ಪುತ್ತೂರು: ರಾಜ್ಯದಲ್ಲೇ ಮಾದರಿಯಾಗಿರುವ ಪುತ್ತೂರು ನಗರಸಭೆಯ ಬನ್ನೂರು ನೆಕ್ಕಿಲ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾರ್ಯಾಚರಿಸುತ್ತಿರುವ ಬಯೋ ಘಟಕ ಮತ್ತು ಹಸಿ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿ ಘಟಕಗಳ ಅಧ್ಯಯನಕ್ಕೆ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಪರಿಸರ ಅಭಿಯಂತರರು ರಾಜ್ಯ ನಾಗರಾಭಿವೃದ್ಧಿ ಸಂಸ್ಥೆ ಮೈಸೂರು ಇದರ ಮುಖಾಂತರ ಫೆ.20ರಂದು ಭೇಟಿ ನೀಡಿದರು.
ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಶಬರಿನಾಥ್ ರೈ, ಘಟಕದ ಯೋಜನಾ ನಿರ್ದೇಶಕ ಡಾ. ರಾಜೇಶ್ ಬೆಜ್ಜಂಗಳ ಮತ್ತು ಹಿರಿಯ ಆರೋಗ್ಯ ನಿರೀಕ್ಷಿಕರಾದ ರಾಮಚಂದ್ರ ಹಾಗೂ ಬಯೋ ಗ್ಯಾಸ್ ಘಟಕದ ಮೇಲ್ವಿಚಾರಕ ಲಿಕಿನ್ ಗೌಡ ಉಪಸ್ಥಿತರಿದ್ದರು. ನಗರಸಭೆಯ ಪೌರಾಯುಕ್ತ ಮಧು ಎಸ್ ಮನೋಹರ್ ಹಸಿ ತ್ಯಾಜ್ಯದಿಂದ ಬಯೋ ಗ್ಯಾಸ್ ತಯಾರಿಕೆಯ ವಿವಿಧ ಹಂತದ ಮಾಹಿತಿಯನ್ನು ಹಾಗೂ ತ್ಯಾಜ್ಯದಿಂದ ಸಾವಯವಗೊಬ್ಬರ ತಯಾರಿ ಬಗ್ಗೆ ಮಾಹಿತಿಯನ್ನು ನೀಡಿದರು. ತಂಡದಲ್ಲಿ ರಾಜ್ಯ ನಗರಾಭಿವೃದ್ಧಿ ಸಂಸ್ಥೆ ತರಬೇತಿ ಸಂಯೋಜಕರಾದ ಅಶ್ವಿನಿ, ರಾಜ್ಯ ವಿವಿಧ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಆಗಮಿಸಿದ 25 ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು. ಅಧ್ಯಯನಕ್ಕೆ ಆಗಮಿಸಿದ ಪ್ರಶಿಕ್ಷಣಾರ್ಥಿಗಳು ಸ್ವತಃ ನಗರಸಭೆಯ ವಾಹನಕ್ಕೆ ಬಯೋ ಗ್ಯಾಸ್ ಹಾಕುವ ಮೂಲಕ ಸಾಕ್ಷಿಯಾದರು. ಘಟಕ ವೀಕ್ಷಣೆ ಬಳಿಕ ನಗರಸಭಾ ಕಚೇರಿ ಸಭಾಂಗಣಕ್ಕೆ ಆಗಮಿಸಿದ ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ ಪುತ್ತೂರು ನಗರಸಭೆಯಲ್ಲಿ 2012 ರಿಂದ ಬಯೋ ಗ್ಯಾಸ್ ಘಟಕ ರಚನೆ ನಿರ್ಮಾಣವಾಗುವರೆಗೆ ಕೈಗೊಂಡ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಪಿ ಪಿ ಟಿ ಮುಖಾಂತರ ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಉಪಾಧ್ಯಕ್ಷ ಬಾಲಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ನಗರಸಭೆ ಮಾಜಿ ಅಧ್ಯಕ್ಷ ಜೀವಂದರ್ ಜೈನ್, ರೋಟರಿ ಸ್ವಚ್ಛ ಪುತ್ತೂರು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಕೃಷ್ಣ ನಾರಾಯಣ ಮುಳಿಯ, ಸಹಾಯಕ ಕಾರ್ಯಪಾಲಕ ಅಭಿಯಂತರ ಶಬರಿನಾಥ್ ರೈ, ಘಟಕದ ಯೋಜನಾ ನಿರ್ದೇಶಕ ಡಾ.ರಾಜೇಶ್ ಬೆಜ್ಜಂಗಳ ಉಪಸ್ಥಿತರಿದ್ದರು. ನಗರಸಭೆಯ ಜೂನಿಯರ್ ಪ್ರೋಗ್ರಾಮರ್ ವಿನೋದ್ ಜೋಶಿ ಪಿ ಪಿ ಟಿ ಮಾಹಿತಿ ಕಾರ್ಯಕ್ಕೆ ಸಹಕರಿಸಿದರು. ಪ್ರಶಿಕ್ಷಣಾರ್ಥಿಗಳಿಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಹನುಮಂತ ಕಲದಗಿ (ಪರಿಸರ ) ಹಾಗೂ ಶಿಡ್ಲಘಟ್ಟ ಪುರಸಭೆಯ ಪರಿಸರ ಅಭಿಯಂತರ ಮೋಹನ್ ಕುಮಾರ್ ಇವರು ಮಾತನಾಡಿ ಸರಕಾರದ ಅನುದಾನವಿಲ್ಲದೆ ಖಾಸಗಿ ಸಹಭಾಗಿತ್ವದಲ್ಲಿ ಇಂತಹ ಘಟಕ ಸ್ಥಾಪನೆ ಸುಲಭದ ಮಾತಲ್ಲ, ಇದಕ್ಕೆ ಕಾರಣೀಭೂತರಾದ ನಗರಸಭಾ ಅಧ್ಯಕ್ಷರು, ಸರ್ವ ಸದಸ್ಯರ, ಅಧಿಕಾರಿಗಳ ಶ್ರಮ ಹಾಗೂ ಇಷ್ಟು ದೊಡ್ಡ ಮೊತ್ತದ ಹಣ ಹೂಡಿಕೆ ಮೂಲಕ ಕಸದಿಂದ ರಸ ಪಡೆಯುವ ರೋಟರಿ ಚಾರಿಟೇಬಲ್ ಟ್ರಸ್ಟ್‌ನ ಕೃಷ್ಣ ನಾರಾಯಣ ಮುಳಿಯ ಇವರ ಇಚ್ಛಾ ಶಕ್ತಿಯು ಪ್ರಶಂಶನೀಯ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೃಷ್ಣ ನಾರಾಯಣ ಮುಳಿಯ ಅವರು ಘಟಕ ನಿರ್ಮಾಣದಲ್ಲಿನ ತಮ್ಮ ಪಾತ್ರದ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು ಸಂಧರ್ಬೋಚಿತವಾಗಿ ಮಾತನಾಡಿದರು. ಮೈಸೂರು ನಗರಾಭಿವೃದ್ಧಿ ಸಂಸ್ಥೆ ತರಬೇತಿ ಸಂಯೋಜಕಿ ಅಶ್ವಿನಿ ವಂದಿಸಿದರು.