ಪುತ್ತೂರು: ಮುಖ್ಯರಸ್ತೆಯ ಸೋಜಾ ಮೆಟಲ್ ಮಾರ್ಟ್ ಮಾಲಕ ಅಲೆಕ್ಸ್ ಮಿನೇಜಸ್(69ವ.) ರವರು ಹೃದಯಾಘಾತದಿಂದ ಫೆ.27 ರಂದು ರಾತ್ರಿ ನಿಧನ ಹೊಂದಿದ್ದಾರೆ.
ದರ್ಬೆ ಸಿ.ಟಿ.ಒ ರಸ್ತೆ ನಿವಾಸಿ ಉದ್ಯಮಿ ಅಲೆಕ್ಸ್ ಮಿನೇಜಸ್ ರವರು ಮನೆಯಲ್ಲಿ ಇದ್ದ ಸಂದರ್ಭ ತೀವ್ರ ಎದೆ ನೋವಿಗೆ ತುತ್ತಾಗಿದ್ದ ಸಂದರ್ಭದಲ್ಲಿ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ ಆ ವೇಳೆಗಾಗಲೇ ಅವರು ಅಸು ನೀಗಿದ್ದರು.
ಮೃತ ಅಲೆಕ್ಸ್ ಮಿನೇಜಸ್ ರವರು ಸೋಜಾ ಮೆಟಲ್ ಮಾರ್ಟ್ ಸಂಸ್ಥೆಯನ್ನು ಸುಮಾರು 40 ವರ್ಷಕ್ಕೂ ಮಿಕ್ಕಿ ಮುನ್ನೆಡೆಸುತ್ತಿದ್ದು, ಸಾರ್ವಜನಿಕ ವಲಯದಲ್ಲಿ ನಗುಮುಖದ ಸೇವೆಯೊಂದಿಗೆ ಗ್ರಾಹಕ ಸ್ನೇಹಿಯಾಗಿ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಅಲೆಕ್ಸ್ ಮಿನೇಜಸ್ ರವರು ಕೊಡುಗೈ ದಾನಿಯಾಗಿದ್ದು, ಮಾಯಿದೆ ದೇವುಸ್ ಚರ್ಚ್ ನ ಡೊನ್ ಬೊಸ್ಕೊ ಕ್ಲಬ್ ಹಾಗೂ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿಯ ಸ್ಥಾಪಕ ಸದಸ್ಯರಾಗಿದ್ದರು.
ಆದರೆ ಇಲ್ಲಿನ ಎರಡು ಸಂಘಟನೆಗಳಲ್ಲಿ ಗುರುತಿಸಿಕೊಳ್ಳಲು ಓರ್ವ ಸದಸ್ಯನಿಗೆ ಕಷ್ಟಸಾಧ್ಯವಾಗಿದ್ದರೂ, ಜನಾನುರಾಗಿಯಾಗಿರುವ ಅಲೆಕ್ಸ್ ಮಿನೇಜಸ್ ರವರಿಗೆ ಮಾತ್ರ ಎರಡೂ ಸಂಘಟನೆಗಳಲ್ಲಿ ಸದಸ್ಯರಾಗಿ ಗುರುತಿಸಿಕೊಳ್ಳಲು ಅವಕಾಶವನ್ನು ಮಾಡಿಕೊಡಲಾಗಿತ್ತು. ಅಲೆಕ್ಸ್ ಮಿನೇಜಸ್ ರವರು ಕೇವಲ ಧಾರ್ಮಿಕ ಕ್ಷೇತ್ರದಲ್ಲಿ ಮಾತ್ರವಲ್ಲ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲೂ ಅವರು ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿದ್ದಾರೆ.
ಮೃತರು ಪತ್ನಿ ನಿವೃತ್ತ ಶಿಕ್ಷಕಿ ಡೊರತಿ ಮಿನೇಜಸ್, ಪುತ್ರ ಎಂಬಿಎ ಪದವೀಧರ ಪ್ರಸ್ತುತ ಸೋಜಾ ಮೆಟಲ್ ಮಾರ್ಟ್ ಸಂಸ್ಥೆಯನ್ನು ಮುನ್ನೆಡೆಸುತ್ತಿರುವ ದೀಪಕ್ ಮಿನೇಜಸ್, ಪುತ್ರಿಯರಾದ ದೀಪ್ತಿ ಮಿನೇಜಸ್, ದಿವ್ಯ ಮಿನೇಜಸ್, ಸೊಸೆ ಶರಲ್ ಮಿನೇಜಸ್, ಅಳಿಯಂದಿರಾದ ಅರುಣ್ ಕ್ರಾಸ್ತಾ, ರೇಶಲ್ ರೇಗೊ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ