ಕಡಬ: ಕಡಬ ಮುಖ್ಯಪೇಟೆಯ ಮಗ್ಗುಲಲ್ಲಿರುವ ಸರಕಾರಿ ಪ್ರವಾಸಿ ಬಂಗಲೆ ಶಿಥಿಲಗೊಂಡು ಇತಿಹಾಸದ ಪುಟ ಸೇರುವ ಕಾಲ ಬಂದರೂ ಅಗತ್ಯವಾಗಿ ಬೇಕಿರುವ ಹೊಸ ಪ್ರವಾಸಿ ಬಂಗಲೆ ನಿರ್ಮಿಸಲು ಸೂಕ್ತ ಜಾಗ ಮಾತ್ರ ಇನ್ನೂ ನಿಗದಿಯಾಗಿಲ್ಲ.ಒಂದು ಕಾಲದಲ್ಲಿ ಅತ್ಯಂತ ಚಟುವಟಿಕೆಯ ತಾಣವಾಗಿದ್ದ ಈ ಪ್ರವಾಸಿ ಬಂಗಲೆ ಇದೀಗ ಯಾವುದೇ ಚಟುವಟಿಕೆಗಳಿಲ್ಲದೆ ಪರಿಸರದಲ್ಲಿ ಗಿಡಗಂಟಿ ಬೆಳೆದು ಅನಾಥವಾಗಿದೆ.
ಹಳೆಯ ಪ್ರವಾಸಿ ಬಂಗಲೆಯನ್ನು ದುರಸ್ತಿಗೊಳಿಸುವ ಸಲುವಾಗಿ ಈ ಹಿಂದೆ ಪರಿಶೀಲನೆಗೆ ಆಗಮಿಸಿದ್ದ ಜಿ.ಪಂ. ಅಧಿಕಾರಿಗಳು ಕಟ್ಟಡ ಸಂಪೂರ್ಣ ಶಿಥಿಲ ಗೊಂಡಿದ್ದು, ದುರಸ್ತಿಗೆ ಯೋಗ್ಯವಾಗಿಲ್ಲ ಎಂದು ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕಟ್ಟಡವನ್ನು ತೆರವುಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಆ ಕೆಲಸ ಇದುವರೆಗೆ ಕಾರ್ಯಗತವಾಗಿಲ್ಲ. ಕಟ್ಟಡದ ಹಿಂಭಾಗ ಭಾಗಶಃ ಕುಸಿದಿದ್ದು, ಯಾವುದೇ ಕ್ಷಣದಲ್ಲಿ ಕಟ್ಟಡ ಪೂರ್ತಿಯಾಗಿ ಕುಸಿದು ಬೀಳುವ ಸಾಧ್ಯತೆಗಳಿವೆ. ಕಟ್ಟಡ ಕುಸಿದು ಅಪಾಯ ಸಂಭವಿಸುವ ಮೊದಲು ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕಿದೆ.
ಮೂಲತಃ ಸರಕಾರಿ ಸಮುದಾಯ ಆಸ್ಪತ್ರೆಗೆ ಸೇರಿದ ಈ ಜಮೀನನ್ನು ಮತ್ತೆ ಆಸ್ಪತ್ರೆಯ ಉಪಯೋಗಕ್ಕೆ ನೀಡಬೇಕೆಂದು ಈ ಹಿಂದೆ ಜಿಲ್ಲಾ ಆರೋಗ್ಯಾಧಿಕಾರಿಯವರ ಮುಖಾಂತರ ಜಿ.ಪಂ.ಗೆ ಮನವಿ ಸಲ್ಲಿಸಲಾಗಿತ್ತು. ಮುಂದೆ ಸಮುದಾಯ ಆಸ್ಪತ್ರೆ ತಾಲೂಕು ಆಸ್ಪತ್ರೆಯಾಗಿ ಉನ್ನತೀಕರಣವಾಗಬೇಕಿರುವುದರಿಂದ ಹೆಚ್ಚಿನ ಜಾಗದ ಅಗತ್ಯವಿರುವುದರಿಂದ ಸಂಬಂಧಪಟ್ಟವರು ಈ ಕುರಿತು ಕ್ರಮ ಕೈಗೊಳ್ಳಬೇಕಿದೆ.
ಕಲ್ಲಂತಡ್ಕದಲ್ಲಿ ಜಾಗ ಗುರುತು:
ಕಡಬದ ಹಳೆಸ್ಟೇಶನ್ನಲ್ಲಿ ನೂತನವಾಗಿ ನಿರ್ಮಾಣಗೊಂಡ ತಾ.ಪಂ. ಕಟ್ಟಡದ ಸಮೀಪವೇ ಹೊಸದಾಗಿ ಸುಸಜ್ಜಿತ ನಿರೀಕ್ಷಣ ಮಂದಿರ ನಿರ್ಮಿಸಲು ಜಮೀನು ಗುರುತಿಸಲಾಗಿತ್ತು. ಆದರೆ ಬಳಿಕದ ಬೆಳವಣಿಗೆಯಲ್ಲಿ ತಾ.ಪಂ. ಕಟ್ಟಡದ ಆವರಣದಲ್ಲಿ ವಾಹನ ಪಾರ್ಕಿಂಗ್ ಇತ್ಯಾದಿಗಳಿಗೆ ಜಾಗದ ಅಗತ್ಯವಿರುವುದರಿಂದ ಆ ಜಮೀನನ್ನು ಕೈಬಿಡಲಾಗಿದೆ. ಇದೀಗ ಕೋಡಿಂಬಾಳ ಗ್ರಾಮದ ಕಲ್ಲಂತಡ್ಕದಲ್ಲಿರುವ ರುದ್ರಭೂಮಿಯ ಬಳಿ ನಿರೀಕ್ಷಣ ಮಂದಿರ ನಿರ್ಮಾಣಕ್ಕೆ ಜಾಗ ಗುರುತಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಮಾಹಿತಿ ನೀಡಿದ್ದಾರೆ.