ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ -ಸಾವಿರಾರು ಭಕ್ತಾದಿಗಳಿಂದ ದೇವರ ದರ್ಶನ ,ಅನ್ನಪ್ರಸಾದ ಸ್ವೀಕಾರ 

0

ವಲ್ಮೀಕ ಸ್ಮರಣ ಸಂಚಿಕೆ ಬಿಡುಗಡೆ -ಗೌರವಾರ್ಪಣೆ ,ಸುದ್ದಿ ಚಾನೆಲ್‌ನಲ್ಲಿ  ನೇರ ಪ್ರಸಾರ 

ಪುತ್ತೂರು : ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಹಾಗೂ ಕಾರಣಿಕ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಹಾಗೂ ಸತ್ಯನಾರಾಯಣ ಪೂಜೆ, ಪರಿವಾರ ದೈವಗಳ ನೇಮೋತ್ಸವ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಫೆ.22 ಮತ್ತು ಫೆ 23 ರಂದು ನಡೆಯಿತು.

ಫೆ.21ರಂದು ಹಸಿರುವಾಣಿ ಸಮರ್ಪಣೆ, ಫೆ.22ರಂದು ಬೆಳಿಗ್ಗೆ  ಭಜನಾ ಕಾರ್ಯಕ್ರಮ,ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೈವಗಳ ಭಂಡಾರ ತೆಗೆದ ಬಳಿಕ ವಲ್ಮೀಕ ರೂಪಿ ಸುಬ್ರಹ್ಮಣ್ಯ ದೇವರಿಗೆ ರಂಗಪೂಜೆ ನಡೆದು ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ,ವೈದಿಕ ಮಂತ್ರಾಕ್ಷತೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ರಾತ್ರಿ ಅಭಿನಯ ಕಲಾವಿದರು ಉಡುಪಿ ಇವರಿಂದ ತುಳು ನಾಟಕ ಶಾಂಭವಿ ಪ್ರದರ್ಶನಗೊಂಡಿತು.ಫೆ.23ರಂದು ವ್ಯಾಘ್ರ ಚಾಮುಂಡಿಯ ನೇಮೋತ್ಸವ, ಬೆಳಿಗ್ಗೆ ರುದ್ರ ಚಾಮುಂಡಿಯ ನೇಮೋತ್ಸವ ಗುಳಿಗ ದೈವಕ್ಕೆ ತಂಬಿಲ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು,  ಮೊಕ್ತೇಸರರಾದ ಶ್ರೀನಿವಾಸ್ ಹೆಬ್ಬಾರ್,ನಾರಾಯಣ ರೈ ಮೊದೆಲ್ಕಾಡಿ,ಚಂದ್ರಶೇಖರ ರೈ ನಳೀಲು, ಮೋಹನದಾಸ ರೈ ನಳೀಲು, ಡಾ.ಸುಚೇತಾ ಜೆ.ಶೆಟ್ಟಿ, ಕಿಶೋರ್ ರೈ ನಳೀಲು, ಸತೀಶ್ ರೈ ನಳೀಲು, ಪ್ರವೀಣ್ ರೈ ನಳೀಲು, ವಿಲಾಸ್ ರೈ ಪಾಲ್ತಾಡು,ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ರೈ ನಳೀಲು, ಕಾರ್ಯದರ್ಶಿ ಸುರೇಶ್ಚಂದ್ರ ರೈ ನಳೀಲು, ಕೋಶಾಧಿಕಾರಿ ಡಾ.ಶುಭ್ ದೀಪ್ ರೈ ಕೋಲ್ಪೆಗುತ್ತು,ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ರೈ ನಡುಕೂಟೇಲು, ಉಪಾಧ್ಯಕ್ಷರಾದ ಸುಬ್ರಾಯ ಗೌಡ ಪಾಲ್ತಾಡಿ, ವಿನೋದ್ ಕುಮಾರ್ ಅಂಕತಡ್ಕ,ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ, ಜತೆ ಕಾರ್ಯದರ್ಶಿ ಕಿರಣ್ ಪ್ರಸಾದ್ ಕೆ.,ಕೋಶಾಧಿಕಾರಿ ಸುಧಾಕರ ರೈ ಪಾಲ್ತಾಡಿ ಹೊಸಮನೆ ಮೊದಲಾದವರಿದ್ದರು.

ಸ್ಮರಣ ಸಂಚಿಕೆ ಬಿಡುಗಡೆ 
ಈ ಸಂದರ್ಭದಲ್ಲಿ 2024ರಲ್ಲಿ ನಡೆದ ಬ್ರಹ್ಮಕಲಶೋತ್ಸವದ ಸವಿನೆನಪಿಗಾಗಿ ಹೊರತಂದ ವಲ್ಮೀಕ ಸ್ಮರಣ ಸಂಚಿಕೆ ಬಿಡುಗಡೆ ನಡೆಯಿತು.ಬ್ರಹ್ಮಶ್ರೀ ಕೆಮ್ಮಿಂಜೆ ಸುಜಯ ತಂತ್ರಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ,ಸಂಭ್ರಮದ ಕ್ಷಣಗಳನ್ನು ಅಕ್ಷರ ರೂಪದಲ್ಲಿ ಪೋಣಿಸಿ ಅದನ್ನು ಪುಸ್ತಕ ರೂಪದಲ್ಲಿ  ಸಂಗ್ರಹಯೋಗ್ಯವಾಗಿ ಕಾಪಿಡುವಂತಹ ಕೆಲಸ ಅಭಿನಂದನೀಯ.ಪುಸ್ತಕ ರೂಪದಲ್ಲಿದ್ದರೆ ಮುಂದಿನ ತಲೆಮಾರಿನವರಿಗೂ ಕ್ಷೇತ್ರದ ಇತಿಹಾಸ ಹಾಗೂ ಸಂಭ್ರಮದ ಕ್ಷಣಗಳನ್ನು ತೆರೆದಿಡಲು ಸಾಧ್ಯವಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ,ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ನಳೀಲು ಮಾತನಾಡಿ, ದೇವಸ್ಥಾನದ ಬ್ರಹ್ಮಕಲಶೋತ್ಸವ, ಜಾತ್ರೋತ್ಸವದ ಪ್ರತೀಯೊಂದು ಕಾರ್ಯದಲ್ಲೂ ದೇವರ ಭಕ್ತರಾಗಿ ಕರಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸ್ಮರಣ ಸಂಚಿಕೆ ಹೊರಬರುವಲ್ಲಿ ಸಂಪಾದಕರು,ಛಾಯಾಚಿತ್ರ ಗ್ರಾಹಕರು ಹಾಗೂ ಸುರೇಶ್ ರೈ ಕೊಲ್ಯ ಅವರ ಸಾಕಷ್ಟು ಶ್ರಮ ವಹಿಸಿದ್ದಾರೆ ಅವರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.

ವೇದಿಕೆಯಲ್ಲಿ ದ.ಕ.ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ, ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಕೆ.ಜಯರಾಮ ರೈ  ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಲ್ಮೀಕ ಸ್ಮರಣ ಸಂಚಿಕೆಯ ಸಂಪಾದಕ  ನಾರಾಯಣ ರೈ ಕುಕ್ಕುವಳ್ಳಿ ,ಛಾಯಾಚಿತ್ರ ಗ್ರಾಹಕ ಸುಧಾಕರ ರೈ ಪಾಲ್ತಾಡಿ, ವಿನ್ಯಾಸಕಾರ ಮೋಹನ್ ಗ್ರಾಫಿಕ್ಸ್ ನ ಮಂಜು ಶಾಂತಿಗೋಡು ಅವರನ್ನು ಸನ್ಮಾನಿಸಲಾಯಿತು.

ಅಭಿನಯ ಕಲಾವಿದರು ಉಡುಪಿ ನಾಟಕ ತಂಡದ ಕಲಾವಿದ ಧೀರಜ್ ಬೆಳ್ಳಾರೆ ಅವರನ್ನು ಗೌರವಿಸಲಾಯಿತು. ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ರೈ ನಡುಕೂಟೇಲು ಸ್ವಾಗತಿಸಿದರು.ವಿನೋದ್ ಕುಮಾರ್ ಕೆ.ಎಸ್.ವಂದಿಸಿದರು.ಗಣೇಶ್ ಕೆ.ವಿ.ಚಂದ್ರಾವತಿ ರೈ ಪಾಲ್ತಾಡಿ ನಿರೂಪಿಸಿದರು.

ಸಾವಿರಾರು ಭಕ್ತರಿಂದ ದೇವರ ದರ್ಶನ ,ಅನ್ನಪ್ರಸಾದ ಸ್ವೀಕಾರ
ಶ್ರೀ ಕ್ಷೇತ್ರದ ಜಾತ್ರೋತ್ಸವದಲ್ಲಿ ಸುಮಾರು 3 ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಶ್ರೀ ದೇವರ ದರ್ಶನ ಪಡೆದುಕೊಂಡರು.ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ಮೂರು ದಿನ ಬೆಳಿಗ್ಗೆ ,ಸಂಜೆ ಉಪಹಾರ,ಮಧ್ಯಾಹ್ನ, ರಾತ್ರಿ ಅನ್ನಸಂತರ್ಪಣೆ ನಡೆಯಿತು. ಸುದ್ದಿ ಚಾನೆಲ್‌ನಲ್ಲಿ  ನೇರ ಪ್ರಸಾರ ಮಾಡಲಾಗಿತ್ತು.

ಅಚ್ಚುಕಟ್ಟಾದ ವ್ಯವಸ್ಥೆ
ದೇವಸ್ಥಾನದ ಜಾತ್ರೋತ್ಸವದಲ್ಲಿ ಅನ್ನಸಂತರ್ಪಣೆ, ಪ್ರಸಾದ ವಿತರಣೆ ,ಪಾರ್ಕಿಂಗ್ ವ್ಯವಸ್ಥೆ  ಸೇರಿದಂತೆ ಭಕ್ತಾದಿಗಳಿಗೆ ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು.ವಿವಿಧ ಸಂಘ ಸಂಸ್ಥೆಗಳಿಂದ ಸ್ವಯಂಸೇವಕರು ಪಾಲ್ಗೊಂಡು ಸಹಕರಿಸಿದರು. ವಿಶೇಷವಾಗಿ ಉಳ್ಳಾಲ್ತಿ ಭಕ್ತ ವೃಂದ ಮುಕ್ಕೂರು ತಂಡದ 30 ಸ್ಬಯಂಸೇವಕರು ಜಾತ್ರೆಯ ಪೂರ್ವ ಸಿದ್ದತೆ ಹಾಗೂ ಜಾತ್ರೆಯ ದಿನಗಳಲ್ಲೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.

ಮುಂದೆ ಚಂಪಾಷಷ್ಠಿ ಸಮಯದಲ್ಲಿ ಜಾತ್ರೆ
ಮುಂದೆ ಶ್ರೀ ಕ್ಷೇತ್ರದಲ್ಲಿ ಚಂಪಾಷಷ್ಟಿ ಸಮಯದಲ್ಲಿ ಜಾತ್ರೋತ್ಸವ ನಡೆಸುವ ಕುರಿತು ಕ್ಷೇತ್ರದ ತಂತ್ರಿಗಳಾದ ನಾಗೇಶ ತಂತ್ರಿ ಕೆಮ್ಮಿಂಜೆ ಅವರ ಮಾರ್ಗದರ್ಶನದಲ್ಲಿ ನಿರ್ಣಯಿಸಲಾಗಿದ್ದು,ಫೆಬ್ರವರಿ ತಿಂಗಳಲ್ಲಿ ಪ್ರತಿಷ್ಠಾ ದಿನ ನಡೆಸುವುದಾಗಿ ನಿರ್ಧರಿಸಲಾಯಿತು.

LEAVE A REPLY

Please enter your comment!
Please enter your name here