ಮೊಟ್ಟೆತ್ತಡ್ಕ ಆಟೋ ರಿಕ್ಷಾ ನಿಲ್ದಾಣ ಉದ್ಘಾಟನೆ, ವಿವಿಧ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಾಸಕ ರೈ
ಪುತ್ತೂರು:ಅನುದಾನ ಕೊಡಬೇಕು, ಅಭಿವೃದ್ಧಿ ಆಗಬೇಕು ಎಂದು ಚುನಾವಣಾ ಸಮಯದಲ್ಲಿ ಜನತೆಗೆ ಭರವಸೆ ಕೊಟ್ಟಿದ್ದೇವೆ. ಅದರಲ್ಲೂ ಸಿದ್ಧರಾಮಯ್ಯರವರ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಜನತೆಗೆ ಐದು ಗ್ಯಾರಂಟಿಗಳನ್ನು ಕೊಟ್ರು, ಆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿ ಜನತೆಯ ಮೆಚ್ಚುಗೆಯನ್ನು ಪಡೆದು ಇಂದು ಸುಭದ್ರ ಸರಕಾರ ಎಂದು ಜನರು ಆಡಿಕೊಳ್ಳುವಂತಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಹೇಳಿದರು.
ಫೆ.24 ರಂದು ರಾತ್ರಿ ಮೊಟ್ಟೆತ್ತಡ್ಕ ಬೂತ್ ಕಾಂಗ್ರೆಸ್ ಸಮಿತಿ ವತಿಯಿಂದ ಮೊಟ್ಟೆತ್ತಡ್ಕ ಜಂಕ್ಷನ್ನಲ್ಲಿ ರೂ.5 ಲಕ್ಷ ವೆಚ್ಚದಲ್ಲಿ ಶಾಸಕರ ನಿಧಿಯಿಂದ ನಿರ್ಮಿಸಲ್ಪಟ್ಟ ಆಟೋರಿಕ್ಷಾ ನಿಲ್ದಾಣದ ಜೊತೆಗೆ ರೂ.37 ಲಕ್ಷ ಅನುದಾನದಲ್ಲಿ ಕೆಮ್ಮಿಂಜೆ ಪರಿಸರದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ರಿಬ್ಬನ್ ಕತ್ತರಿಸಿ, ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿ, ಚಾಲನೆ ನೀಡಿ ಮಾತನಾಡಿದರು. ಪುತ್ತೂರು, ಬೆಳ್ತಂಗಡಿ, ಸುಳ್ಯದ ಜನರು ಇನ್ನು ಆರ್ಟಿಒ ಲೈಸೆನ್ಸ್ ಪಡೆಯಲು ಮುಂಡೂರಿಗೆ ಬರಬೇಕು, ಕೆಎಂಎಫ್ ಅಭಿವೃಧ್ಧಿ, ಮುಂಡೂರಿನಲ್ಲಿ ಎಲ್ಲಾ ವ್ಯವಸ್ಥೆಗಳಿರುವ ಸುಸಜ್ಜಿತ ಕ್ರೀಡಾಂಗಣ, ರೂ.2 ಕೋಟಿ ವೆಚ್ಚದಲ್ಲಿ ಎತ್ತರದ ರಾಷ್ಟ್ರಧ್ವಜದೊಂದಿಗೆ ಅಭಿವೃದ್ಧಿ, ಪುತ್ತೂರು ಶ್ರೀ ಮಹಾಲೀಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ರೂ.60 ಕೋಟಿ, ಪುತ್ತೂರು ವಿಧಾನಸಭಾ ವ್ಯಾಪ್ತಿಯ ಯುವಕರಿಗೆ ಫಿಟ್ನೆಸ್ ಕಂಡುಕೊಳ್ಳಲು ಜಿಮ್ ಒಳಗೊಂಡ ಅಲ್ಲಲ್ಲಿ ಕ್ರೀಡಾಂಗಣ, 2500 ಬಡವರಿಗೆ ನಿವೇಶನ ಹೀಗೆ ಮುಂದಿನ ದಿನಗಳಲ್ಲಿ ಆಗಲಿದೆ ಎಂದ ಅವರು ಪುತ್ತೂರಿಗೆ ಮೆಡಿಕಲ್ ಕಾಲೇಜು ಬರಬೇಕು ಎನ್ನುವುದು ನಮ್ಮ ಕನಸು. ನಮ್ಮ ಆರೋಗ್ಯದ ಸಮಸ್ಯೆಯ ಹೆಚ್ಚಿನ ಚಿಕಿತ್ಸೆಗೆ ನಾವು ಈಗ ಮಂಗಳೂರನ್ನು ಆಶ್ರಯಿಸಬೇಕಾಗಿದೆ. ಆದರೆ ಪುತ್ತೂರಿನಲ್ಲಿಯೇ 400 ಬೆಡ್ಗಳ ಸೌಕರ್ಯವಿರುವ ವ್ಯವಸ್ಥೆಯನ್ನು ಹೊಂದಿದ್ದಲ್ಲಿ ಪುತ್ತೂರಿನಲ್ಲಿಯೇ ಮೆಡಿಕಲ್ ಕಾಲೇಜು ಆಗಲಿದ್ದು, ಮುಂದಿನ ಏಳನೇ ಬಜೆಟ್ನಲ್ಲಿ ನಾವು ಈ ಕುರಿತಾಗಿ ನಿರೀಕ್ಷೆಯನ್ನು ಹೊಂದಿದ್ದೇವೆ ಎಂದರು.

ಈ ಭಾಗವು ಕಾಂಗ್ರೆಸ್ ಪರವಾಗಿರುವುದರಿಂದ ಅಭಿವೃದ್ಧಿಗೆ ಶಾಸಕರು ಮುಂದಾಗಬೇಕು-ಕಾವು ಹೇಮನಾಥ ಶೆಟ್ಟಿ:
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಈ ಬಾರಿ 2000 ಕೋಟಿ ರೂ. ಅನುದಾನವನ್ನು ಶಾಸಕ ಅಶೋಕ್ ರೈಯವರು ತರಿಸಿರುವುದು ಶ್ಲಾಘನೀಯ. ಕೆಮ್ಮಿಂಜೆ, ಕೂರ್ನಡ್ಕ ಪರಿಸರವು ಕಳೆದ 50 ವರ್ಷಗಳಿಂದ ಮೊಹಮ್ಮದ್ ಆಲಿರವರ ನೇತೃತ್ವದಲ್ಲಿ ಅಭಿವೃದ್ಧಿ ಹೊಂದುತ್ತಾ ಬಂದಿದ್ದು, ಪ್ರಧಾನಿ ಇಂದಿರಾಗಾಂಧಿಯವರು ಇಲ್ಲಿನ ಹೆಲಿಪ್ಯಾಡ್ನಲ್ಲಿ ಬಂದಿಳಿದಿದ್ದರಿಂದ ಈ ಭಾಗಕ್ಕೆ ಇಂದಿರಾ ನಗರ ಎಂದು ನಾಮಾಕರಣವಾಗಿತ್ತು. ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕ್ರಮವಿರಲಿ ಅಥವಾ ಅಶೋಕ್ ರೈಯವರ ಪ್ರೀತಿಗೆ ಈ ಭಾಗದಲ್ಲಿ ಸೇರುವ ಜನರ ಪ್ರಮಾಣ ಬಹಳ ಅಧಿಕ. ಈ ಭಾಗದ ಜನರು ಕಾಂಗ್ರೆಸ್ ಪರವಾಗಿರುವುದರಿಂದ ಈ ಭಾಗದ ಅಭಿವೃದ್ಧಿಗೆ ಶಾಸಕರು ಹೆಚ್ಚು ಮುತುವರ್ಜಿ ವಹಿಸಬೇಕು ಎಂದ ಅವರು ಅಧಿಕಾರ, ಅಂತಸ್ತು ಮುಖ್ಯವಲ್ಲ ಮಾನವೀಯತೆ ಎಂಬ ನೆಲೆಯಲ್ಲಿ ಶಾಸಕರು ಕರ್ತವ್ಯ ನಿರ್ವಹಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಹಿಂದಿನ ಶಾಸಕರು ಹಾಗೂ ಇಂದಿನ ಶಾಸಕರು ಮಾಡಿದ ಕೆಲಸ ಕಾರ್ಯಗಳಿಗೆ ಅಜಗಜಾಂತರ ವ್ಯತ್ಯಾಸವಿದ್ದು ಈ ಭಾಗದ ಸಮಸ್ಯೆ ಹಾಗೂ ಬೇಡಿಕೆಗಳಿಗೆ ಶಾಸಕರು ಸ್ಪಂದಿಸಲಿದ್ದಾರೆ ಎಂದು ಅವರು ಹೇಳಿದರು.
ಕೆಮ್ಮಿಂಜೆ ಭಾಗವು ಕಾಂಗ್ರೆಸ್ ಭದ್ರಕೋಟೆಯಾಗಿ ಮುಂದುವರೆದಿದೆ-ಮಹಮದ್ ಆಲಿ:
ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಆಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಂಗ್ರೆಸ್ ಮಾಡಿದ ಹಲವಾರು ಅಭಿವೃದ್ಧಿ ಕೆಲಸಗಳನ್ನು ತಾವು ಮಾಡಿದ್ದು ಎಂದು ತೋರಿಸಿಕೊಡುವುದರಲ್ಲಿ ಬಿಜೆಪಿಗರು ಸದಾ ಮುಂದು. ನನ್ನ ರಾಜಕೀಯ ಜೀವನದಲ್ಲಿ ನನಗೆ ಇದುವೇ ಜನ್ಮಭೂಮಿ ಹಾಗೂ ಕರ್ಮಭೂಮಿಯಾಗಿದ್ದು, ಕೆಮ್ಮಿಂಜೆ ಭಾಗವು ಕಾಂಗ್ರೆಸ್ ಭದ್ರಕೋಟೆಯಾಗಿ ಈಗಲೂ ಮುಂದುವರೆದಿದೆ. ಸೊರಕೆರವರು ಶಾಸಕರಾಗಿದ್ದಾಗ ಈ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದು ಅದನ್ನು ಈಗ ಅಶೋಕ್ ರೈರವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದ ಅವರು ಈ ಭಾಗದ ಅಭಿವೃದ್ಧಿಗೆ ರೂ. 37ಲಕ್ಷ ಅನುದಾನವು ಬಂದಿದ್ದು, ಕುಡಿಯುವ ನೀರು, ವಿದ್ಯುತ್ ಜ್ಯೋತಿ, 16 ಹೊಸ ಸಂಪರ್ಕ ರಸ್ತೆ, ಶಾಲೆಗಳ, ಅಂಗನವಾಡಿಗಳ ಅಭಿವೃದ್ಧಿ, ಹೆಲಿಪ್ಯಾಡ್ ನಿರ್ಮಾಣ, ರೇಷನ್ ಅಂಗಡಿ, ಜನತಾ ನಿವೇಶನ, ಹಿಂದು ರುದ್ರಭೂಮಿ, ಸ್ಮಶಾನ, ರಕ್ತ ಚಾಮುಂಡೇಶ್ವರಿ ಗುಡಿಗೆ ನೆರವು, ಶೌಚಾಲಯ ನಿರ್ಮಾಣ ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂದು ಅವರು ಹೇಳಿದರು.
ಮೊಟ್ಟೆತ್ತಡ್ಕದ ಇಂದಿರಾ ಗಾಂಧಿ ಶೈಲಾ ಪೈ-ಮಹಮದ್ ಬಡಗನ್ನೂರು:
ಅಕ್ರಮ ಸಕ್ರಮ ಸಮಿತಿ ಸದಸ್ಯ ಮೊಹಮ್ಮದ್ ಬಡಗನ್ನೂರು ಮಾತನಾಡಿ, ರಾಜ್ಯದ ವಿವಿಧ ಭಾಗಗಳಿಂದ ಪುತ್ತೂರನ್ನು ಜನರು ಗುರುತಿಸುವ ಕೆಲಸವನ್ನು ಶಾಸಕ ಅಶೋಕ್ ರೈಯವರು ಅಭಿವೃದ್ಧಿ ಕೆಲಸ ಮಾಡುವ ಮೂಲಕ ತೋರಿಸಿಕೊಟ್ಟಿದ್ದಾರೆ ಮಾತ್ರವಲ್ಲ ಜನರು ಪುತ್ತೂರಿನ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ. ಅಶೋಕ್ ರೈಯವರಲ್ಲಿ ಇಚ್ಛಾಶಕ್ತಿ, ದೂರದೃಷ್ಟಿತ್ವದ ಚಿಂತನೆ ಬಹಳಷ್ಟಿದೆ. ನಾವು ಕಟ್ಟಕಡೆಯ ವ್ಯಕ್ತಿಗೆ ಆದ್ಯತೆ ಕೊಟ್ಟಾಗ ಗ್ರಾಮ ಸ್ವರಾಜ್ ಆಗುತ್ತದೆ. ಮೊಟ್ಟೆತ್ತಡ್ಕದ ಇಂದಿರಾ ಗಾಂಧಿ ಈ ಭಾಗದ ನಗರಸಭೆ ಸದಸ್ಯೆ ಶೈಲಾ ಪೈಯವರಾಗಿದ್ದಾರೆ. ಯಾಕೆಂದರೆ ತನ್ನ ಕ್ಷೇತ್ರದ ಅಭಿವೃದ್ಧಿಗೆ ಅವರು ಸದಾ ಧ್ವನಿಗೂಡಿಸಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಪ್ರಸನ್ನ ಕುಮಾರ್ ಶೆಟ್ಟಿ, ಸ್ಥಳೀಯ ನಗರಸಭಾ ಸದಸ್ಯೆ ಶೈಲಾ ಪೈ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅನಿತಾ ಹೇಮನಾಥ ಶೆಟ್ಟಿ, ತಾಲೂಕು ಕಾಂಗ್ರೆಸ್ ಸೇವಾದಳ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ, ಕಾಂಗ್ರೆಸ್ ಕಾರ್ಯದರ್ಶಿ ದಾಮೋದರ್ ಭಂಡಾರ್ಕರ್, ಫಾರೂಕ್ ಬಾಯಬೆ, ನಗರಸಭಾ ನಾಮ ನಿರ್ದೇಶಿತ ಸದಸ್ಯ ಬಶೀರ್ ಪರ್ಲಡ್ಕ, ಸ್ಥಳೀಯ ಬೂತ್ ಸಮಿತಿ ಅಧ್ಯಕ್ಷರಾದ ರೊನಾಲ್ಡ್ ಮೊಂತೇರೊ, ರವೀಂದ್ರ ಎ. ಸಹಿತ ಹಲವರು ಉಪಸ್ಥಿತರಿದ್ದರು. ಕಾಂಗ್ರೆಸ್ ಮುಖಂಡರಾದ ಸುರೇಂದ್ರ ಎ, ಅಬ್ದುಲ್ಲ ಕೆ, ಸುರೇಶ್ ಪೂಜಾರಿ, ನಿಸಾರ್ ಗೋಲೆಕ್ಸ್ ಮೊಟ್ಟೆತ್ತಡ್ಕ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಚಿದಾನಂದ, ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್, ಕಾರ್ಯದರ್ಶಿ ಕಿರಣ್, ಜೊತೆ ಕಾರ್ಯದರ್ಶಿ ಇಸಾಖ್, ಸದಸ್ಯರಾದ ದಿನೇಶ್, ಹನೀಫ್ ಕಾಪಿಕಾಡ್, ರಹಮತ್, ಯೋಗೀಶ್, ಯಶ್ವಂತ್, ಯತೀಶ್, ಜಬ್ಬಾರ್, ವಸಂತ್, ಮೋನಪ್ಪ ಸಹಿತ ಹಲವರು ಸಹಕರಿಸಿದರು. ರಫೀಕ್ ಎಂ.ಕೆ ಸ್ವಾಗತಿಸಿದರು. ವಸಂತ ಪೂಜಾರಿ ಮಲಾರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ರೂ.3.19 ಕೋಟಿ ವೆಚ್ಚದಲ್ಲಿ ಮಾಣಿ-ಸಂಪಾಜೆ ಚತುಷ್ಪಥ ರಸ್ತೆ..
ಲೋಕೋಪಯೋಗಿ ಇಲಾಖಾ ಸಚಿವ ಸತೀಶ್ ಜಾರಕಿಹೊಳಿರವರು ಪುತ್ತೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯು ಚತುಷ್ಪಥ ರಸ್ತೆಯನ್ನಾಗಿಸಲು ಬೇಡಿಕೆ ಇಟ್ಟಿದ್ದೆವು. ಇದಕ್ಕೆ ಎಲ್ಲವೂ ತಯಾರಿಯಾಗಿದ್ದರೂ ಡಿಪಿಆರ್ ಮಾಡ್ಬೇಕಿದ್ರೆ ಕೇಂದ್ರ ಸರಕಾರದವರು ಮಾಡ್ಬೇಕು. ಕೇಂದ್ರ ಸರಕಾರದವರು ಡಿಪಿಆರ್ ಮಾಡಲು ಟೆಂಡರ್ ಕರೆದಿದ್ದರು. ಕರೆದು ಒಂದು ವರ್ಷ ಆಯಿತು. ಆದರೆ ನಾವು ನಿರಂತರ ಅವರ ಕಛೇರಿಗೆ ಹೋಗಿ ಡಿಪಿಆರ್ ಟೆಂಡರ್ ಮಾಡಿಕೊಡಿ ಅಂತ ವಿನಂತಿ ಮಾಡಿಕೊಂಡಿದ್ದೇವು. ಈ ಬಗ್ಗೆ ಸಂಸದ ಬೃಜೇಶ್ ಚೌಟರವರಲ್ಲಿಯೂ ವಿನಂತಿ ಮಾಡಿಕೊಂಡಿದ್ದೇವು. ಆದರೆ ಈವರೆಗೆ ಅಧಿಕಾರಿಗಳು ಈ ಬಗ್ಗೆ ಡೆಲ್ಲಿಗೆ ಕಳುಹಿಸಿದ್ದೇವೆ ಎಂದೇಳಿದ ಹೊರತು ಯಾವುದೇ ಕೆಲಸವಾಗಿಲ್ಲ. ಇದೀಗ ಸಚಿವ ಸತೀಶ್ ಜಾರಕಿಹೊಳಿರವರು ಈ ಕೆಲಸವನ್ನು ಮಾಡಿದ್ದು ಇದೀಗ ಮಾಣಿ-ಸಂಪಾಜೆ ರಸ್ತೆಯು ಡಿಪಿಆರ್ಗೆ ರೂ.3.19 ಕೋಟಿ ಹಣವನ್ನು ಅನುಮೋದನೆಗೊಳಿಸಿರುತ್ತಾರೆ ಎಂದು ಶಾಸಕ ಅಶೋಕ್ ರೈಯವರು ಹೇಳಿದರು.
ಕುಡ್ಲಡ್ದ್ 80 ರುಪಾಯಿಗ್ ಬಂಗುಡೆ ಅಣ್ಣೆರೆ.. ಕಂಡನಿ ಬನ್ನಗ ಕಜಿಪ್ ರೆಡಿ..ಬಸ್ಸು ಫ್ರೀಯತ್ತ..
ಓರ್ವ ಮಹಿಳೆಯು ಮೀನು ಬೇಕೆಂದರೆ ಪುತ್ತೂರಿನಿಂದ ಮಂಗಳೂರಿಗೆ ಪ್ರಯಾಣಿಸಿ ಒಂದು ಕೆ.ಜಿ ಬಂಗುಡೆಯನ್ನು ರೂ.80ಗೆ ಖರೀದಿಸಿ ಹಿಂತಿರುಗುತ್ತಿದ್ದರು. ನಾನು ಆ ಮಹಿಳೆಯತ್ರ, ಯಾಕಕ್ಕಾ ಮಂಗಳೂರಿನಿಂದ ಮೀನು ತರುವುದು ಎಂದು?, ಆಗ ಆ ಮಹಿಳೆ, ಅಶೋಕಣ್ಣ, ಪುತ್ತೂರ್ಡ್ ಮೀನ್ಗ್ ರೇಟ್ ಜಾಸ್ತಿಯತ್ತ. ಆಯ್ಕ್ ಅರೇಪು ಕಡೆದ್ ದೀದ್ ಬೊಲ್ಪುದ ಬಸ್ಸುಡ್ ಸೀದಾ ಸ್ಟೇಟ್ಬ್ಯಾಂಕ್ ಪೋದು ಮೀನ್ ಪತೊಂದ್ ಬರ್ಪುನೆ ಅಣ್ಣ. ದಾಯೆಕ್ ಪಂಡ ನಮಕ್ಕ್ ಬಸ್ಸು ಫ್ರೀಯತ್ತೆ. ಮಧ್ಯಾಹ್ನ ಕಂಡನಿ ವನಸ್ಗ್ ಬನ್ನಾಗ ಎನ್ನ ಕಜಿಪ್ ರೆಡಿ ಎಂದರು ಆಕೆ. ಅದಲ್ಲದೆ ಧಾರ್ಮಿಕ ಕ್ಷೇತ್ರಗಳಲ್ಲಿ ಇಂದು ಬಹಳ ಭಕ್ತಾಧಿಗಳು ಸೇರುತ್ತಿದ್ದಾರೆ. ಎಲ್ಲಿವರೆಗೆ ಅಂದ್ರೆ ಬಸ್ಸಿನ ಚಾಲಕನನ್ನು ಹೊರ ದಬ್ಬಿ ಮಹಿಳೆಯರು ತಮ್ಮ ಸೀಟನ್ನು ಅಮಾನತು ಮಾಡಿಕೊಳ್ಳುವಲ್ಲಿವರೆಗೆ ಬಂದಿದೆ. ಯಾಕಂದ್ರೆ ಬಸ್ಸು ಫ್ರೀ, ಊಟ ಫ್ರೀ, ಎಲ್ಲವೂ ಕಾಂಗ್ರೆಸ್ ಕೊಡುಗೆ ಅಲ್ವೆ, ಮತ್ತೇನು ಬೇಕಾಗಿದೆ ನಿಮಗೆ.
-ಅಶೋಕ್ ಕುಮಾರ್ ರೈ, ಶಾಸಕರು
ಸನ್ಮಾನ/ಅಭಿನಂದನೆ..
ಮೊಟ್ಟೆತ್ತಡ್ಕ ಬಸ್ಸು ತಂಗುದಾಣದ ಜೊತೆಗೆ ಕ್ಷೇತ್ರಕ್ಕೆ ರೂ.37 ಲಕ್ಷ ಅನುದಾನವನ್ನು ನೀಡಿದ ಶಾಸಕ ಅಶೋಕ್ ಕುಮಾರ್ ರೈಯವರಿಗೆ, ಅನುದಾನವನ್ನು ತರಿಸುವಲ್ಲಿ ಸಹಕರಿಸಿದ ಸ್ಥಳೀಯ ನಗರಸಭಾ ಸದಸ್ಯೆ ಶೈಲಾ ಪೈ ಹಾಗೂ ಕಾಂಗ್ರೆಸ್ ಮುಖಂಡ ರಫೀಕ್ ಎಂ.ಕೆರವರುಗಳನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಜೊತೆಗೆ ನೂತನ ಬಸ್ಸು ತಂಗುದಾಣ ನಿರ್ಮಿಸುವಲ್ಲಿ ಸ್ಥಳದಲ್ಲಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ಬೇರೇನೆ ಜಾಗದಲ್ಲಿ ಅವನ್ನು ಅಳವಡಿಸಲು ಸಹಕರಿಸಿರುವ ವಿದ್ಯುತ್ ಗುತ್ತಿಗೆದಾರ ಶ್ರೀ ವಿಷ್ಣು ಇಲೆಕ್ಟ್ರಿಕಲ್ಸ್ನ ಸುಧಾಕರ್ರವರಿಗೆ ಶಾಸಕ ಅಶೋಕ್ ರೈಯವರು ಶಾಲು ಹೊದಿಸಿ ಅಭಿನಂದಿಸಿದರು.