ಉಪ್ಪಿನಂಗಡಿ, ಪುತ್ತೂರು, ತೊಡಿಕಾನ ದೇವಾಲಯಗಳ ಅಭಿವೃದ್ಧಿಗೆ 150 ಕೋ.ರೂ. ಪ್ರಸ್ತಾವನೆ: ಉಪ್ಪಿನಂಗಡಿಯಲ್ಲಿ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಹೇಳಿಕೆ

0

ಉಪ್ಪಿನಂಗಡಿ: ಪ್ರಸಾದಮ್ ಮತ್ತು ಸ್ವದೇಶಿ ದರ್ಶನ್ ಯೋಜನೆಯಡಿ ದೇವಾಲಯಗಳ ಅಭಿವೃದ್ಧಿ ಮತ್ತು ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಉಪ್ಪಿನಂಗಡಿ , ತೊಡಿಕಾನ ಮತ್ತು ಪುತ್ತೂರು ದೇವಾಲಯಗಳ ಅಭಿವೃದ್ಧಿಗೆ ಒಟ್ಟು 150 ಕೋಟಿ ರೂಪಾಯಿಯ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು, ಇದರಿಂದ ಸಂಗಮ ಕ್ಷೇತ್ರ ಉಪ್ಪಿನಂಗಡಿಯನ್ನು ಅಮೂಲಾಗ್ರ ಅಭಿವೃದ್ಧಿಗೆ ಒಳಪಡಿಸಲು ಸಾಧ್ಯವಾಗುವುದೆಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದರು.


ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ಫೆ.17ರಂದು ಸಂಕಲ್ಪಿತ ಅಭಿವೃದ್ಧಿ ಕಾರ್ಯಗಳ ನೀಲ ಸಕಾಶೆಯನ್ನು ಪರಿಶೀಲಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.


ಇದು ಕೇಂದ್ರ ಸರಕಾರದ ಯೋಜನೆಯಾಗಿದ್ದರೂ ಅದು ರಾಜ್ಯ ಸರಕಾರದ ಅನುಮೋದನೆಯೊಂದಿಗೆ ಕೇಂದ್ರಕ್ಕೆ ರವಾನೆಯಾಗಬೇಕು. ಪುತ್ತೂರು ದೇವಾಲಯದ ಅಭಿವೃದ್ಧಿಗಾಗಿ ಇದೇ ಯೋಜನೆಯಡಿ ಪುತ್ತೂರು ಶಾಸಕರು ಈಗಾಗಲೇ ರಾಜ್ಯ ಸರಕಾರದ ಅನುಮೋದನೆಯನ್ನು ಪಡೆದು ಕೇಂದ್ರ ಸರಕಾರಕ್ಕೆ ಕಳುಹಿಸಿದ್ದು, ಉಪ್ಪಿನಂಗಡಿ ಹಾಗೂ ತೊಡಿಕಾನ ದೇವಾಲಯದ ಕಡತವನ್ನು ರಾಜ್ಯ ಸರಕಾರದ ಅನುಮೋದನೆ ಪಡೆಯುವಲ್ಲಿ ಸಂಬಂಧಿತ ಶಾಸಕರ ಸಹಕಾರ ಪಡೆಯಲಾಗುವುದು. ಸರಕಾರ ಪ್ರಸ್ತಾವನೆಯನ್ನು ಮಾನ್ಯ ಮಾಡಿದ್ದೇ ಆದರೆ ಉಪ್ಪಿನಂಗಡಿ ನೇತ್ರಾವತಿ ನದಿ ಗರ್ಭದಲ್ಲಿನ ಉದ್ಭವ ಲಿಂಗ ಸಹಿತ ಬಹುತೇಕ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದೆಂದರು. ಪೊಳಲಿ ಹಾಗೂ ಸೋಮನಾಥ ದೇವಾಲಯವನ್ನು ಈ ಯೋಜನೆಯಡಿ ಸೇರಿಸುವ ಉದ್ದೇಶವಿತ್ತಾದರೂ, ಕಾರಣಾಂತರದಿಂದ ಈ ಬಾರಿ ಅಸಾಧ್ಯವಾಗಿದ್ದು, ಮುಂದಿನ ಅವಧಿಯಲ್ಲಿ ಗಮನ ಹರಿಸಲಾಗುವುದೆಂದರು.


ಬಾಣಂತಿಯರ ಸಾವು ಕಳವಳಕಾರಿಯಾಗಿದೆ:
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಂಸದರು, ರಾಜ್ಯದಲ್ಲಿ ಬಾಣಂತಿಯರ ಸಾವು ದಿನೇ ದಿನೇ ಸಂಭವಿಸುತ್ತಿರುವುದು ಕಳವಳಕಾರಿ ವಿದ್ಯಾಮಾನವಾಗಿದೆ. ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಿ ಅಮೂಲಾಗ್ರ ತನಿಖೆ ನಡೆಸಬೇಕು. ಈ ಮೂಲಕ ಸಾವಿನಲ್ಲಿ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯ ಅಡಗಿದೆಯೋ , ಷಡ್ಯಂತ್ರ ಅಡಗಿದೆಯೋ ಎಂಬುವುದನ್ನು ಪತ್ತೆ ಹಚ್ಚಬೇಕಾಗಿದೆ. ಈ ಕಾರಣಕ್ಕೆ ಪ್ರತಿ ಸಾವಿನ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕೆಂದು ಅಗ್ರಹಿಸಿದರು.


ಹೆದ್ದಾರಿ ಕಾರ್ಯ ಪ್ರಗತಿಯಲ್ಲಿದೆ:
ಹೆದ್ದಾರಿ ವಿಸ್ತರಣೆಯ ಕಾರ್ಯ ತೃಪ್ತಿದಾಯವಾಗಿ ನಡೆಯುತ್ತಿದ್ದು, ಈ ಮಳೆಗಾಲ ಪ್ರಾರಂಭವಾಗುವ ಮುನ್ನಾ ಬಹುತೇಕ ಕಾರ್ಯ ಪೂರ್ಣಗೊಳ್ಳಲಿದೆ. ಮೂರು ಕಡೆ ಬಂಡೆಕಲ್ಲುಗಳನ್ನು ಸ್ಫೋಟಿಸಲು ಇರುವುದರಿಂದ ಸುರಕ್ಷತಾ ಕಾರಣಗಳಿಂದ ಆ ಭಾಗದ ಕಾಮಗಾರಿ ಒಂದಷ್ಟು ವಿಳಂಬವಾಗಲಿದೆ. ಶಿರಾಡಿ ಘಾಟ್ ಪ್ರದೇಶದಲ್ಲಿನ ಹೆದ್ದಾರಿ ಭಾಗವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಸಹಕಾರವನ್ನು ಬಯಸಲಾಗಿದ್ದು, ಮಂಗಳೂರು – ಬೆಂಗಳೂರು ನಡುವಣದ ರಸ್ತೆ ಸಂಪರ್ಕದ ಅವಧಿ ಕಡಿಮೆ ಹಾಗೂ ಸುರಕ್ಷಿತಗೊಳಿಸಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಪೂರಕ ವಾತಾವರಣವನ್ನು ಸೃಷ್ಟಿಸಲಾಗುವುದು ಎಂದರು.


ರೈಲ್ವೇ ಅಭಿವೃದ್ಧಿಯ ಬಗ್ಗೆ ಗಮನವಿದೆ:
ರೈಲ್ವೇ ಇಲಾಖೆಯ ಘಾಟ್ ಪ್ರದೇಶದಲ್ಲಿನ ಬೌಗೋಳಿಕ ಸಮಸ್ಯೆಗಳಿಂದಾಗಿ ಮಂಗಳೂರು ಬೆಂಗಳೂರು ನಡುವಣದ ರೈಲು ಸಂಚಾರ ಕ್ರಾಸಿಂಗ್ ವಿಚಾರಕ್ಕಾಗಿ ಬಹಳಷ್ಟು ಸಮಯವನ್ನು ತೆಗೆದುಕೊಳ್ಳುತ್ತಿದೆ. ಇದರ ಬಗ್ಗೆ ಪೂರಕ ಕ್ರಮ ಜರುಗಿಸಲು ಹೆಚ್ಚುವರಿ ಭೂಮಿಯ ಅವಶ್ಯಕತೆ ಇದ್ದು, 48 ಕಿ.ಮೀ. ಹೊಸ ರೈಲು ಲೈನ್ ರಚಿಸಬೇಕಾಗಿದೆ. ರಾಜ್ಯ ಸರಕಾರ ಈ ಸಂಬಂಧ ಡಿ ಪಿ ಆರ್ ಸಿದ್ದಪಡಿಸಿಕೊಟ್ಟರೆ ರೈಲ್ವೇ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದೆಂದರು.


ಕ್ಷೇತ್ರದ ಅಭಿವೃದ್ಧಿಯ ದೃಷ್ಠಿಯಿಂದ ರಾಜ್ಯ ಹಾಗೂ ಕೇಂದ್ರ ಸರಕಾರ ಜೊತೆಯಾಗಿ ಸಾಗಿದರೆ ಬಹಳಷ್ಟು ವೇಗವಾಗಿ ಅಭಿವೃದ್ಧಿಯನ್ನು ಸಾಧಿಸಬಹುದಾಗಿದೆ. ಈ ನಿಟ್ಟಿನಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉಪ್ಪಿನಂಗಡಿ ಸಂಗಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 320 ಕೋಟಿ ರೂ ವೆಚ್ಚದ ಪ್ರಸ್ತಾವನೆಯನ್ನು ಸರಕಾರದ ಮುಂದಿರಿಸಿದ್ದಾರೆಂಬ ಮಾಹಿತಿಯನ್ನು ಸ್ವಾಗತಿಸುವುದಾಗಿ ತಿಳಿಸಿದರು.


ಈ ವೇಳೆ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಕ್, ಸದಸ್ಯರಾದ ದೇವಿದಾಸ್ ರೈ, ಡಾ. ರಮ್ಯ ರಾಜಾರಾಮ್, ವೆಂಕಪ್ಪ ಪೂಜಾರಿ , ಅರ್ತಿಲ ಕೃಷ್ಣ ರಾವ್ , ಮಾಜಿ ಶಾಸಕ ಸಂಜೀವ ಮಠಂದೂರು, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ ಪ್ರಮುಖರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಸುಧಾಕರ ಶೆಟ್ಟಿ , ಹರಿರಾಮಚಂದ್ರ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here