ನುಡಿದಂತೆ ನಡೆವ ಸಹಕಾರಿ ಧುರೀಣರು-ನಳಿನ್ ಕುಮಾರ್ ರೈ
ಪುತ್ತೂರು: 31 ವರ್ಷಗಳ ಕಾಲ ಸಹಕಾರಿ ಕ್ಷೇತ್ರದ ದಿಗ್ಗಜನಾಗಿ ದ.ಕ.ಜಿಲ್ಲೆಯಲ್ಲಿ ಸಹಕಾರಿ ರಂಗವನ್ನು ಪರಿವರ್ತನೆ ಮಾಡಿದ ದ.ಕ.ಜಿಲ್ಲೆಯ ಸಹಕಾರಿ ರಂಗದಲ್ಲಿ ಅತೀ ಹೆಚ್ಚು ಪ್ರಶಸ್ತಿ ಪಡೆದುಕೊಂಡಿರುವ ಏಕೈಕ ಸಾಧನಾಶೀಲ ವ್ಯಕ್ತಿ ಡಾ|ರಾಜೇಂದ್ರ ಕುಮಾರ್, ಸಹಕಾರಿ ಕ್ಷೇತ್ರದಲ್ಲಿ ಅಜಾತಶತ್ರುವಾಗಿ ಬೆಳೆದ ರಾಜೇಂದ್ರಕುಮಾರ್‌ರವರು ನುಡಿದಂತೆ ನಡೆದ ಸಹಕಾರಿ ಧುರೀಣರಾಗಿದ್ದಾರೆ ಎಂದು ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಎಸ್‌ಸಿಆರ್ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಗೊಂಡ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಹಾಗೂ ದ.ಕ. ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆಗೊಂಡ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರಿಗೆ ಪುತ್ತೂರು ಉಪವಿಭಾಗದ ಸಹಕಾರಿ ಬಂಧುಗಳ ವತಿಯಿಂದ ನಡೆದ ಅಭಿವಂದನಾ ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದ ಅವರು ರಾಜ್ಯದಲ್ಲೇ ರೈತರ ಆತ್ಮಹತ್ಯೆ ಇಲ್ಲದ ಜಿಲ್ಲೆ ಎಂದರೆ ಅದು ದ.ಕ.ಜಿಲ್ಲೆ, ಇಲ್ಲಿ ಸಹಕಾರಿ ರಂಗ ರೈತರ ಜತೆಗೆ ಹೆಜ್ಜೆ ಹಾಕಿದ್ದರಿಂದ ರೈತರು ಆತ್ಮಹತ್ಯೆ ಮಾಡುವ ಪ್ರಸಂಗವೇ ಬರಲಿಲ್ಲ ಎಂದರು.

ಸಹಕಾರಿ ಚಳುವಳಿಯಿಂದ ಹಳ್ಳಿಯ ಪ್ರತೀ ರೈತ ಕೂಡ ಬ್ಯಾಂಕ್‌ನಲ್ಲಿ ಅಕೌಂಟ್ ಹೊಂದಲು ಕಾರಣವಾಗಿದೆ. ಪ್ರಧಾನ ಮಂತ್ರಿಯವರ ಜನ್‌ಧನ್ ಯೋಜನೆ ಜಾರಿಯಾಗುವ ಹಂತದಲ್ಲಿ ದ.ಕ.ಜಿಲ್ಲೆಯಲ್ಲಿ ಶೇ.90 ಕೃಷಿಕರು ಅಕೌಂಟ್ ಹೊಂದಿದ್ದು ತಿಳಿದುಬಂದಿದೆ. ಜಿಲ್ಲೆಯಲ್ಲಿ ಇದಕ್ಕೆಲ್ಲಾ ಕಾರಣ ಸಹಕಾರಿ ರಂಗ ಹಾಗೂ ಇದರ ನಾಯಕತ್ವ ವಹಿಸಿಕೊಂಡ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಎಂದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನವೋದಯ ಸ್ವಸಹಾಯ ಗುಂಪುಗಳು ಇಡೀ ರಾಜ್ಯದಲ್ಲಿ ಪಸರಿಸಿದೆ. ಸೀಶಕ್ತಿ ಗುಂಪುಗಳಿಂದ ಮಹಿಳೆಯರ ಜೀವನದಲ್ಲಿ ಬೆಳಕು ಕಂಡಿದೆ. ಇದರಿಂದ ಉದ್ಯೋಗದ ನಿರ್ಮಾಣ ಆಗಿದೆ. ಆದುದರಿಂದ ರಾಜೇಂದ್ರ ಕುಮಾರ್‌ರವರು ಸಹಕಾರಿ ಜಿಲ್ಲೆಯ ನಕ್ಷತ್ರದಂತೆ ಮಿಂಚುತ್ತಿದ್ದಾರೆ ಎಂದ ನಳೀನ್ ಕುಮಾರ್ ಕಟೀಲ್ ಅವರು ಸಹಕಾರಿ, ಸಾಮಾಜಿಕ, ಧಾರ್ಮಿಕ ರಂಗಕ್ಕೆ ನಾನು ಬೆಂಬಲ ಕೊಟ್ಟಿದ್ದೇನೆ, ರಾಜಕೀಯ ರಂಗದಲ್ಲಿ ಅವರ ವಿಚಾರಧಾರೆ ಹಾಗೂ ನನ್ನ ವಿಚಾರಧಾರೆ ಭಿನ್ನವಾಗಿತ್ತು. ನಾನು ಸಂಸದನಾಗಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಎಲ್ಲ ಸಹಕಾರಿಗಳ ಗೌರವಕ್ಕೆ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಸಹಕಾರಿ ಕ್ಷೇತ್ರವನ್ನು ಮುನ್ನಡೆಸುತ್ತಿರುವ ರಾಜೇಂದ್ರ ಕುಮಾರ್ ಅವರು ನಾನು ಸಂಸದನಾಗುವ ಮೊದಲು, ಸಂಸದನಾದ ಸಂದರ್ಭ ಮತ್ತು ಇದೀಗ ಮಾಜಿ ಸಂಸದನಾಗಿರುವಾಗಲೂ ನನಗೆ ಬೆಂಬಲವಾಗಿ ನಿಂತವರು, ರಾಜಕೀಯವಾಗಿ ನಾನು ಅವರ ವಿರೋಧಿಯಾಗಿದ್ದರೂ ಸಹಕಾರಿ ಕ್ಷೇತ್ರದಲ್ಲಿ ಅಜಾತಶತ್ರುವಾಗಿ ಮುನ್ನಡೆಯುತ್ತಿರುವ ಅವರ ಸಹಕಾರಿ ಕ್ಷೇತ್ರದ ಸೇವಾ ಕಾರ್ಯಕ್ಕೆ ನನ್ನ ಬೆಂಬಲ ಯಾವತ್ತೂ ಇದೆ ಎಂದು ಹೇಳಿದರು. ರಾಜೇಂದ್ರ ಕುಮಾರ್ ಅವರಂತೆ ಅವರ ಕೃಪಾಶೀರ್ವಾದ, ಮಾರ್ಗದರ್ಶನದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನಡೆಯುತ್ತಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಸಾಮಾನ್ಯ ಹಳ್ಳಿಯಿಂದ ಬಂದು ಜಿಲ್ಲೆಯಲ್ಲಿ ಸಹಕಾರಿ ರಂಗದ ಧುರೀಣನಾಗಿ ಮುಂದೆ ಬಂದು ಪುತ್ತೂರಿಗೆ ಕೀರ್ತಿ ತಂದಿದ್ದಾರೆ. ಸಹಕಾರಿ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ ವ್ಯಕ್ತಿಯಾಗಿರುವ ಶಶಿಕುಮಾರ್ ರೈ ಹಲವು ದೇವಸ್ಥಾನದ ಬ್ರಹ್ಮಕಲಶ, ಜೀರ್ಣೋದ್ಧಾರ, ಕಾರ್ಯಕ್ರಮದ ನೇತೃತ್ವ ವಹಿಸಿ ಯಶಸ್ವಿಯಾಗಿ ಮುನ್ನಡೆಸಿರುವ ಇವರ ಕೀರ್ತಿ ದೇಶದಾದ್ಯಂತ ಪಸರಿಸಲಿ, ರಾಜೇಂದ್ರ ಕುಮಾರ್ ಮತ್ತು ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಸಹಕಾರಿ ರಂಗದ ಎರಡು ಕಣ್ಣುಗಳಾಗಿದ್ದು ಇವರಿಬ್ಬರ ಸಾಧನೆ ನಿರಂತರ ಮುಂದುವರಿಯಲಿ ಎಂದು ಹಾರೈಸಿದರು.
ಇವರಿಬ್ಬರಿಗೆ ಅಭಿನಂದನೆ ಮಾಡುವ ಮೂಲಕ ಸಹಕಾರಿ ರಂಗಕ್ಕೆ ಹೆಚ್ಚಿನ ಶಕ್ತಿ-ರಮಾನಾಥ ರೈ:
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಜಿ ಸಚಿವ ರಮಾನಾಥ ರೈ ಮಾತನಾಡಿ ಡಾ|ರಾಜೇಂದ್ರ ಕುಮಾರ್ ಸಹಕಾರಿ ಕ್ಷೇತ್ರದಲ್ಲಿ ಉತ್ತುಂಗ ಸ್ಥಾನವನ್ನು ಸಾಧಿಸಿದ್ದಾರೆ. ಸುದೀರ್ಘ ಅವಧಿಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಎಲ್ಲಾ ಸಮುದಾಯದ ಜತೆಯೂ ಪ್ರೀತಿ ಇಟ್ಟುಕೊಂಡ ಇವರು ದ.ಕ.ಜಿಲ್ಲೆ ಅಲ್ಲದೆ ರಾಜ್ಯದಲ್ಲಿಯೂ ತನ್ನ ಛಾಪು ಮೂಡಿಸಿದವರಾಗಿದ್ದಾರೆ ಎಂದರು. ಶಶಿಕುಮಾರ್ ರೈ ಬಾಲ್ಯೊಟ್ಟುರವರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರಭಾವಿ ನಿರ್ದೇಶಕರಾಗಿ ಕೆಲಸ ಮಾಡಿದವರು. ಸಹಕಾರಿ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಶಶಿಕುಮಾರ್ ರೈರವರು ಸಹಕಾರಿ ಅಲ್ಲದೆ ಧಾರ್ಮಿಕ, ಸಾಮಾಜಿಕ ರಂಗದಲ್ಲಿಯೂ ಕೆಲಸ ಕಾರ್ಯ ಮಾಡುತ್ತಿದ್ದಾರೆ ಎಂದ ರಮಾನಾಥ ರೈ ಒಂದು ಕಾಲದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಸಾಲ ಕೊಡಲು ಕಷ್ಟವಾಗುವ ಪರಿಸ್ಥಿತಿ ಇತ್ತು. ಸಾಲ ಕೊಟ್ಟ ಬಳಿಕ ಕ್ಲಪ್ತ ಸಮಯದಲ್ಲಿ ಮರುಪಾವತಿ ಆದರೆ ಮಾತ್ರ ಸಂಘಗಳು ಒಳ್ಳೆಯ ಸ್ಥಿತಿಯಲ್ಲಿ ಬೆಳೆಯುತ್ತದೆ. ಸಹಕಾರಿ ಸಂಘಗಳು ಆರಂಭವಾಗಿ ಇಂದು ಕೃಷಿಕರ ಆರ್ಥಿಕ ಸ್ಥಿತಿಯೂ ಸುಧಾರಿಸಿದೆ ಎಂದು ಹೇಳಿದರಲ್ಲದೇ ಇವರಿಬ್ಬರಿಗೆ ಅಭಿನಂದನೆ ಮಾಡುವ ಮೂಲಕ ಸಹಕಾರಿ ರಂಗಕ್ಕೆ ಇನ್ನಷ್ಟು ಹೆಚ್ಚಿನ ಶಕ್ತಿ ಬರುತ್ತದೆ ಎಂದರು.
ಭ್ರಷ್ಟಾಚಾರ ನಡೆಸದೆ ಸಹಕಾರಿ ಬ್ಯಾಂಕ್‌ನ್ನು ಮುನ್ನಡೆಸಿದ ವ್ಯಕ್ತಿ-ಅಶೋಕ್ ಕುಮಾರ್ ರೈ:
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ರಾಜೇಂದ್ರ ಕುಮಾರ್‌ರವರು ಎಲ್ಲರೊಂದಿಗೂ ಒಡನಾಟ ಹೊಂದಿದವರು. ಅವರು ಬೆಳೆಯುವುದರ ಜೊತೆಗೆ ಸಮಾಜವನ್ನು ಬೆಳೆಸಿದ್ದಾರೆ. ಸಹಕಾರಿ ರಂಗವನ್ನು ಅದ್ಭುತವಾಗಿ ಬೆಳೆಸಿ ಎತ್ತರಕ್ಕೆ ಕೊಂಡುಹೋದ ವ್ಯಕ್ತಿ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನೇತೃತ್ವ ವಹಿಸಿ ಯಾವುದೇ ಭ್ರಷ್ಟಾಚಾರವಿಲ್ಲದೆ ಮುನ್ನಡೆಸಿದವರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಬ್ಯಾಂಕ್‌ನಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಎಂದು ಇಡಿ ಅಧಿಕಾರಿಗಳೇ ಸರ್ಟಿಫಿಕೇಟ್ ನೀಡಿದ್ದಾರೆ ಎಂದರು. ನನ್ನ ಆತ್ಮೀಯರಾದ ಶಶಿಕುಮಾರ್ ರೈರವರು ರಾಜೇಂದ್ರ ಕುಮಾರ್ ರೈ ಅವರ ಬಲಗೈ ಬಂಟನಾಗಿದ್ದಾರೆ. ಸಹಕಾರಿ ಅಲ್ಲದೆ ಧಾರ್ಮಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವು ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶ ಕಾರ್ಯಕ್ರಮಗಳ ಜವಾಬ್ದಾರಿಯಲ್ಲಿ ಕಾಣುತ್ತಿದ್ದಾರೆ ಎಂದರು. ದ.ಕ.ಜಿಲ್ಲೆಯಲ್ಲಿ ಅಡಿಕೆ ಪ್ರಧಾನ ಕೃಷಿಯಾಗಿದೆ. ಕೃಷಿಕರ ಕೃಷಿ ಸಾಲಕ್ಕೆ ನೆರವು ನೀಡುವ ಮೂಲಕ ಬ್ಯಾಂಕ್ ಮಹತ್ತರ ಪಾತ್ರ ವಹಿಸುತ್ತದೆ. ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾದರೆ ಬ್ಯಾಂಕ್‌ನಲ್ಲಿ ವ್ಯವಹಾರ ಹೆಚ್ಚಾಗಿ ಬ್ಯಾಂಕ್ ಕೂಡ ಅಭಿವೃದ್ಧಿಯಾಗುತ್ತದೆ. ಪುತ್ತೂರಿನಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇನೆ. ಹಲವು ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ. ಇದರ ಜೊತೆಗೆ ಪುತ್ತೂರು ಟೂರಿಸಂ ಆಗಿ ಬೆಳೆಯಬೇಕು. ಇದರಿಂದ ಬ್ಯಾಂಕ್ ಉದ್ಯಮ ಬೆಳೆಯುತ್ತದೆ ಎಂದರು. ಅಭಿನಂದನೆ ಸ್ವೀಕರಿಸಿದ ಇಬ್ಬರಿಗೂ ದೇವರು ಆಯುರಾರೋಗ್ಯ ನೀಡಲಿ ಎಂದು ಹಾರೈಸಿದರು.
ದ.ಕ.ಜಿಲ್ಲೆಯ ಸಹಕಾರಿ ರಂಗದ ಅನಭಿಷಿಕ್ತ ಸಾಮ್ರಾಟ-ಡಾ| ಶಾಮ್ ಭಟ್:
ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಶಾಮ ಭಟ್ ಮಾತನಾಡಿ ಕಳೆದ 3 ದಶಕಗಳಿಂದ ದ.ಕ.ಜಿಲ್ಲೆಯ ಅನಭಿಷಿಕ್ತ ಸಾಮ್ರಾಟನಾಗಿ ಮೆರೆಯುತ್ತಿರುವ ವ್ಯಕ್ತಿ ಎಂದರೆ ರಾಜೇಂದ್ರ ಕುಮಾರ್‌ರವರು. ಪ್ರಜಾಸತ್ತಾತ್ಮಕವಾಗಿ ಆಯ್ಕೆಗೊಂಡು ಸಹಕಾರಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಸರಕಾರಿ ಅಧಿಕಾರಿಗಳನ್ನು ಗೌರವಯುತವಾಗಿ ನೋಡಿಕೊಂಡು ಕೆಲಸ ಮಾಡಿಸುತ್ತಿದ್ದರು. ಇವತ್ತು ಅವರನ್ನು ಅಭಿನಂದಿಸುವ ಸಂದರ್ಭ ಬಂದಿದೆ ಎಂದರು. ಶಶಿಕುಮಾರ್ ರೈರವರು ಕಳೆದ 10 ವರ್ಷಗಳಿಂದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾರೆ. ಸಹಕಾರಿ ಅಲ್ಲದೆ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಸಹಕಾರಿ ರಂಗದಲ್ಲಿ ರಾಜೇಂದ್ರ ಕುಮಾರ್‌ರವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದಾರೆ ಮುಂದಿನ ದಿನಗಳಲ್ಲಿ ಇವರ ಸಾಧನೆಗಳು ಮುಂದುವರಿಯಲಿ ಎಂದು ಹಾರೈಸಿದರು.
ರಾಜೇಂದ್ರ ಕುಮಾರ್ ನಾಯಕತ್ವದಿಂದ ರೈತರಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ-ಸವಣೂರು ಸೀತಾರಾಮ ರೈ:
ಮಂಗಳೂರು ಮಾಸ್ ಅಧ್ಯಕ್ಷ , ಸಹಕಾರ ರತ್ನ ಕೆ.ಸೀತಾರಾಮ ರೈ ಮಾತನಾಡಿ ನಾನು ಮತ್ತು ರಾಜೇಂದ್ರ ಕುಮಾರ್‌ರವರು 50 ವರ್ಷಗಳಿಂದ ಸ್ನೇಹಿತರಾಗಿದ್ದೇವೆ. ಅವರೊಂದಿಗೆ 10 ವರ್ಷ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಎಸ್‌ಸಿಡಿಸಿಸಿ ಬ್ಯಾಂಕ್ ಅಭಿವೃದ್ಧಿ ಎಂದರೆ ಅದು ದ.ಕ.ಜಿಲ್ಲೆಯ ಅಭಿವೃದ್ಧಿಯಾಗಿದೆ. ಇಂದು ರೂ.7000 ಕೋಟಿಗಳಿಗಿಂತಲೂ ಹೆಚ್ಚಿನ ಠೇವಣಿ, ಸಾಲವನ್ನು ಬ್ಯಾಂಕ್ ಹೊಂದಿದೆ. ಸಹಕಾರಿ ಕ್ಷೇತ್ರದಲ್ಲಿ ರಾಜೇಂದ್ರ ಕುಮಾರ್ ನಾಯಕತ್ವದಿಂದ ರೈತರಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ದ.ಕ.ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡುವ ಸಂದರ್ಭವೂ ಬರಲಿಲ್ಲ. ಇಂದು ಸಹಕಾರಿ ಬ್ಯಾಂಕ್ ರೈತರ ಒಡನಾಡಿಯಾಗಿ ಬೆಳೆದಿದೆ ಎಂದರು. ಶಶಿಕುಮಾರ್ ರೈ ಬಾಲ್ಯೊಟ್ಟುರವರು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಿದವರು. ಇವರೂ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿ ಅಭಿನಂದಿಸಿದರು.
ಬ್ಯಾಂಕ್ ಪುನಶ್ಚೇತನ ಮಾಡಿ ಸದೃಢವಾಗಿ ಬೆಳೆಸಿದ್ದಾರೆ-ಎಸ್.ಬಿ.ಜಯರಾಮ್ ರೈ :
ಅಭಿನಂದನಾ ಸಮಿತಿ ಅಧ್ಯಕ್ಷ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಜಯರಾಮ ರೈ ಬಳೆಜ್ಜ ಮಾತನಾಡಿ ರಾಜೇಂದ್ರ ಕುಮಾರ್‌ರವರು 1994ರಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಆ ಸಂದರ್ಭದಲ್ಲಿ ಬ್ಯಾಂಕ್‌ನ ಒಟ್ಟು ಠೇವಣಾತಿ ರೂ.64 ಕೋಟಿ, ಹೊರ ಬಾಕಿ ಸಾಲ ರೂ.46 ಕೋಟಿ, ಲಾಭ ರೂ.42 ಲಕ್ಷ ಇತ್ತು. ಇಂದು 113 ಶಾಖೆ ಹೊಂದಿರುವ ಬ್ಯಾಂಕ್ ರೂ.7275 ಕೋಟಿ ಠೇವಣಿ, ರೂ.6485 ಕೋಟಿ ಸಾಲ ವಿತರಿಸಿ ರೂ.79 ಕೋಟಿ ಲಾಭ ಗಳಿಸಿದೆ. ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಜೇಂದ್ರ ಕುಮಾರ್‌ರವರು ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಎಸ್‌ಸಿಆರ್ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಗೊಂಡಿರುವುದು ನಮಗೆ ಹೆಮ್ಮೆಯಾಗಿದೆ. ನಷ್ಟದಲ್ಲಿದ್ದ ಬ್ಯಾಂಕ್‌ಗಳ ಪುನಶ್ಚೇತನ ಮಾಡಿ ಸದೃಢವಾಗಿ ಬೆಳೆಯಲು ಕಾರಣಕರ್ತರಾಗಿದ್ದಾರೆ. ಬ್ಯಾಂಕ್ ಅಧ್ಯಕ್ಷರಾಗಿ ಬ್ಯಾಂಕ್‌ನ್ನು ಉತ್ತುಂಗಕ್ಕೆ ಏರಿಸಿದ್ದಾರೆ ಎಂದರು. ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿನಂತೆ ಅವರು ಕೈಯಾಡಿಸದ ಕ್ಷೇತ್ರವಿಲ್ಲ. ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು ಎಲ್ಲರಿಗೂ ಸ್ಪಂದನೆ ಕೊಡುವ ವ್ಯಕ್ತಿಯಾಗಿದ್ದಾರೆ. ಇಬ್ಬರಿಗೂ ಇಂದು ಸಹಕಾರಿ ಬಂಧುಗಳಿಂದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿ ಸ್ವಾಗತಿಸಿದರು.
ಸಹಕಾರಿ ಯೂನಿಯನ್ ನಿರ್ದೇಶಕರಿಗೆ ಗೌರವಾರ್ಪಣೆ:
ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರುಗಳಾದ ವಿಷ್ಣು ಭಟ್ ಮೂಲೆತೋಟ, ಮಂಜುನಾಥ್ ಎನ್.ಎಸ್., ಸತೀಶ್ ಕಾಶಿಪಟ್ನ ಹಾಗೂ ಪ್ರವೀಣ್ ಗಿಲ್ಬರ್ಟ್ ಡಿಸೋಜರವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಹಕಾರಿ ಬಂಧುಗಳಿಂದ ಅಭಿನಂದನೆ:
ಆಗಮಿಸಿದ್ದು ಸಹಕಾರಿ ಬಂಧುಗಳು, ಡಾ|ರಾಜೇಂದ್ರ ಕುಮಾರ್ ಮತ್ತು ಶಶಿಕುಮಾರ್ ರೈರವರ ಅಭಿಮಾನಿ ಬಳಗದವರು ಡಾ|ಎಂ.ಎನ್.ರಾಜೇಂದ್ರ ಕುಮಾರ್ ಮತ್ತು ಶಶಿಕುಮಾರ್ ರೈ ಬಾಲ್ಯೊಟ್ಟುರವರನ್ನು ಶಾಲು, ಹಾರ, ಹೂಗುಚ್ಚ ನೀಡಿ ಅಭಿನಂದಿಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಂಗಳೂರು ಮುಡಾ ಅಧ್ಯಕ್ಷ ಸದಾಶಿವ ಉಲ್ಲಾಳ್, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಅಭಿನಂದನಾ ಸಮಿತಿಯ ಗೌರವ ಸಲಹೆಗಾರ ನನ್ಯ ಅಚ್ಯುತ ಮೂಡತ್ತಾಯ, ಸಂಚಾಲಕರುಗಳಾದ ಎಸ್.ಎನ್.ಮನ್ಮಥ, ಕುಶಾಲಪ್ಪ ಗೌಡ ಪೂವಾಜೆ, ಕೋಶಾಽಕಾರಿ ಹರೀಶ್ ರೈ ಪಿ., ಪುತ್ತೂರು ತಾಲೂಕು ಸಂಚಾಲಕರಾದ ಪ್ರಕಾಶ್ಚಂದ್ರ ರೈ ಕೈಕಾರ, ಸುಳ್ಯ ತಾಲೂಕು ಸಂಚಾಲಕ ಸಂತೋಷ್ ಕುತ್ತಮೊಟ್ಟೆ, ಕಡಬ ತಾಲೂಕು ಸಂಚಾಲಕ ಗಣೇಶ್ ಉದನಡ್ಕ, ಬೆಳ್ತಂಗಡಿ ತಾಲೂಕು ಸಂಚಾಲಕ ರಾಘವೇಂದ್ರ ನಾಯಕ್, ಎಸ್‌ಸಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಽಕಾರಿ ಗೋಪಾಲಕೃಷ್ಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಲರ‍್ಸ್ ಕನ್ನಡ ಟಿವಿಯ ಕನ್ನಡ ಕೋಗಿಲೆ ಖ್ಯಾತಿಯ ಗಾಯಕಿ ಅಪೇಕ್ಷಾ ಪೈ ಪ್ರಾರ್ಥಿಸಿದರು. ಪ್ರಕಾಶ್ ಚಂದ್ರ ರೈ ಕೈಕಾರ, ಕುಶಾಲಪ್ಪ ಗೌಡ ಪೂವಾಜೆ, ನನ್ಯ ಅಚ್ಚುತ ಮೂಡತ್ತಾಯ, ಎಸ್.ಎನ್ ಮನ್ಮಥ, ಎಸ್.ಬಿ ಜಯರಾಮ್ ರೈ ಬಳೆಜ್ಜ, ಗೋಪಾಲಕೃಷ್ಣ ಭಟ್, ಗಣೇಶ್ ಕೆ. ಉದನಡ್ಕ, ರಾಘವೇಂದ್ರ ನಾಯಕ್, ಸಂತೋಷ್ ಕುತ್ತಮೊಟ್ಟೆ, ಹರೀಶ್ ರೈ ಪಿ., ಜಯಪ್ರಕಾಶ್ ರೈ ಸಿ.ರವರು ಅತಿಥಿಗಳನ್ನು ಹೂಗುಚ್ಚ ನೀಡಿ ಗೌರವಿಸಿದರು. ಅಭಿನಂದನಾ ಸಮಿತಿ ಕಾರ್ಯದರ್ಶಿ, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿ.ಇ.ಓ. ಜಯಪ್ರಕಾಶ್ ರೈ ಸಿ. ವಂದಿಸಿದರು. ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಮತ್ತು ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಚಂದ್ರಶೇಖರ ಗೌಡ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಉಪಾಹಾರ ಹಾಗೂ ಮಧ್ಯಾಹ್ನ ಭೋಜನ ನಡೆಯಿತು.
ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಇತರ ಸಹಕಾರ ಸಂಘಗಳ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ನಿರ್ದೇಶಕರುಗಳು, ಮುಖ್ಯ ಕಾರ್ಯನಿರ್ವಹಣಾಽಕಾರಿಗಳು, ಸಿಬಂದಿಗಳು, ಸದಸ್ಯರು ಉಪಸ್ಥಿತರಿದ್ದರು.
ಪ್ರಶಸ್ತಿ ಸನ್ಮಾನಗಳಿಗೆ ಸಹಕಾರಿ ಬಂಧುಗಳಾದ ನೀವೇ ಕಾರಣಕರ್ತರು-ಡಾ|ಎಂ.ಎನ್.ರಾಜೇಂದ್ರ ಕುಮಾರ್
ಅಭಿನಂದನೆ ಸ್ವೀಕರಿಸಿದ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ ನಾವು ಯಾವುದೇ ಪ್ರಶಸ್ತಿಯನ್ನು ಹುಡುಕಿಕೊಂಡು ಹೋಗಬಾರದು ನಮ್ಮನ್ನು ಪ್ರಶಸ್ತಿ ಹುಡುಕಿಕೊಂಡು ಬರಬೇಕು. ನನಗೆ ಸಿಕ್ಕಿದ ಎಲ್ಲಾ ಪ್ರಶಸ್ತಿ ಸನ್ಮಾನಗಳಿಗೆ ಸಹಕಾರಿ ಬಂಧುಗಳಾದ ನೀವೇ ಕಾರಣಕರ್ತರು. ಸಹಕಾರಿ ಕ್ಷೇತ್ರದಲ್ಲಿ ನನ್ನನ್ನು ಬೆಳೆಸಿರುವ ಕಾರಣದಿಂದ ನನಗೆ ಪ್ರಶಸ್ತಿ ಬಂದಿದೆ ಎಂದರು. 40 ವರ್ಷದಿಂದ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಎಸ್‌ಎಸ್‌ಎಲ್‌ಸಿ ಮಾತ್ರ ನಾನು ಓದಿದವ. ವಾಣಿಜ್ಯ ಬ್ಯಾಂಕ್‌ನಲ್ಲಿ ಕೆಲಸ ಮಾಡಿ ಬಳಿಕ ರಾಜೀನಾಮೆ ಕೊಟ್ಟು ಸಹಕಾರಿ ಕ್ಷೇತ್ರಕ್ಕೆ ಬಂದೆ ಎಂದರು. ಜಿಲ್ಲೆಯ 179 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಲಾಭದಾಯಕವಾಗಿದೆ. 28 ವರ್ಷಗಳಿಂದ ಸಹಕಾರಿ ಸಂಘಗಳು ಅಭಿವೃದ್ಧಿಯಾಗಿದೆ. 31 ವರ್ಷದಿಂದ ಅಧ್ಯಕ್ಷನಾಗಿ ಯಾವುದೇ ರಾಜಕೀಯ ಮಾಡದೆ ಕೆಲಸ ಮಾಡುತ್ತಿದ್ದೇನೆ. ಮಹಿಳೆಯರು ಸ್ವಾವಲಂಬಿ ಆಗಬೇಕೆಂಬ ಉದ್ಧೇಶದಿಂದ ನವೋದಯ ಸ್ವಸಹಾಯ ಗುಂಪು ಆರಂಭ ಮಾಡಿದ್ದೇನೆ ಎಂದರು. ಸಹಕಾರಿ ರಂಗಕ್ಕೆ ತಿದ್ದುಪಡಿ ತರಲಾಗುತ್ತದೆ ಎಂದು ಹೇಳಲಾಗುತ್ತದೆ. ಸಹಕಾರಿ ಕ್ಷೇತ್ರದಲ್ಲಿ ಅಳವಡಿಸಲು ಹೊರಟಿರುವ ಕಾಮನ್ ಕೇಡರ್‌ನ್ನು ದ.ಕ.ಜಿಲ್ಲೆಯಲ್ಲಿ ನಾನು ಅನುಷ್ಠಾನ ಮಾಡುವುದಿಲ್ಲ. ಇದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದ ಅವರು ನಾವು ಮಾಡುವ ಕೆಲಸಗಳಿಂದ ಅಭಿವೃದ್ಧಿ ಆಗಬೇಕು ಎಂದರು.
ರಾಜೇಂದ್ರ ಕುಮಾರ್ ಎಂಬ ಆಲದ ಮರದ ಅಡಿಯಲ್ಲಿ ಸಸಿಯಂತೆ ಬೆಳೆದವನು- ಶಶಿಕುಮಾರ್ ರೈ ಬಾಲ್ಯೊಟ್ಟು
ಅಭಿನಂದನೆ ಸ್ವೀಕರಿಸಿದ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ಇಂದು ಅರ್ಥಪೂರ್ಣವಾಗಿ ವ್ಯವಸ್ಥಿತವಾಗಿ ಅಭಿನಂದನಾ ಸಮಿತಿಯಿಂದ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ನಿಮ್ಮ ಅಭಿನಂದನೆಗೆ ಪೂರಕವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು. ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಸ್ಥಾನಕ್ಕೆ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರ ಹೆಸರು ಘೋಷಣೆಯಾದಾಗ ಅವರು ಈ ಪದವಿ ಸ್ವೀಕರಿಸಲು ನಿರಾಕರಿಸಿದರು.ಇಷ್ಟೊಂದು ಗೌರವಯುತ ಸ್ಥಾನವನ್ನು ತಾವು ಸ್ವೀಕರಿಸಬೇಕು ಎಂದು ನಾವು ಸಹಕಾರಿಗಳೆಲ್ಲ ಒತ್ತಡ ಹಾಕಿದ ಕಾರಣ ಹುದ್ದೆಯನ್ನು ಒಪ್ಪಿಕೊಂಡರು.ಕೇಂದ್ರ ಸಂಪುಟ ಸಚಿವನ ಸ್ಥಾನಮಾನ ಹೊಂದಿರುವ ಈ ಹುದ್ದೆಯನ್ನು ಈವರೆಗೆ ಕರ್ನಾಟಕದ ಯಾರೂ ಅಲಂಕರಿಸಿಲ್ಲ.ನಮ್ಮ ಜಿಲ್ಲೆಯ ಸಹಕಾರ ರತ್ನ ಡಾ|ರಾಜೇಂದ್ರ ಕುಮಾರ್ ಅವರು ವಹಿಸಿಕೊಂಡಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ.ಇದು ಎಲ್ಲ ಸಹಕಾರಿಗಳಿಗೂ ಮುಕುಟಪ್ರಾಯ ಎಂದು ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು. ಜೀವನ್ ಭಂಡಾರಿ ಅವರ ಜೊತೆ ಸಹಕಾರಿ ವ್ಯವಸ್ಥೆ ಬಗ್ಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ನಾನು ಹೋಗ್ತಾ ಇದ್ದೆ, ಜೀವನ್ ಭಂಡಾರಿಯವರು ಕೀರ್ತಿ ಶೇಷರಾದ ಬಳಿಕ ಈ ಭಾಗದಲ್ಲಿ ಬ್ಯಾಂಕಿನ ನಿರ್ದೇಶಕ ಹುದ್ದೆ ಖಾಲಿಯಾದ ಸಂದರ್ಭ ಈ ಭಾಗದ ಶಾಸಕ ಅಶೋಕ್ ಕುಮಾರ್ ರೈ ಮೂಲಕ ರಾಜೇಂದ್ರ ಕುಮಾರ್ ನನ್ನನ್ನು ಗುರುತಿಸಿ ಆಯ್ಕೆ ಮಾಡುವ ಕೆಲಸ ಮಾಡಿದ್ದಾರೆ. ಕಳೆದ 11 ವರ್ಷಗಳಿಂದ ನಿರ್ದೇಶಕನಾಗಿ ರಾಜೇಂದ್ರ ಕುಮಾರ್‌ರವರ ಜೊತೆಗೆ ಕೆಲಸ ಮಾಡುತ್ತಿದ್ದೇನೆ. ರಾಜೇಂದ್ರ ಕುಮಾರ್ ಎಂಬ ಆಲದ ಮರದ ಅಡಿಯಲ್ಲಿ ನಾನು ಸಸಿಯಂತೆ ಬೆಳೆದಿದ್ದೇನೆ, ಅವರ ಜೊತೆ ನನ್ನನ್ನೂ ಗುರುತಿಸಿರುವುದಕ್ಕೆ ಆಭಾರಿಯಾಗಿದ್ದೇನೆ ಎಂದು ಹೇಳಿದ ಬಾಲ್ಯೊಟ್ಟು, ನೀವಿಟ್ಟಿರುವ ಪ್ರೀತಿ ವಿಶ್ವಾಸ ಉಳಿಸಿಕೊಂಡು ಸಹಕಾರಿ ಕ್ಷೇತ್ರದಲ್ಲಿ ಮುನ್ನಡೆಯುತ್ತೇನೆ ಎಂದು ಹೇಳಿ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.
ಅಭಿವಂದನೆ
ಡಾ|ಎಂ.ಎನ್.ರಾಜೇಂದ್ರ ಕುಮಾರ್ ಮತ್ತು ಶಶಿಕುಮಾರ್ ರೈ ಬಾಲ್ಯೊಟ್ಟುರವರನ್ನು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಶಾಮ್ ಭಟ್ ಮತ್ತು ವೇದಿಕೆಯಲ್ಲಿದ್ದ ಗಣ್ಯರು ಶಾಲು, ಬೃಹತ್ ಹಾರ, ದೇವರ ಬೆಳ್ಳಿ ವಿಗ್ರಹ, ಫಲಪುಷ್ಪ, ಆಳೆತ್ತರದ ಸನ್ಮಾನ ಪತ್ರ ನೀಡಿ ಪುತ್ತೂರು ಉಪವಿಭಾಗದ ಸಹಕಾರಿ ಬಂಧುಗಳ ವತಿಯಿಂದ ಅಭಿನಂದಿಸಲಾಯಿತು.