ಪುತ್ತೂರು: ಆಶಾ ಕಾರ್ಯಕರ್ತೆಯರಿಗೆ ಮಾಸಿಕ ವೇತನ ರೂ. 21ಸಾವಿರ ನೀಡಬೇಕೆಂದು ಕೇರಳದಲ್ಲಿ ಕಾಂಗ್ರೇಸ್ ಪಕ್ಷ ಹೋರಾಟ ನಡೆಸುತ್ತಿದೆ. ಮಾತ್ರವಲ್ಲ ಸಂಸತ್ ಸದಸ್ಯೆ ಪ್ರಿಯಾಂಕ ಗಾಂಧಿ ಭಾಷಣ ಮಾಡುತ್ತಾ, ತಮ್ಮ ಸರಕಾರ ಬಂದರೆ ಆಶಾ ಕಾರ್ಯಕರ್ತೆಯರಿಗೆ ಖಂಡಿತಾ ಮಾಸಿಕ ವೇತನ ರೂ.21ಸಾವಿರ ನೀಡಲು ಬದ್ದರಿದ್ದೇವೆ ಎಂದು ಹೇಳಿ ಕರ್ನಾಟಕದಲ್ಲಿ ನೀಡದಿರುವುದು ಹಾಸ್ಯಾಸ್ಪದ ಎಂದು ಸಿಐಟಿಯು ಅಪಿಲಿಯೇಟೆಡ್ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಮುಖಂಡರಾದ ನ್ಯಾಯವಾದಿ ಬಿ.ಎಂ.ಭಟ್ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡೆ ಪ್ರಿಯಾಂಕ ಗಾಂಧಿಯವರು ಕೇರಳದಲ್ಲಿ ಹೇಳಿದ್ದನ್ನು ಮೊದಲು ಅವರದ್ದೇ ಸರಕಾರ ಇರುವ ಕರ್ನಾಟಕದಲ್ಲಿ ಆಶಾರವರಿಗೆ ಮಾಸಿಕ ರೂ.21ಸಾವಿರ ವೇತನ
ನೀಡಿ ಸಾಬೀತು ಮಾಡಿ ತೋರಿಸಲಿ ಎಂದವರು ಸವಾಲು ಹಾಕಿದ್ದಾರೆ. ಇಲ್ಲಿ ಅಂಗನವಾಡಿ ಬಿಸಿಯೂಟ ನೌಕರರಿಗೂ ವೇತನ ಕಡಿಮೆ ಇರುವುದು ಅವರಿಗೆ ಕಾಣದಿರುವುದು ಅವರ ದ್ವಿಮುಖ ನೀತಿಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ. ಕೊಟ್ಟ ಮಾತಿಗೆ ತಪ್ಪಿ ನಡೆದ ಸತ್ಯ ಇಲ್ಲಿರುವುವಾಗ ಕೇರಳದಲ್ಲಿ ಮತ್ತೆ ಸುಳ್ಳು ಹೇಳುತ್ತಿರುವ ಕಾಂಗ್ರೆಸ್ ನಡೆ ಖಂಡನೀಯ ಎಂದು ಅವರು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಸ್ಕೀಮ್ ನೌಕರರ ಸುಭದ್ರತೆಗೆ ಸಿಐಟಿಯು ಬದ್ದತೆಯಿಂದ ಹೋರಾಟ ನಡೆಸಲು ನಿರ್ಧರಿಸಿದ್ದು ಮಾ.3 ರಿಂದ 7 ರ ತನಕ ಸಿಐಟಿಯು ಈ ನೌಕರರ ಪರ ಹೋರಾಟ ನಡೆಸುತ್ತದೆ ಎಂದವರು ತಿಳಿಸಿದರು.