ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಶಕ್ತಿ ಅಪಾರ ಎಂಬಂತೆ ಸುಮಾರು 19 ವರ್ಷದಿಂದ ಪುತ್ತೂರು ಕಂಬಳದಲ್ಲಿ ಗೆಲ್ಲುವ ಹಂತದಲ್ಲೇ ಸೋಲನ್ನು ಅನುಭವಿಸುವ ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ ಯಜಮಾನದಲ್ಲಿರುವ ಕೋಣಗಳು, ಈ ಬಾರಿ ನೇಗಿಲು ಹಿರಿಯದಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಆ ಸಲುವಾಗಿ ಕೋಣದ ಯಜಮಾನರು ಮಾ.3ರಂದು ದೇವಳದಲ್ಲಿ ಶ್ರೀ ಕಂಬಳದಲ್ಲಿ ವಿಜೇತ ಸ್ಥಾನಕ್ಕೆ ಸಿಕ್ಕಿದ 2 ಪವನ್ ಚಿನ್ನದಲ್ಲಿ 1 ಪವನ್ ಚಿನ್ನವನ್ನು, ರುದ್ರಾಭಿಷೇಕ ಮತ್ತು ಅನ್ನದಾನ ಸೇವೆ ನೀಡಿದ್ದಾರೆ.
ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಮಾಡಿ ಸಿಯಾಳ ಮತ್ತು ಮಲ್ಲಿಗೆಯೊಂದಿಗೆ 1 ಪವನ್ ಚಿನ್ನವನ್ನು, ರುದ್ರಾಭಿಷೇಕ ಹಾಗು ರೂ. 5ಸಾವಿರ ನಗದನ್ನು ಅನ್ನದಾನ ಸೇವೆಗೆ ನೀಡಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಪ್ರಾರ್ಥನೆ ಮಾಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಕೇಶವ ಭಂಡಾರಿ ಅವರಿಗೆ ದೇವಳದ ಗೌರವಾರ್ಥವಾಗಿ ಶಲ್ಯ ತೊಡಿಸಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಈಶ್ವರ ಬೇಡೆಕರ್, ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ ಉಪಸ್ಥಿತರಿದ್ದರು.
ಮನಸ್ಸಿನಲ್ಲಂದುಕೊಂಡಂತೆ ಚಿನ್ನ ಸಮರ್ಪಣೆ:
ನಮ್ಮ ಕುಟುಂಬ ಅಜ್ಜನ ಕಾಲದಿಂದ ಕಂಬಳದ ಕೋಣಗಳನ್ನು ಓಡಿಸುತ್ತಿದ್ದೆವು. ನನ್ನ ಅಜ್ಜ 105 ವರ್ಷಗಳ ಕಾಲ ಬದುಕಿದ್ದರು. ಬಳಿಕ ನನ್ನ ತಂದೆ ಅದನ್ನು ಮುಂದುವರಿಸಿದರು. ನನ್ನ ತಂದೆಯ ಬಳಿಕ ಅಣ್ಣ ತಮ್ಮಂದಿರು, ಅಕ್ಕತಂಗಿಯರು ಸೇರಿ ಮತ್ತೆ ಕೋಣ ಓಡಿಸುವ ಮೂಲಕ ತಂದೆಯ ಆಸೆಯನ್ನು ಈಡೇರಿಸುವ ಕೆಲಸ ಮಾಡಿದೆವು. ಹಿಂದೆ 1995ರಲ್ಲಿ ಎರಡು ಕೋಣ ಖರೀದಿಸಿದ್ದೆವು. 6 ವರ್ಷ ಪ್ರಥಮ, ದ್ವಿತೀಯ ಸ್ಥಾನ ಪಡೆಯುತ್ತಿತ್ತು. ಉಡುಪಿ ಜಿಲ್ಲೆಯಲ್ಲಿ ನನ್ನ ತಂದೆಗೆ ಸನ್ಮಾನ ಕೂಡಾ ಮಾಡಲು ಸಿದ್ಧತೆ ಆಗಿತ್ತು. ಆದರೆ ಅವರು ಅದಕ್ಕಿಂತ ಮುಂದೆ ನಿಧನರಾದರು. ತಂದೆ ನಿಧನದ ವರ್ಷದಲ್ಲೇ ನನ್ನ ಹೆಸರಿನಲ್ಲಿ ನಮ್ಮ ಕೋಣ ಮೆಡಲ್ ಪಡೆದಿತ್ತು. ಆ ಬಳಿಕ ಸುಮಾರು 19 ವರ್ಷ ಆಯಿತು. ಪುತ್ತೂರಿನಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆಯುವ ಯೋಗ ಬರಲಿಲ್ಲ. 32ನೇ ವರ್ಷದ ಕಂಬಳದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಮೊನ್ನೆ ಶನಿವಾರ ದಿವಸ ಬಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರಲ್ಲಿ ಮನಸಿನ ನೋವನ್ನು ತಿಳಿಸಿದೆ. ಅವರು ತಿಳಿಸಿದಂತೆ ದೇವಳಲ್ಲಿ ಪ್ರಾರ್ಥನೆ ಮಾಡಿದೆ. ’ನನ್ನಿಂದ ತಪ್ಪು ನಡೆದಿದ್ದರೆ ಅದನ್ನು ಕ್ಷಮಿಸಿ ಈ ಬಾರಿ ವಿಜೇತರನ್ನಾಗಿ ಮಾಡಿಸುವಂತೆ ಬೇಡಿಕೊಂಡು ಶ್ರೀ ದೇವರಿಗೆ ರುದ್ರಾಭಿಷೇಕ, ಅನ್ನದಾನ ಸೇವೆ ಮಾಡುವ ನಿರ್ಧಾರ ಕೈಗೊಂಡೆ. ಪ್ರಾರ್ಥನೆಗೆ ಒಲಿದ ದೇವರು ಪ್ರಥಮ ಬಹುಮಾವನ್ನು ನೀಡಿದ್ದಾರೆ. ಪ್ರಾರ್ಥನೆಯ ಸಂದರ್ಭ ನನ್ನ ಮನಸ್ಸಿನಲ್ಲಿದ್ದುಕೊಂಡಂತೆ ವಿಜಯ ಸ್ಥಾನಕ್ಕೆ ಲಭಿಸಿದ 2 ಪವನ್ ಚಿನ್ನದಲ್ಲಿ 1 ಪವನ್ ಚಿನ್ನವನ್ನು ದೇವಳಕ್ಕೆ ಸಮರ್ಪಣೆ ಮಾಡಿದ್ದೇನೆ. ಜೊತೆಗೆ ರುದ್ರಾಭಿಷೇಕ ಮತ್ತು ಅನ್ನದಾನ ಸೇವೆಯನ್ನೂ ಮಾಡಿದ್ದೇನೆ ಎಂದು ಸುದ್ದಿಯೊಂದಿಗೆ ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ ಅವರು ತಿಳಿಸಿದ್ದಾರೆ.
ಪ್ರಾರ್ಥನೆಗೆ ಫಲ ಸಿಕ್ಕಿದೆ
ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ ಅವರು ಪುತ್ತೂರು ಕಂಬಳಕ್ಕೆ ಅವರ ಕೋಣಗಳನ್ನು ಓಡಿಸುವ ಕುರಿತು ಬಂದಿದ್ದರು. ಶನಿವಾರ ಅವರು ಬಂದಾಗ ಕಂಬಳದ ಕರೆಯ ಬಳಿ ನಿಂತು ಚಿಂತಿಸುತ್ತಿದ್ದರು. ಈ ವೇಳೆ ಅವರು ನನ್ನಲ್ಲಿ ಸುಮಾರು 20 ವರ್ಷದಿಂದ ಪುತ್ತೂರು ಕಂಬಳದಲ್ಲಿ ನನ್ನ ಕೋಣಗಳು ಸ್ಪರ್ಧೆ ಮಾಡುತ್ತಿವೆ. ಆದರೆ ಗೆಲ್ಲುವ ಹಂತದಲ್ಲೇ ಸೋಲಾಗುತ್ತಿದೆ. ನನ್ನಿಂದ ಏನಾದರೂ ತಪ್ಪಾಗಿದೆಯೇ. ದೇವರಿಗೆ ಏನಾದರೂ ಕೋಪ ಇದೆಯಾ ಎಂದು ಪ್ರಶ್ನಿಸಿದರು. ಇದಕ್ಕೆ ನಾನು ಅವರನ್ನು ನೇರ ದೇವಳಕ್ಕೆ ಕರೆದುಕೊಂಡು ಹೋಗಿ ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿಸಿ ಶ್ರೀ ದೇವರಿಗೆ ಒಂದು ರುದ್ರಾಭಿಷೇಕ ಮತ್ತು ಅನ್ನದಾನ ಸೇವೆ ನೀಡುವಂತೆ ಹೇಳಿದೆ. ಅದರಂತೆ ಅವರು ಪ್ರಾರ್ಥನೆಯನ್ನು ಮಾಡಿದ್ದರು. ಅವರ ಕೋಣಗಳು ಪ್ರಥಮ ಸ್ಥಾನವನ್ನೂ ಗಳಿಸಿದೆ.
ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು
ಈ ಹಿಂದೆಯೂ ಚಿನ್ನ ಸಮರ್ಪಣೆ ಮಾಡಿದ ನಿದರ್ಶನವಿದೆ
ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಮಹಿಮೆ ಅಪಾರ. ಯಾವುದೇ ಕಾರ್ಯವನ್ನು ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿ ಮುಂದುವರಿಸುವುದು ಭಕ್ತರು ಮಾಡಿಕೊಂಡು ಬಂದಿರುವ ರೂಢಿ. ಈ ಹಿಂದೆಯೂ ದೇವರಮಾರು ಗದ್ದೆಯಲ್ಲಿ ನಡೆದ ಕೋಟಿಚೆನ್ನಯ ಜೋಡುಕರೆ ಕಂಬಳದಲ್ಲಿ ಮೂಡಬಿದ್ರೆ ಕರಿಂಜೆ ವಿನು ವಿಶ್ವನಾಥ ಶೆಟ್ಟಿಯವರ ಕೋಣಗಳು ಪ್ರಥಮ ಸ್ಥಾನ ಪಡೆದಿತ್ತು. ಆ ಸಂದರ್ಭ ವಿನು ವಿಶ್ವನಾಥ ಶೆಟ್ಟಿಯವರು ದೇವಳಕ್ಕೆ 1 ಪವನ್ ಚಿನ್ನ ಸಮರ್ಪಣೆ ಮಾಡಿದ್ದರು. ಬಲ್ಲಮಂಜದಲ್ಲೂ ಗದ್ದೆಯಲ್ಲಿ ನಡೆಯುತ್ತಿದ್ದ ಕಂಬಳದಲ್ಲಿ ಮಧ್ಯಾಹ್ನ ಪೂಜೆ ನಡೆಯುವುದಿಲ್ಲ. ಕಾರಣ ದೇವರು ಕಂಬಳ ನೋಡಲು ಬರುತ್ತಾರೆಂಬ ಪ್ರತೀತಿ ಇದೆ. ಅಲ್ಲು ಕೂಡಾ ವಿಜೇತರಾದವರು ತಮ್ಮ ಪ್ರಶಸ್ತಿಯನ್ನು ದೇವರಿಗೆ ಸಮರ್ಪಣೆ ಮಾಡುತ್ತಿದ್ದರು. ಕಾಲಕ್ರಮೇಣ ಅಲ್ಲಿ ಕಂಬಳ ಕರೆ ಹೊಸದಾಗಿ ಆಗಿದೆ. ಹೀಗೆ ಕರಾವಳಿಯ ಕಂಬಳಕ್ಕೆ ದೈವಿಕ ಶಕ್ತಿಯಿದೆ.
ನಿರಂಜನ ರೈ ಮಠಂತಬೆಟ್ಟು, ಉಪಾಧ್ಯಕ್ಷರು
ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ