ಕೇರಳದಲ್ಲಿ ಬೋನಿಗೆ ಬಿದ್ದ ಚಿರತೆಯನ್ನು ಜಾಂಬ್ರಿ ಪ್ರದೇಶದಲ್ಲಿ ಬಿಟ್ಟ ವದಂತಿ-ಪಾಣಾಜೆ ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ಪ್ರತಿಭಟನೆ

0

ಮೊದಲು ಚಿರತೆ ಹಿಡಿಯಿರಿ,ಚಿರತೆ ತಂದು ಬಿಟ್ಟ ಅಧಿಕಾರಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿ-ಗ್ರಾಮಸ್ಥರ ಆಗ್ರಹ

ಪುತ್ತೂರು:ಕೇರಳದ ಬೇಡಗಂ ಬಳಿಯ ಕೊಳತ್ತೂರಿನಲ್ಲಿ ಬೋನಿನಲ್ಲಿ ಸಿಲುಕಿದ ಚಿರತೆಯನ್ನು ಕೇರಳದ ಅರಣ್ಯ ಇಲಾಖೆಯವರು ಕರ್ನಾಟಕ ಹಾಗೂ ಕೇರಳ ರಾಜ್ಯ ಗಡಿ ಭಾಗದಲ್ಲಿರುವ ಬಂಟಾಜೆ ರಕ್ಷಿತಾರಣ್ಯದಲ್ಲಿ ಬಿಟ್ಟಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದ್ದು ಗಡಿ ಭಾಗದಲ್ಲಿರುವ ಜನರಲ್ಲಿ ಆತಂಕ ಸೃಷ್ಟಿಸಿದ ಬೆನ್ನಲ್ಲೆ ಇಂದು(ಫೆ.25) ಪಾಣಾಜೆ ಗ್ರಾ.ಪಂ ನ ಗ್ರಾಮ ಸಭೆ ನಡೆಯುತ್ತಿದ್ದು,ಗ್ರಾಮಸಭೆಯಲ್ಲಿ ಪಂಚಾಯತ್‌ ಸದಸ್ಯರು ಹಾಗೂ ಗ್ರಾಮಸ್ಥರು ಸಭೆಯನ್ನು ಮೊಟಕುಗೊಳಿಸಿ ಸ್ಥಳದಲ್ಲೇ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.

ಗ್ರಾಮಸ್ಥರು ನಮಗೆ ಗ್ರಾಮಸಭೆಗಿಂತ ಚಿರತೆ ಹಿಡಿಯುವುದೇ ಪ್ರಾಮುಖ್ಯ. ಅದರ ಕಡೆಗೆ ಗಮನ ಕೊಡಿ ಎಂದು ಅಧಿಕಾರಿಗಳಿಗೆ ಆಗ್ರಹಿಸಿದರು. ಕೊಳತ್ತೂರಿನ ಖಾಸಗಿ ವ್ಯಕ್ತಿಯ ಹಿತ್ತಲಿನಲ್ಲಿ ಅರಣ್ಯ ಇಲಾಖೆಯ ಬೋನಿನಲ್ಲಿ ಸಿಲುಕಿಕೊಂಡ ಚಿರತೆಯನ್ನು ರಾತ್ರಿಯೇ ಕೇರಳ ರಾಜ್ಯದ ಅರಣ್ಯ ಇಲಾಖೆಯವರು ಇಲಾಖೆಯ ವಾಹನದಲ್ಲಿ ತಂದು ಕರ್ನಾಟಕ ಹಾಗೂ ಕೇರಳ ರಾಜ್ಯ ಗಡಿ ಭಾಗದಲ್ಲಿರುವ ಬಂಟಾಜೆ ರಕ್ಷಿತಾರಣ್ಯದಲ್ಲಿ ಬಿಟ್ಟು ಹೋಗಿದ್ದಾರೆ ಇದು ಅಧಿಕಾರಿಗಳು ಮಾಡಿದ ಅವಾಂತರ.ಅಧಿಕಾರಿಗಳು ಬಂದು ನೀವು ಚಿರತೆಯನ್ನು ಬಿಟ್ಟದ್ದು ಸತ್ಯವೋ? ಸುಳ್ಳೋ? ಎಂಬುದಾಗಿ ತಿಳಿಸಿ ನಮಗೆ ನ್ಯಾಯ ಕೊಡಿ.ಸಿಸಿಟೀವಿಯಲ್ಲೂ ದಾಖಲಾಗಿದೆ. ಈ ಸಂಗತಿ ಅನೇಕ ಮಾಧ್ಯಮಗಳಲ್ಲಿ ಬಂದಿದೆ ಎಂದು ಗ್ರಾಮಸ್ಥರೋರ್ವರು ಮಾತನಾಡಿದರು.

ಇಲ್ಲಿರುವ ಅಧಿಕಾರಿಗಳಿಗೆ ಆಗಲಿ, ಸ್ಥಳೀಯರಿಗಾಗಲೀ, ಪ್ರಮುಖರಿಗಾಗಲಿ ಯಾವುದೇ ಮಾಹಿತಿ ನೀಡದೆ ಅರಣ್ಯ ಪ್ರದೇಶದಲ್ಲಿ ಚಿರತೆಯನ್ನು ಬಿಟ್ಟಿದ್ದಾರೆ. ಚಿರತೆಯನ್ನು ಹೀಗೆ ಬಿಟ್ಟಂತಹ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸಬೇಕು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಲೇ ಬೇಕು ಅಲ್ಲಿಯವರೆಗೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಗ್ರಾಮಸ್ಥರು ಒಕ್ಕೊರಳ ಧ್ವನಿಗೂಡಿಸಿದರು. ಪಾರೆಸ್ಟ್ ಅಧಿಕಾರಿಗಳ ವಿರುದ್ಧ FIR ಆಗಬೇಕೆಂದು ಒತ್ತಾಯಿಸಿದರು.

LEAVE A REPLY

Please enter your comment!
Please enter your name here