ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕದಲ್ಲಿ ಆಕ್ಟಿವಾ ಹೋಂಡಾ ಸ್ಕೂಟರ್ ಹಾಗೂ ಕಾರೊಂದರ ಮಧ್ಯೆ ನಡೆದ ಅಪಘಾತದಲ್ಲಿ ಗಾಯಗೊಂಡ ಇಡ್ಕಿದು ಗ್ರಾ.ಪಂ ಮಾಜಿ ಸದಸ್ಯ ಮೃತಪಟ್ಟಿರುವ ಘಟನೆ ಫೆ.24ರಂದು ನಡೆದಿದೆ.
ಕುಳ ಗ್ರಾಮದ ಕಂಪ ನಿವಾಸಿ ಜನಾರ್ದನ ಪೂಜಾರಿ(44ವ.)ಮೃತಪಟ್ಟವರು. ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಜನಾರ್ದನ ಪೂಜಾರಿಯವರು ಎಂದಿನಂತೆ ಬೆಳಿಗ್ಗೆ ಮನೆಯಿಂದ ಹೊರಟು ತನ್ನ ಆಕ್ಟಿವಾದಲ್ಲಿ ವಿಟ್ಲ-ಪುತ್ತೂರು ರಸ್ತೆಯಾಗಿ ಬಂದು ಕಬಕ ವೃತ್ತದ ಬಳಿಯಿಂದ ಕಬಕದ ವಿದ್ಯಾಪುರ ಎಂಬಲ್ಲಿ ನಡೆಯುತ್ತಿರುವ ಕಟ್ಟಡದ ಕೆಲಸಕ್ಕೆಂದು ವಾಹನದಲ್ಲಿ ತೆರಳುತ್ತಿದ್ದರು. ವೃತ್ತದ ಬಳಿ ವಿದ್ಯಾಪುರ ಕಡೆಗೆ ತಿರುಗಿಸುವ ಸಂದರ್ಭದಲ್ಲಿ ಪುತ್ತೂರು ಕಡೆಯಿಂದ ಬಂದ ಕಾರು ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ಸವಾರ ರಸ್ತೆಗೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ಯೆನಾಪೋಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರು ಕಳೆದ ಅವಧಿಯಲ್ಲಿ ಇಡ್ಕಿದು ಗ್ರಾ.ಪಂನ ಕುಳ ಗ್ರಾಮದ 3ನೇ ವಾರ್ಡ್ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸದಸ್ಯರಾಗಿ ಚುನಾಯಿತರಾಗಿದ್ದರು. ಮೃತರು ತಾಯಿ, ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.