ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿ ಭಕ್ತರು ಮಾಡಿಕೊಂಡ ಮಹಾಲಿಂಗೇಶ್ವರ ದೇವಸ್ಥಾನದ ಸಂರಕ್ಷಣಾ ಸಮಿತಿಯ ಸಭೆಯು ಫೆ.28ರಂದು ನಡೆದಿದ್ದು, ಸಭೆಯಲ್ಲಿ ಆಗಿರುವ ನಿರ್ಣಯಗಳನ್ನು ಕಾರ್ಯಗತಗೊಳಿಸುವಂತೆ ದೇವಳದ ಆಡಳಿತ ಮಂಡಳಿಗೆ ಸಮಿತಿಯಿಂದ ಮನವಿ ಮಾಡಲಾಗಿದೆ.
ದೇವಳಕ್ಕೆ ಬರುವ ಭಕ್ತಾದಿಗಳು ಸಾಂಪ್ರದಾಯಿಕ ಡ್ರೆಸ್ ಹಾಕಿಕೊಳ್ಳುವ ಮೂಲಕ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲು ಸೂಚನಾ ಫಲಕ ಮತ್ತು ಪತ್ರಿಕಾ ಪ್ರಕಟಣೆ ನೀಡಬೇಕು. ಪಾದರಕ್ಷೆಗಳನ್ನು ದೇವಾಲಯದ ಉತ್ಸವ ಬಲಿ ಹೋಗುವ ಸ್ಥಳ ಹೊರಾಂಗಣಕ್ಕೆ ಚಪ್ಪಲಿ ಹಾಕದಂತೆ ಸೂಚನಾ ಫಲಕ ಅಳವಡಿಸುವುದು. ದೇವಳದ ಜಮೀನಿನಲ್ಲಿ ಕಾರ್ಯಕ್ರಮ ಆಗುವ ಸಂದರ್ಭ ತಾತ್ಕಾಲಿಕ ಅಂಗಡಿಗಳಿಗೆ ಏಲಂ ಬಾಡಿಗೆ ವಸೂಲು ದೇವಾಲಯದಿಂದಲೇ ನಡೆಯಬೇಕು. ದೇವಳದ ಮಾಸ್ಟರ್ ಪ್ಲಾನ್ಗೆ ಗದ್ದೆಯ ಎರಡೂ ಭಾಗದಲ್ಲಿ ಗ್ಯಾಲರಿ ನಿರ್ಮಾಣ ಮಾಡಬೇಕು. ಜಾತ್ರೆಯ ಸಂದರ್ಭ ಗದ್ದೆಯಲ್ಲಿ ತಾತ್ಕಾಲಿಕ ಅಂಗಡಿಗಳ ಎದುರು ಅಂಗಡಿಯವರ ಹೆಸರು, ಪೊಟೋ, ದರಪಟ್ಟಿ ಅಳವಡಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ದೇವಾಲಯದ ಜಮೀನಿನಲ್ಲಿ ಅಕ್ರಮವಾಗಿ ಪಾರ್ಕಿಂಗ್ ಶೆಡ್ ಅನ್ನು ತೆರವು ಮಾಡಬೇಕು. ದೇವಾಲಯದ ಜಾಗದಲ್ಲಿ ರಾಜಕೀಯ ವ್ಯಕ್ತಿಗಳ ಬ್ಯಾನರ್ ಅಳವಡಿಕೆಗೆ ಅವಕಾಶ ನೀಡಬಾರದು ಸಹಿತ ಸಭೆಯಲ್ಲಿ ಆಗಿರುವ ವಿಚಾರಗಳ ನಿರ್ಣಯಗಳನ್ನು ದೇವಳದ ಆಡಳಿತಕ್ಕೆ ಮನವಿ ಮಾಡಲಾಯಿತು.
ಸಭೆಯಲ್ಲಿ ಸುಮಾರು ೫೦ಕ್ಕೂ ಅಧಿಕ ಮಂದಿ ಉಪಸ್ಥಿತರಿದ್ದರು. ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ ಸ್ವಾಗತಿಸಿ, ಬಾಲಚಂದ್ರ ಸೊರಕೆ ವಂದಿಸಿದರು.