ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಾಲಯದ ಬಳಿಯಿರುವ ನೇತ್ರಾವತಿ ನದಿಯ ಹಿನ್ನೀರಿನಲ್ಲಿ ಯುವಕನೋರ್ವನ ಮೃತದೇಹ ಫೆ.22ರಂದು ಬೆಳಗ್ಗೆ ಪತ್ತೆಯಾಗಿದೆ.

ಇಳಂತಿಲ ಗ್ರಾಮದ ಕಾಯರ್‌ಕೋಡಿ ನಿವಾಸಿ ಯಾಸೀರ್ ಮುಹಮ್ಮದ್ (33.ವ) ಮೃತ ವ್ಯಕ್ತಿ. ಫೆ.21ರ ರಾತ್ರಿ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವರ ಸನ್ನಿಧಿಯಲ್ಲಿ ಮಖೆ ಜಾತ್ರೆಯ ಸಂಭ್ರಮವಿತ್ತು. ರಾತ್ರಿ ದೇವಾಲಯದಲ್ಲಿ ರಥೋತ್ಸವ ನಡೆಯುತ್ತಿದ್ದೊಡನೇ ನೇತ್ರಾವತಿ- ಕುಮಾರಧಾರ ನದಿ ಸಂಗಮ ಸ್ಥಳದಲ್ಲಿ ಯುವಕನೋರ್ವ ನದಿಗೆ ಹಾರುದಂತಾಯಿತು ಎಂದು ಕೆಲವರು ಅಲ್ಲಿ ಮಾತನಾಡಿಕೊಂಡಿದ್ದರು.

ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದರೂ, ಅಲ್ಲಿ ಅವರಿಗೇನೂ ಕಾಣಲಿಲ್ಲ. ಬಳಿಕ ಕೆಲವರು ಇದು ನದಿಯಲ್ಲಿ ಮೀನು ಹಾರಿದ್ದಿರಬಹುದು ಎಂಬುದಾಗಿಯೂ ಶಂಕೆ ವ್ಯಕ್ತಪಡಿಸಿದ್ದರು. ಪೊಲೀಸರು ಕೆಲಕಾಲ ಈ ಬಗ್ಗೆ ಪರಿಶೀಲನೆ ನಡೆಸಿದ್ದರೂ ಈ ಸುದ್ದಿಯ ಅಸಲಿತನ ಅವರ ಗಮನಕ್ಕೆ ಬಾರದಿದ್ದಾಗ ಸ್ಥಳದಿಂದ ತೆರಳಿದ್ದರು. ಆದರೆ ಫೆ.22ರಂದು ಬೆಳಗ್ಗೆ ನದಿಯಲ್ಲಿ ಮೃತದೇಹ ಕಾಣಿಸಿಕೊಂಡಿದೆ. ಅಂದು ಯುವಕನೋರ್ವ ನದಿಗೆ ಹಾರಿದಾಗೆ ಕೆಲವರಿಗೆ ಗೋಚರವಾಗಿದ್ದು ಅದು ಈತನೇ ಇರಬಹುದೆಂಬ ಶಂಕೆ ಈಗ ವ್ಯಕ್ತವಾಗಿದೆ.ಈತ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರೇ? ಅಥವಾ ಈತನ ಸಾವಿಗೆ ಬೇರಾವುದೇ ಕಾರಣವಿರಬಹುದೇ? ಎಂಬುದು ಇನ್ನಷ್ಟೇ ಬಯಲಾಗಬೇಕಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಸಾಗಿಸಲಾಗಿದೆ.


ಪೊಲೀಸರು ಬೆನ್ನಟ್ಟಿಲ್ಲ: ಎಸ್‌ ಐ ಸ್ಪಷ್ಟನೆ
ಮಖೆ ಜಾತ್ರೆಯ ಸಂದರ್ಭದಲ್ಲಿ ಪೊಲೀಸರು ನಟೋರಿಯಸ್ ವ್ಯಕ್ತಿಯೋರ್ವನನ್ನು ಬೆನ್ನಟ್ಟಿದ್ದಾಗ ಆತ ನದಿಗೆ ಹಾರಿದ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಪ್ರಕಟವಾದ ಬಗ್ಗೆ ಸ್ಪಷ್ಟನೆ ನೀಡಿದ ಉಪ್ಪಿನಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಅವಿನಾಶ್ ಎಚ್. ಅವರು, ಈಗ ನದಿಯಲ್ಲಿ ಸಿಕ್ಕಿದ ಮೃತದೇಹ ಯಾಸೀರ್ ಮುಹಮ್ಮದ್ ಎಂಬಾತನಾಗಿದೆ. ಆತ ಗಾಂಜಾ ಪ್ಲೆಡರ್. ಗಾಂಜಾ ಸೇವನೆ ಮತ್ತು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ 2023ರಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಈತನ ಮೇಲೊಂದು ಪ್ರಕರಣ ದಾಖಲಾಗಿತ್ತು. ಅದು ಈಗ ನ್ಯಾಯಾಲಯದಲ್ಲಿದೆ. ಆದರೆ ಮಖೆ ಜಾತ್ರೆಯ ಸಂದರ್ಭ ಪೊಲೀಸರು ಆತನನ್ನು ನೋಡಲೂ ಇಲ್ಲ. ಆತನನ್ನು ಬೆನ್ನಟ್ಟಲೂ ಇಲ್ಲ. ಇದೊಂದು ಸುಳ್ಳು ಸುದ್ದಿ. ಪೊಲೀಸರು ಅಂದು ಜಾತ್ರೆಯ ಬಂದೋಬಸ್ತಿನ ಬ್ಯುಸಿಯಲ್ಲಿದ್ದರು. ಆಗ ಯುವಕನೋರ್ವ ನದಿಗೆ ಹಾರಿದ ವಿಷಯ ಕೇಳಿ ಬಂದಾಗ ಅಲ್ಲಿಗೆ ತೆರಳಿ ಪರಿಶೀಲಿಸಿದರು. ಆದರೆ ಅಲ್ಲಿದ್ದವರಿಗೂ ಅದರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದರೂ ಅಲ್ಲಿ ಅವರಿಗೇನೂ ಕಾಣಲಿಲ್ಲ. ಈ ಸುದ್ದಿಯ ಅಸಲಿತನದ ಬಗ್ಗೆಯೂ ಸ್ಪಷ್ಟ ಮಾಹಿತಿ ದೊರೆಯಲಿಲ್ಲ ಎಂದು ತಿಳಿಸಿದ್ದಾರೆ.

ಕೊಲೆ ಮಾಡಿ ಎಸೆದಿರಬಹುದೇ?- ಸಾರ್ವಜನಿಕರ ಅನುಮಾನ
ಇನ್ನೊಂದೆಡೆ ಯಾಸೀರ್‌ನ ಓರ್ವ ಈಜುಪಟುವಾಗಿದ್ದು, ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿ ಅಲ್ಲ. ಹೆಜ್ಜೆ ಹೆಜ್ಜೆಗೂ ವಾಹನ ಬಳಸುವ ಈತ ತನ್ನ ಕಾರನ್ನು ಉಪ್ಪಿನಂಗಡಿಯ ಗ್ಯಾಸ್ ಪಂಪ್ ಹತ್ತಿರ ಬಿಟ್ಟಿದ್ದು, ಅಲ್ಲಿಂದ ದೇವಸ್ಥಾನದ ತನಕ ನಡೆದುಕೊಂಡು ಹೋಗುವಂತಹ ವ್ಯಕ್ತಿಯಲ್ಲ. ಈತನನ್ನು ಯಾರಾದರೂ ಕೊಲೆ ಮಾಡಿ ನೇತ್ರಾವತಿ ಸೇತುವೆಯಿಂದ ಕೆಳಗಡೆ ಎಸೆದಿದ್ದಾರೆಯೇ ಎಂಬ ಬಗ್ಗೆಯೂ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.


LEAVE A REPLY

Please enter your comment!
Please enter your name here