
ಪುತ್ತೂರು: ನಗರಸಭಾ ಸದಸ್ಯ ಸಂತೋಷ್ ಕುಮಾರ್ ಬೊಳುವಾರು ಇವರು ತನ್ನ ತಾಯಿ ಶಶಿಕಲಾ ಶ್ಯಾನ್ ಭೋಗ್ ಇವರ ಸ್ಮರಣಾರ್ಥವಾಗಿ ತನಗೆ ಅಕ್ಷರ ಕಲಿತ , ಇದೀಗ ಶತಮಾನದ ಸಂಭ್ರಮಾಚರಣೆಯಲ್ಲಿರುವ ಶಾಲೆಗೆ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡುವ ಮೂಲಕ , ಜ್ಞಾನ ದೇಗುಲವನ್ನು ಗೌರವಿಸುವ ಕಾರ್ಯ ಮಾಡಿದ್ದಾರೆ.
ಇಲ್ಲಿನ ಬೊಳುವಾರು ಸ.ಹಿ.ಪ್ರಾಥಮಿಕ ಶಾಲೆಗೆ ಪೀಠೋಪಕರಣ ಹಸ್ತಾಂತರ ಕಾರ್ಯಕ್ರಮವು ಫೆ.21 ಶಾಲಾ ಆವರಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪುರಸಭಾ ಮಾಜಿ ಅಧ್ಯಕ್ಷ ಲೋಕೇಶ್ ಹೆಗ್ಡೆ ಉರ್ಲಾಂಡಿ ಮಾತನಾಡಿ, ಕಲಿತ ಶಾಲೆಗೆ ತನ್ನ ಕೈಯಲಾದ ಕೊಡುಗೆಯನ್ನು ನೀಡುವಂತಹ ಕಾರ್ಯ ನಗರಸಭಾ ಸದಸ್ಯ ಸಂತೋಷ್ ಕುಮಾರ್ ಆರಂಭಿಸಿರುವುದು ಶ್ಲಾಘನೀಯ. ಈ ವಿದ್ಯಾಮಂದಿರಕ್ಕೆ ಸುಮಾರು 25 ರಷ್ಟು ಬೆಂಚು ಮತ್ತು ಡೆಸ್ಕ್ ಇವುಗಳ ಅವಶ್ಯಕತೆಯಿದ್ದು ,ನಾವೆಲ್ಲರೂ ಸೇರಿಕೊಂಡು ಆ ಕೊರತೆಯನ್ನು ನೀಗಿಸುವ ಕಾಯಕಕ್ಕೆ ಮುಂದಾಗಬೇಕೆಂದು ಹೇಳಿ ಹಾರೈಸಿದರು.
ವರ್ತಕ ಸಂಘದ ಮಾಜಿ ಅಧ್ಯಕ್ಷ ಜಾನ್ ಕುಟಿನ್ಹೊ ಮಾತನಾಡಿ, ನಾನು ಕೂಡ ಈ ಶಾಲೆಯ ಹಳೇ ವಿದ್ಯಾರ್ಥಿ ಮಾತ್ರವಲ್ಲದೇ ಅಭಿಮಾನಿಯೂ ಕೂಡ. ಮಕ್ಕಳ ದಾಖಲಾತಿಯಲ್ಲಿ ಇಳಿಮುಖ ಕಂಡಿರುವ ಈ ಶಾಲೆಯೂ ಮತ್ತೆ ಸಂಖ್ಯೆಯಲ್ಲಿ ಏರುಗತಿ ಕಾಣಲಿ, ಶಾಲೆಯೂ ಪ್ರಗತಿ ಪಥಕ್ಕೇರಲಿ ಎಂದರು.
ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ರೇಷ್ಮಾ , ಶಾಲೆಯ ಹಿರಿಯ ವಿದ್ಯಾರ್ಥಿ ಜಯಂತ್ ಉರ್ಲಾಂಡಿ ಇವರುಗಳು ಕೂಡ ಶುಭ ಹಾರೈಸಿದರು.
ಮುಖ್ಯಗುರು ಮೋನಿಕಾ ಪಿ ಮಾಡ್ತಾ ಇವರಿಗೆ ಸಂತೋಷ್ ಕುಮಾರ್ ಕುಟುಂಬ ವರ್ಗದ ಸದಸ್ಯರು 4 ಜೊತೆ ಬೆಂಚ್ -ಡೆಸ್ಕ್ ಗಳನ್ನು ಹಸ್ತಾಂತರಿಸಿದರು. ಈ ವೇಳೆ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಹಮದ್ ನೌಶದ್ ಹಾಜಿ, ಪ್ರವೀಣ್ ನಾಯಕ್ , ನೀಲಂತ್ ಕುಮಾರ್, ದಯಾಕರ್ ಹೆಗ್ಡೆ , ಹರಿಪ್ರಸಾದ್ ,ಮೋದಿಕೇರ್ ನ ದಯಾನಂದ್, ಸಂತೋಷ್ ಕುಟುಂಬ ಸದಸ್ಯರಾದ ಪಾರ್ವತಿ, ಪೂರ್ಣಿಮ ಹಾಗೂ ಕಲಾವತಿ ಸಹಿತ ಶಾಲೆಯ ಪುಟಾಣಿ ಮಕ್ಕಳ ಸಹಿತ ಹಿರಿಯ ವಿದ್ಯಾರ್ಥಿಗಳು,ಶಿಕ್ಷಕರ ವೃಂದ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಇದ್ದರು.
ಮುಖ್ಯಗುರು ಮೋನಿಕಾ ಪಿ ಮಾಡ್ತಾ ಎಲ್ಲರನ್ನು ಸ್ವಾಗತಿಸಿ , ಶಿಕ್ಷಕಿ ಮಲ್ಲಿಕಾ ಬಿ ನಿರೂಪಿಸಿ ವಂದಿಸಿದರು.