ಪುತ್ತೂರು: ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಸಂಖ್ಯೆ ಕಡಿಮೆಯಿದ್ದು ಕೋರಂ ಕೊರತೆಯಿದೆ ಎಂದು ಕೆಲವು ಗ್ರಾಮಸ್ಥರು ಆಕ್ಷೇಪಿಸಿ ಗ್ರಾಮ ಸಭೆ ಮುಂದೂಡಬೇಕೆಂದು ಆಗ್ರಹಿಸಿದ ಹಾಗೂ ಅರ್ಧ ಸಭೆ ಮುಗಿದ ಬಳಿಕ ಗ್ರಾಮ ಸಭೆ ಮುಂದೂಡಲು ಸಾಧ್ಯವಿಲ್ಲ ಎಂದು ಗ್ರಾ.ಪಂ ಅಧ್ಯಕ್ಷರು ತಿಳಿಸಿದ ಮತ್ತು ಬಳಿಕದ ಬೆಳವಣಿಗೆಯಲ್ಲಿ ಚರ್ಚೆ, ಗದ್ದಲ, ಗೊಂದಲ, ವಾಕ್ಸಮರ ನಡೆದು ಕೊನೆಗೆ ಚರ್ಚಾ ನಿಯಂತ್ರಣಾಧಿಕಾರಿಯವರು ಗ್ರಾಮ ಸಭೆಯನ್ನು ಮುಂದೂಡಿದ ವಿದ್ಯಾಮಾನ ಮುಂಡೂರು ಗ್ರಾಮ ಸಭೆಯಲ್ಲಿ ನಡೆಯಿತು. ಪುತ್ತೂರು ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವನಿತಾ ಚರ್ಚಾ ನಿಯಂತ್ರಣಾಧಿಕಾರಿಯಾಗಿದ್ದರು.
ಸಭೆ ಮಾ.3ರಂದು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್ಎಸ್ಡಿ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿತು. ಸಭೆಯಲ್ಲಿ ಇಲಾಖಾಧಿಕಾರಿಗಳ ಮಾಹಿತಿ ಪ್ರಾರಂಭಗೊಂಡು ಕೃಷಿ ಇಲಾಖೆಯ ಸಿಬ್ಬಂದಿ ಮಾಹಿತಿ ನೀಡಿದ ವೇಳೆ ಗ್ರಾಮಸ್ಥ ಸುಪ್ರೀತ್ ಕಣ್ಣಾರಾಯ ಮಾತನಾಡಿ ,ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಸಂಖ್ಯೆ ಕಡಿಮೆಯಿದ್ದು ಕೋರಂ ಕೊರೆತೆಯಿದೆ ಹಾಗಾಗಿ ಸಭೆಯನ್ನು ಮುಂದೂಡಬೇಕು ಎಂದು ಹೇಳಿದರು. ಅಧ್ಯಕ್ಷ ಚಂದ್ರಶೇಖರ್ ಎನ್ಎಸ್ಡಿ ಉತ್ತರಿಸಿ ಗ್ರಾಮ ಸಭೆಯ ಬಗ್ಗೆ ನಾವು ಪ್ರಚಾರ ಮಾಡಿದ್ದೇವೆ, ನಮ್ಮಿಂದಾಗುವ ಪ್ರಯತ್ನ ಮಾಡಿದ್ದೇವೆ, ಹಲವು ಕಡೆಗಳಲ್ಲಿ ಈಗ ಇದೇ ಪರಿಸ್ಥಿತಿ ಇದೆ, ನಾವು ಪ್ರಚಾರ ಮಾಡಿಯೂ ಜನರು ಬಾರದಿದ್ದರೆ ಏನು ಮಾಡಲು ಸಾಧ್ಯ ಎಂದು ಹೇಳಿದರು. ಜನರೇ ಇಲ್ಲದ ಕಾಟಾಚಾರದ ಸಭೆ ಬೇಡ ಎಂದು ಗ್ರಾಮಸ್ಥ ಪ್ರವೀಣ್ ಆಚಾರ್ಯ ಹೇಳಿದರು. ಗ್ರಾಮಸ್ಥರಾದ ಗಣೇಶ್ ಕೊರುಂಗು ಧ್ವನಿಗೂಡಿಸಿದರು. ಸಭೆ ಮುಂದುವರಿಸಲು ಅವಕಾಶ ಕೊಡಿ ಎಂದು ಚರ್ಚಾನಿಯಂತ್ರಣಾಧಿಕಾರಿ ವನಿತಾ ಮನವಿ ಮಾಡಿದರು. ನಿಯಮ ಬಾಹಿರ ಗ್ರಾಮ ಸಭೆ ನಡೆಸಲು ನಾವು ಅವಕಾಶ ನೀಡುವುದಿಲ್ಲ ಎಂದು ಸುಪ್ರೀತ್ ಕಣ್ಣಾರಾಯ ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷ ಚಂದ್ರಶೇಖರ್ ಎನ್ಎಸ್ಡಿ ಮಾತನಾಡಿ ನಿಮ್ಮದು ಉದ್ದೇಶಪೂರ್ವಕ ಚರ್ಚೆ, ಸಭೆಯ ಆರಂಭದಲ್ಲೇ ಈ ಬಗ್ಗೆ ಹೇಳದೇ ಅರ್ದ ಸಭೆ ಮುಗಿದ ಬಳಿಕ ಹೇಳುವ ಉದ್ದೇಶವಾದರೂ ಏನು? ಸಭೆ ಮುಂದುವರಿಯುತ್ತದೆ, ಅದರಲ್ಲಿ ಬದಲಾವಣೆಯಿಲ್ಲ ಎಂದರು.
ಈ ವೇಳೆ ವೇದಿಕೆಯಲ್ಲಿದ್ದ ಗ್ರಾ.ಪಂ ಸದಸ್ಯರಾದ ಕಮಲೇಶ್ ಎಸ್.ವಿ ಹಾಗೂ ಮಹಮ್ಮದ್ ಆಲಿಯವರು ವೇದಿಕೆಯಿಂದಿಳಿದು ಗ್ರಾಮಸ್ಥರ ಬಳಿ ಕುಳಿತುಕೊಂಡರು.
ಕಮಲೇಶ್ ಎಸ್.ವಿ ಮಾತನಾಡಿ ಗ್ರಾಮಸ್ಥರ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡಬೇಕು, ಹಾರಿಕೆಯ ಉತ್ತರ ಕೊಡಬಾರದು ಎಂದರು. ಸದಸ್ಯರಾದ ನೀವು ವೇದಿಕೆಯ ಕೆಳಗೆ ಕುಳಿತದ್ದು ಯಾಕೆ ಎಂದು ಅಧ್ಯಕ್ಷರು ಕೇಳಿದರು. ಕಮಲೇಶ್ ಉತ್ತರಿಸಿ ನೀವು ಗ್ರಾಮಸ್ಥರಿಗೆ ಸಮರ್ಪಕ ಮಾಹಿತಿ ನೀಡದ್ದಕ್ಕೆ ವೇದಿಕೆಯಿಂದ ಕೆಳಗಿಳಿಯಬೇಕಾಯಿತು ಎಂದರು. ಚರ್ಚಾ ನಿಯಂತ್ರಣಾಧಿಕಾರಿ ವನಿತಾ ಅವರು ಇಬ್ಬರು ಸದಸ್ಯರನ್ನು ವೇದಿಕೆಗೆ ಬರಲು ಮನವಿ ಮಾಡಿದರೂ ಅವರು ವೇದಿಕೆಗೆ ಬರಲು ನಿರಾಕರಿಸಿದರು. ಈತನ್ಮಧ್ಯೆ ಗ್ರಾಮ ಸಭೆಯನ್ನು ಮುಂದೂಡಬೇಕೆಂದು ಆಗ್ರಹಿಸಿ ಪ್ರವೀಣ್ ಆಚಾರ್ಯ ಅವರು ಕೆಲಹೊತ್ತು ವೇದಿಕೆಯ ಮುಂಭಾಗ ನೆಲದಲ್ಲಿ ಕುಳಿತು ಪ್ರತಿಭಟಿಸಿದ ಘಟನೆಯೂ ನಡೆಯಿತು.
ಸದಸ್ಯ ಕರುಣಾಕರ ಗೌಡ ಎಲಿಯ ಮಾತನಾಡಿ, ಗ್ರಾಮಸ್ಥರ ಸಂಖ್ಯೆ ಅಲ್ಪ ಕಡಿಮೆ ಇರುವುದು ನಿಜ, ಆದರೆ ಈಗ ಸಭೆ ಅರ್ಧ ಆಗಿದೆ, ಜಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳು ಇರುವ ಕಾರಣ ಜನರ ಸಂಖ್ಯೆ ಕಡಿಮೆ ಆಗಿರಲೂಬಹುದು, ಮುಂದಕ್ಕೆ ಈ ರೀತಿ ಆದರೆ ಗ್ರಾಮ ಸಭೆ ರದ್ದುಪಡಿಸುವ, ಈಗ ಸಭೆ ಮುಂದುವರಿಸುವ ಎಂದು ಹೇಳಿದರು. ಪಿಡಿಓ ಮನ್ಮಥ ಅವರೂ ಸಭೆ ನಡೆಸಲು ಸಹಕರಿಸಿ ಎಂದು ಮನವಿ ಮಾಡಿದರು.
ಕೋರಂ ಕೊರತೆ ಇದ್ದೂ ಸಭೆ ನಡೆಸುವುದಾದರೆ ಅದರ ಬಗ್ಗೆ ನಮಗೆ ಲಿಖಿತವಾಗಿ ಬರೆದುಕೊಡಬೇಕು ಎಂದು ಸುಪ್ರೀತ್ ಕಣ್ಣಾರಾಯ ಪಟ್ಟು ಹಿಡಿದರು. ನಿಮಗೆ ಬರೆದುಕೊಡುವ ಅಗತ್ಯ ನಮಗಿಲ್ಲ, ನೀವು ನಾಲ್ಕು ಜನ ಬೇಡ ಎಂದ ಮಾತ್ರಕ್ಕೆ ಗ್ರಾಮ ಸಭೆ ಮುಂದೂಡಲು ಆಗುವುದಿಲ್ಲ ಎಂದು ಅಧ್ಯಕ್ಷ ಚಂದ್ರಶೇಖರ ಎನ್ಎಸ್ಡಿ ಆಕ್ರೋಶಭರಿತರಾಗಿ ಹೇಳಿದರು.
ಗ್ರಾಮಸ್ಥ ರಾಧಾಕೃಷ್ಣ ರೈ ರೆಂಜಲಾಡಿ ಮಾತನಾಡಿ ಈ ಹಿಂದೆಯೂ ಕೊರಂ ಕೊರತೆಯಿದ್ದಾಗ ಸಭೆ ನಡೆದಿದೆ, ಈಗ ನಡೆಸುವುದಕ್ಕೆ ಆಕ್ಷೇಪ ಮಾಡುವುದು ಸರಿಯಲ್ಲ, ನಾವು ಕೆಲಸ ಇಲ್ಲದೇ ಇಲ್ಲಿ ಬಂದದ್ದಲ್ಲ, ಸಭೆ ನಡೆಯಲಿ, ಮುಂದುವರಿಸಿ ಎಂದು ಹೇಳಿದರು. ಸಭೆ ನಡೆಸಲು ಎಲ್ಲರೂ ಸಹಕರಿಸಿ, ಸಭೆ ಮುಂದೂಡುವುದರಿಂದ ಯಾರಿಗೂ ಲಾಭವಿಲ್ಲ ಎಂದು ಸದಸ್ಯ ಕರುಣಾಕರ ಗೌಡ ಎಲಿಯ ಹೇಳಿದರು.
ಕೋರಂ ಕೊರತೆಯಿದ್ದೂ ಸಭೆ ನಡೆಸುವುದಾದರೆ ಈ ಬಗ್ಗೆ ಚರ್ಚಾನಿಯಂತ್ರಣಾಧಿಕಾರಿಯವರು ಅಧಿಕೃತ ಹೇಳಿಕೆ ಕೊಟ್ಟು ಸಭೆ ಮುಂದುವರಿಸಿ ಎಂದು ಸದಸ್ಯ ಕಮಲೇಶ್ ಎಸ್.ವಿ ಹೇಳಿದರು. ಸುಪ್ರೀತ್ ಕಣ್ಣಾರಾಯ, ಮಹಮ್ಮದ್ ಆಲಿ, ಗಣೇಶ್ ಕೊರುಂಗು, ಮಹಾಲಿಂಗ ನಾಯ್ಕ ಧ್ವನಿಗೂಡಿಸಿದರು. ನಿಮ್ಮ ಉದ್ದೇಶ ನಮಗೆ ಗೊತ್ತಿದೆ, ನನ್ನನ್ನು ಡೌನ್ ಮಾಡಬೇಕು ಮತ್ತು ಸಭೆ ನಡೆಯಲು ಬಿಡಬಾರದೆಂಬ ಉದ್ದೇಶಕ್ಕೆ ನೀವು ಇಲ್ಲಿಗೆ ಬಂದಿದ್ದೀರಿ ಎಂದು ಅಧ್ಯಕ್ಷರು ಹೇಳಿದರು. ಈ ವೇಳೆ ಸುಪ್ರೀತ್ ಕಣ್ಣಾರಾಯ ಮತ್ತು ಅಧ್ಯಕ್ಷರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಸದಸ್ಯ ಉಮೇಶ್ ಗೌಡ ಅಂಬಟ ಮತ್ತು ಸುಪ್ರೀತ್ ಕಣ್ಣಾರಾಯ ಮಧ್ಯೆಯೂ ಮಾತಿನ ಚಕಮಕಿ ನಡೆಯಿತು. ಆರೋಗ್ಯ ಇಲಾಖೆಯ ಪರವಾಗಿ ವೈದ್ಯಾಧಿಕಾರಿ ನಮಿತಾ ನಾಯ್ಕ್ ಅವರು ಮಾಹಿತಿ ನೀಡಲು ವೇದಿಕೆ ಬಂದರಾದರೂ ಕೋರಂ ಕೊರತೆ ಕಾರಣ ಮಾಹಿತಿ ನೀಡಬಾರದು ಎಂದು ಆಕ್ಷೇಪ ವ್ಯಕ್ತವಾಯಿತು. ಕೊನೆಗೆ ಅವರು ಮಾಹಿತಿ ನೀಡದೇ ವೇದಿಕೆಯಿಂದ ಕೆಳಗಿಳಿದರು.
ಸುಮಾರು ಒಂದೂವರೆ ತಾಸು ಇದೇ ವಿಚಾರದಲ್ಲಿ ಚರ್ಚೆ, ವಾಗ್ವಾದ, ಗದ್ದಲ ನಡೆಯಿತು. ಕೊನೆಗೆ ಚರ್ಚಾನಿಯಂತ್ರಣಾಧಿಕಾರಿ ವನಿತಾ ಅವರು ಕೋರಂ ಕೊರತೆ ಕಾರಣ ಗ್ರಾಮ ಸಭೆಯನ್ನು ಮುಂದೂಡುವುದಾಗಿ ಘೋಷಿಸಿದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಸುನಂದಾ ಬೊಳ್ಳಗುಡ್ಡೆ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸೂರಪ್ಪ ವರದಿ ಮಂಡಿಸಿದರು. ಸಿಬ್ಬಂದಿಗಳು ಸಹಕರಿಸಿದರು.