ನೆಲ್ಯಾಡಿ: ಕೌಕ್ರಾಡಿ-ದೋಂತಿಲ ಶ್ರೀ ಮಹಾವಿಷ್ಣು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜೀರ್ಣೋದ್ದಾರ ಪ್ರಯುಕ್ತ ಪ್ರತಿಷ್ಠಾಪನೆಯಾಗಲಿರುವ ಷಡಾಧಾರ ಮತ್ತು ಗರ್ಭನ್ಯಾಸಗಳನ್ನು ಮೆರವಣಿಗೆ ಮೂಲಕ ಫೆ.24ರಂದು ದೇವಸ್ಥಾನಕ್ಕೆ ತರಲಾಯಿತು.
ಕಾರ್ಕಳದಿಂದ ಶಿಲ್ಪಿಗಳು ತಂದ ಷಡಾಧಾರ ಮತ್ತು ಗರ್ಭನ್ಯಾಸಗಳನ್ನು ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಮುಂಭಾಗದಲ್ಲಿರುವ ಶಿಲ್ಪಾ ಕಾಂಪ್ಲೆಕ್ಸ್ ಎದುರು ಸ್ವಾಗತಿಸಲಾಯಿತು. ಅಲ್ಲಿಂದ ವಾಹನಗಳ ಮೆರವಣಿಗೆ, ಚೆಂಡೆ ವಾದನದೊಂದಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಹೊಸಮಜಲುನಿಂದ ಬಲ್ಯ ರಸ್ತೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ವಾಹನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ವಾಸ್ತು ಬಲಿ, ಷಡಾಧಾರ ಅಧಿವಾಸ, ಇಷ್ಟಕಾನ್ಯಾಸ, ಗರ್ಭನ್ಯಾಸ ನಡೆಯಿತು. ಫೆ.25ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ ನಡೆದು 8.16ರಿಂದ 8.49ರ ಮೀನ ಲಗ್ನ ಶುಭ ಮುಹೂರ್ತದಲ್ಲಿ ಆಧಾರ ಶಿಲಾ ಪ್ರತಿಷ್ಠೆ, ಷಡಾಧಾರ ಪ್ರತಿಷ್ಠೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಶ್ರೀಧಾಮ ಮಾಣಿಲದ ಶ್ರೀ ಕರ್ಮಯೋಗಿ ಯೋಗಿಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
