ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫೆ.12ರಂದು ಕೆಡ್ಡಸ ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಹೊಸಗದ್ದೆ ಸರಕಾರಿ ಹಿ.ಪ್ರಾ.ಶಾಲೆಯ ಶಿಕ್ಷಕಿ ಮಾಲತಿ ಅವರು ಭೂಮಿತಾಯಿಗೆ ಎಣ್ಣೆ ಬಿಟ್ಟು, ಭೂಮಿ ಪೂಜೆ ನೆರವೇರಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಕೆಡ್ಡಸ ತುಳುನಾಡಿನ ವಿಶಿಷ್ಟ ಆಚರಣೆಯಲ್ಲಿ ಒಂದಾಗಿದೆ. ಹೆಣ್ಣು ಋತುಮತಿಯಾಗಿ ಗರ್ಭಾವಸ್ಥೆಗೆ ಅಣಿಯಾಗುತ್ತಾಳೋ ಹಾಗೆಯೇ ಭೂಮಿ ತಾಯಿ ಎಲ್ಲಾ ಗಿಡಮರಗಳಿಗೆ ಫಲಪುಷ್ಷ ತುಂಬಲು ಅಣಿಯಾಗುವ ಕಾಲವನ್ನು ಕೆಡ್ಡಸ ಎನ್ನುತ್ತಾರೆ. ಈ ಸಂದಭ೯ದಲ್ಲಿ ಭೂಮಿತಾಯಿಯನ್ನು ಸಂರಕ್ಷಣೆ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರು ಮಾತನಾಡಿ, ಹಿರಿಯರು ಆಚರಿಸಿಕೊಂಡು ಬಂದಿರುವ ತುಳು ಆಚಾರ ವಿಚಾರ ಪದ್ಧತಿಗಳನ್ನು ಉಳಿಸಿ, ಪ್ರಕೃತಿಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಧರ್ಮ ಹಾಗೂ ವಿದ್ಯಾರ್ಥಿಗಳು ಈ ದಿಶೆಯಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.
![](https://puttur.suddinews.com/wp-content/uploads/2025/02/ramakunja-1.jpeg)
ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಬಾರಿಂಜ ಸಂದರ್ಭೋಚಿತವಾಗಿ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಆನಂದ ಯಸ್.ಟಿ.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯಗುರು ಗಾಯತ್ರಿ ಯು.ಎನ್ ಸ್ವಾಗತಿಸಿದರು. ಸಹಶಿಕ್ಷಕಿ ಸಂಚಿತಾ ವಂದಿಸಿದರು. ಸಹಶಿಕ್ಷಕಿಯರಾದ ಸರಿತಾ, ಪವಿತ್ರ ಹಾಗೂ ಭವ್ಯ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳು ಕೆಡ್ಡಸ ಕುರಿತ ಗೀತೆಯನ್ನು ಹಾಡಿದರು.ಶಿಕ್ಷಕ- ಶಿಕ್ಷಕೇತರ ವೃಂದದವರು ಸಹಕರಿಸಿದರು.