ಗಾಂಧಿ,ಅಂಬೇಡ್ಕರ್ ಮತ್ತು ನೆಹರೂ ಅವರನ್ನು ಬಿಜೆಪಿ ಪದೇ ಪದೇ ಅಪಮಾನ ಮಾಡುತ್ತಿದೆ: ಸಚಿವ ಸತೀಶ್ ಜಾರಕಿಹೊಳಿ
ಮಂಗಳೂರು: ಗಾಂಧಿ- ಅಂಬೇಡ್ಕರ್ ಮತ್ತು ನೆಹರೂ ಅವರ ದೂರದೃಷ್ಟಿಯ ಅಭಿವೃದ್ದಿಯ ಭಾರತ ಆಗಬಾರದು ಎಂಬ ದುರುದ್ದೇಶದಿಂದ ದೇಶದ ಬಿಜೆಪಿ ನಾಯಕರು ಪದೇ ಪದೇ ಈ ಮೂವರು ನಾಯಕರನ್ನು ಅಪಮಾನ ಮಾಡುತ್ತಲೇ ಇದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನೆಹರೂ ,ಗಾಂಧಿ, ಅಂಬೇಡ್ಕರ್ ತೋರಿಸಿಕೊಟ್ಟ ಹಾದಿಯಲ್ಲಿ ದೇಶ ಇಷ್ಟು ವರ್ಷ ಬೆಳೆದಿದೆ. ಇದನ್ನು ನಾಶ ಮಾಡಲು ಬಿಜೆಪಿ ಮುಂದಾಗಿದೆ. ಮೋದಿ ಆಡಳಿತದಲ್ಲಿ ಭಾರತ ಯಾವುದೇ ಅಭಿವೃದ್ದಿ ಕಂಡಿಲ್ಲ, ಸುಳ್ಳು ಹೇಳಿಯೇ ಅಧಿಕಾರ ನಡೆಸುತ್ತಿದ್ದಾರೆ ಜನ ಅದನ್ನೇ ಸತ್ಯ ಎಂದು ನಂಬಿ ಬಿಟ್ಟಿದ್ದಾರೆ. ದೇಶದಲ್ಲಿ ಕೋಮು ಸೌಹಾರ್ಧತೆ ಬೆಳೆಯಬೇಕು,ಜಾತಿ ವ್ಯವಸ್ಥೆ ನಾಶವಾಗಬೇಕು ಹಾಗಿದ್ದಲ್ಲಿ ಮಾತ್ರ ಭವಿಷ್ಯದ ಭಾರತ ಉತ್ತಮವಾಗಿರುತ್ತದೆ.ನೆಹರೂ,ಗಾಂಧಿ ,ಅಂಬೇಡ್ಕರ್ ಸಿದ್ದಾಂತವನ್ನು ಎಲ್ಲಾ ಮನೆಗಳಿಗೆ ಮುಟ್ಟಿಸುವ ಕೆಲಸ ನಮ್ಮಿಂದ ಆಗಬೇಕು ಎಂದು ಹೇಳಿದ ಸಚಿವರು ಬಿಜೆಪಿಯವರು ಎಷ್ಟೇ ಅಪಮಾನ ಮಾಡಿದರೂ ಈ ದೇಶದ ಮಣ್ಣಿನಿಂದ ಅವರ ಸಿದ್ದಾಂತ ನಾಶ ಮಾಡಲು ಸಾಧ್ಯವೇ ಇಲ್ಲ ಎಂದು ಸಚಿವರು ಹೇಳಿದರು.
ಮಾಜಿ ಸಚಿವ ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ ಈ ದೇಶದ ಸಂವಿದಾನವೇ ಕಾಂಗ್ರೆಸ್ ಸಿದ್ದಾಂತವಾಗಿದೆ, ಅದನ್ನುಅನುಷ್ಟಾನಕ್ಕೆ ತರುವುದೇ ಕಾಂಗ್ರೆಸ್ ಉದ್ದೇಶವಾಗಿದೆ.ಸಂವಿದಾನವೇ ಈ ದೇಶದ ಅಡಿಪಾಯ ಅದನ್ನು ಗಟ್ಟಿಗೊಳಿಸಿ ದೇಶವನ್ನು ಉಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತದೆ ಎಂದು ಹೇಳಿದರು.
ಅಂಬೇಡ್ಕರ್ ಮತ್ತು ನೆಹರೂ ಅವರನ್ನು ಹಿಯ್ಯಾಳಿಸುವ ಮೂಲಕ ದೇಶದ ಸಂವಿಧಾನವನ್ನು ಬುಡಮೇಲು ಮಾಡಲು ಬಿಜೆಪಿ ಷಡ್ಯಂತ್ರ ಮಾಡುತ್ತಿದೆ. ದೇಶದಲ್ಲಿ ದ್ವೇಷ ರಾಜಕಾರಣ ವಿಜೃಂಬಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಹಿಂದೂ ಮಹಾಸಭಾದವರಾಗಿದ್ದಾರೆ,ಕಾಂಗ್ರೆಸ್ ನವರಲ್ಲ.ಬಿಜೆಪಿ ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುತ್ತಿದೆ. ಎಷ್ಟೇ ಸುಳ್ಳು ಹೇಳಿದರೂ ಇತಿಹಾಸ ನಾಶ ಮಾಡಲು ಸಾಧ್ಯವಿಲ್ಲ ಎಂದು ದಿನೇಶ್ ಅಮೀನ್ ಹೇಳಿದರು.ಗಾಂಧಿ, ಅಂಬೇಡ್ಕರ್ ಮತ್ತು ನೆಹರೂ ಅವರನ್ನು ವಿರೋಧಿಸುತ್ತೇವೆ ಎಂಬುದನ್ನು ಬಿಜೆಪಿ ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದರು.
ವೇದಿಕೆಯಲ್ಲಿ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ನಿವೃತ್ತ ನ್ಯಾಯಮೂರ್ತಿ ಬ್ರಿಜೇಶ್ ಕಾಳಪ್ಪ,ಮಾಜಿ ಸಚಿವ ಅಭಯ ಚಂದ್ರಜೈನ್, ಡಿವೈಎಫ್ ಐ ಮುಖಂಡ ಮುನೀರ್ ಕಾಟಿಪಳ್ಳ, ಕಾವು ಹೇಮನಾಥ ಶೆಟ್ಟಿ, ಎಂ ಎಸ್ ಮಹಮ್ಮದ್, ಪದ್ಮರಾಜ್ ಆರ್ ಪೂಜಾರಿ, ಗೇರು ನಿಗಮದ ಮಮತಾ ಗಟ್ಟಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.