಯ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯವೂ ಸೇರಿದಂತೆ ಮೂರು ದೇವಾಲಯಗಳ ಅಭಿವೃದ್ಧಿಗೆ ಮಂಗಳೂರು ಸಂಸದರು ಪ್ರಸಾದಮ್ ಯೋಜನೆಯಡಿ ಪ್ರಸ್ತಾವನೆ ಕಳುಹಿಸಿರುವ ವಿಚಾರದ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಸಂಸದರ ಈ ಪ್ರಯತ್ನ ಸ್ವಾಗತಾರ್ಹ. ಪುತ್ತೂರು ದೇವಳದ ಬಗ್ಗೆ ನಾನೀಗಾಗಲೆ ಕರ್ನಾಟಕ ರಾಜ್ಯದ ಮೂಲಕ ಪ್ರಸಾದಮ್ ಯೋಜನೆಯಡಿ ಪ್ರಸ್ತಾವನೆ ಕಳುಹಿಸಿದ್ದೆ. ಇದೀಗ ಸಂಸದರೂ ಕೂಡಾ ಪ್ರಸ್ತಾವನೆ ಕಳುಹಿಸಿದ್ದರಿಂದ ನಮ್ಮ ಪ್ರಯತ್ನ ಒಂದಷ್ಠು ವೇಗ ಪಡೆಯಲಿದೆ. ದೇವಾಲಯಗಳ ಅಭಿವೃದ್ಧಿಯ ವಿಚಾರದಲ್ಲಿ ದೊರಕುವ ಅಷ್ಠ ದಿಕ್ಕುಗಳ ಸಹಕಾರವನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಲಾಗುವುದು ಎಂದರು. ಈ ನಿಟ್ಟಿನಲ್ಲಿ ಸಂಸತ್ತಿನಲ್ಲಿ ನನ್ನ ಕ್ಷೇತ್ರ ವ್ಯಾಪ್ತಿಯ ಎರಡು ದೇವಾಲಯಗಳ ಬಗ್ಗೆ ಧ್ವನಿ ಎತ್ತಿದ ಸಂಸದರ ನಡೆಗೆ ನನ್ನ ಅಭಿನಂದನೆ ಇದೆ ಎಂದರು.


ದೇವಾಲಯಕ್ಕೆ ಭೂಮಿ ಖರೀದಿಗೆ ವಿಳಂಬ ಯಾಕೆ ?:
ದೇವಾಲಯದ ಮುಂಭಾಗದಲ್ಲಿರುವ ಖಾಸಗಿ ಸ್ವಾಮ್ಯದ ಭೂಮಿಯನ್ನು ದೇವಾಲಯದ ಉದ್ದೇಶಕ್ಕೆ ಖರೀದಿಸುವ ಸಂಬಂಧ ಪದೇ ಪದೇ ಇಲಾಖಾ ಮಟ್ಟದಲ್ಲಿ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ದೇವಾಲಯದ ದುಡ್ಡಿನಿಂದ ದೇವಾಲಯಕ್ಕೆ ಭೂಮಿ ಖರೀದಿಸುವಲ್ಲಿ ಅಧಿಕಾರಿಗಳ ವಿಳಂಬ ನೀತಿಯ ಬಗ್ಗೆ ಸಕಾಲದಲ್ಲಿ ನನಗೆ ಮಾಹಿತಿ ರವಾನಿಸಬೇಕು. ಈ ವಿಚಾರದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರೇ ಹೊಣೆ ಹೊತ್ತು ತ್ವರಿತಗತಿಯ ಅನುಮೋದನೆಗೆ ಶ್ರಮಿಸಬೇಕೆಂದು ಸೂಚಿಸಿದರು ಹಾಗೂ ನೇತ್ರಾವತಿ ಸಮುದಾಯ ಭವನದ ಮೇಲೆ 2 ಹಂತಸ್ತಿನ ಸಭಾಂಗಣವನ್ನು ನಿರ್ಮಿಸುವ ಬಗ್ಗೆ ಸರಕಾರದಿಂದ ಅನುಮೋದನೆ ಪಡೆಯಬೇಕೆಂದು ನಿರ್ದೇಶನ ನೀಡಿದ ಅವರು, ಈ ಬಗ್ಗೆ ಇಲಾಖಾತ್ಮಕವಾಗಿ ವ್ಯವಹರಿಸಲು ಡಾ. ರಾಜಾರಾಮ ಕೆ.ಬಿ. ಅವರಿಗೆ ಹೊಣೆ ನೀಡಿದರು.


ಹಿಂದುತ್ವವೆನ್ನುವುದು ಭಾಷಣಕ್ಕಲ್ಲ:
ಹಿಂದುತ್ವವೆನ್ನುವುದು ಕೇವಲ ಭಾಷಣಕ್ಕಲ್ಲ. ಅಲ್ಲಿ ಧರ್ಮದ, ದೇವಸ್ಥಾನಗಳ ಅಭಿವೃದ್ಧಿಯಾಗಬೇಕು. ದೇವಾಲಯದಲ್ಲಿ ಯಾವುದೇ ರಾಜಕೀಯಕ್ಕೆ ಆಸ್ಪದ ನೀಡಬಾರದು. ಈ ದೇವಾಲಯದ ಅಭಿವೃದ್ಧಿಗೆ ಪಣತೊಟ್ಟಿದ್ದು, ಅದಕ್ಕಾಗಿ ಮಾಸ್ಟರ್ ಫ್ಲಾನ್ ರಚಿಸಲಾಗಿದೆ. ಇದನ್ನು ಒಂದು ತಿಂಗಳ ಕಾಲ ದೇವಾಲಯದಲ್ಲಿ ಪ್ರದರ್ಶನಕ್ಕಿಡಲಿದ್ದೇವೆ. ಸಾರ್ವಜನಿಕರು ಇದನ್ನು ಇದನ್ನು ನೋಡಿ ಸಲಹೆ- ಸೂಚನೆಗಳನ್ನು ನೀಡಬಹುದು. ಇನ್ನು ಇಲ್ಲಿಯೂ ಕೆಲವರು ದೇವಸ್ಥಾನದ ಜಾಗದಲ್ಲಿ ಕೂತಿದ್ದಾರೆ ಎಂಬ ಮಾಹಿತಿಯಿದ್ದು, ದೇವಾಲಯದ ಅಭಿವೃದ್ಧಿಗಾಗಿ ಅವರು ಆ ಜಾಗವನ್ನು ಬಿಟ್ಟುಕೊಡಬಹುದು ಎಂಬ ವಿಶ್ವಾಸವಿದೆ. ಜಾಗ ಬಿಟ್ಟುಕೊಡಲು ಅವರಲ್ಲಿ ವಿನಂತಿ ಮಾಡಲಾಗುವುದು ಎಂದರು.


ಸಭೆಯಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯಕ್, ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ, ಸಮಿತಿ ಸದಸ್ಯರಾದ ದೇವಿದಾಸ್ ರೈ, ಬಿ ಗೋಪಾಲಕೃಷ್ಣ ರೈ, ವೆಂಕಪ್ಪ್ಪ ಪೂಜಾರಿ, ಕೃಷ್ಣ ರಾವ್ ಆರ್ತಿಲ, ಡಾ ರಮ್ಯ ರಾಜಾರಾಮ್, ಅನಿತಾ ಕೇಶವ ಗೌಡ ಪ್ರಮುಖರಾದ ಮುರಳೀಧರ ರೈ ಮಠಂತಬೆಟ್ಟು , ರೂಪೇಶ್ ರೈ ಅಲಿಮಾರ, ರವೀಂದ್ರ ದರ್ಬೆ, ದೇವಳದ ವ್ಯವಸ್ಥಾಪಕರಾದ ವೆಂಕಟೇಶ್ ರಾವ್, ಪದ್ಮಾನಾಭ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು. ಮಾಸ್ಟರ್ ಪ್ಲ್ಯಾನ್ ರಚಿಸಿದ ಸಂಸ್ಥೆಯ ಅಧಿಕಾರಿಗಳಾದ ಅನೂಪ್ ನಾಯಕ್, ಅಕ್ಷಯ್, ಪ್ರೀತಿಕಾ, ಸೌಮ್ಯ ಸಭೆಯಲ್ಲಿ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು.

LEAVE A REPLY

Please enter your comment!
Please enter your name here