ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಬದಲಾವಣೆ- ಅರಿಯಡ್ಕದ ಉದಯಶಂಕರ ಶೆಟ್ಟಿ, ಗೋಳಿತ್ತೊಟ್ಟಿನ ಪ್ರಶಾಂತ್ ರೈಗೆ ಖೊಕ್, ಬೆಳ್ತಂಗಡಿ ತಾಲೂಕಿನ ಇಬ್ಬರ ನೇಮಕ

0

ನೆಲ್ಯಾಡಿ: ಇತಿಹಾಸ ಪ್ರಸಿದ್ಧ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯಕ್ಕೆ ಫೆ.18ರಂದು ನೂತನ ವ್ಯವಸ್ಥಾಪನಾ ಸಮಿತಿಯನ್ನು ನೇಮಕಗೊಳಿಸಿ ನೀಡಿದ್ದ ಆದೇಶವನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಬದಲಾವಣೆಗೊಳಿಸಿ ಮರು ಆದೇಶ ನೀಡಿದೆ. ಹಿಂದಿನ ಆದೇಶದಂತೆ ವ್ಯವಸ್ಥಾಪನಾ ಸಮಿತಿಯಲ್ಲಿ ಸ್ಥಾನ ಪಡೆದುಕೊಂಡಿದ್ದ ಪುತ್ತೂರು ತಾಲೂಕಿನ ಅರಿಯಡ್ಕದ ಉದಯಶಂಕರ ಶೆಟ್ಟಿ ಹಾಗೂ ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ಅರಂತಬೈಲು ನಿವಾಸಿ ಪ್ರಶಾಂತ್ ರೈ ಅವರನ್ನು ಕೈಬಿಟ್ಟು ಬೆಳ್ತಂಗಡಿ ತಾಲೂಕಿನ ಇಬ್ಬರಿಗೆ ಸ್ಥಾನ ಕಲ್ಪಿಸಲಾಗಿದೆ.
ಒಂದು ವರ್ಷದಿಂದ ಖಾಲಿಯಿದ್ದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಫೆ.18ರಂದು ಆದೇಶ ಹೊರಡಿಸಿತ್ತು. ಈ ಪಟ್ಟಿಯಲ್ಲಿ ಸಾಮಾನ್ಯ ವಿಭಾಗದಲ್ಲಿ ಪುತ್ತೂರಿನ ನ್ಯಾಯವಾದಿ ಅರಿಯಡ್ಕ ಉದಯಶಂಕರ ಶೆಟ್ಟಿ ಹಾಗೂ ಕೃಷಿಕ ಗೋಳಿತ್ತೊಟ್ಟು ಗ್ರಾಮದ ಅರಂತಬೈಲು ನಿವಾಸಿ ಪ್ರಶಾಂತ ರೈಯವರು ಸ್ಥಾನ ಪಡೆದುಕೊಂಡಿದ್ದರು. ಇದೀಗ ಹೊಸದಾಗಿ ಸಮಿತಿ ರಚಿಸಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮರು ಆದೇಶ ಹೊರಡಿಸಿದ್ದು ಇದರಲ್ಲಿ ಉದಯಶಂಕರ ಶೆಟ್ಟಿ ಹಾಗೂ ಪ್ರಶಾಂತ ರೈ ಅವರನ್ನು ಕೈಬಿಡಲಾಗಿದೆ. ಇವರ ಬದಲಿಗೆ ಬೆಳ್ತಂಗಡಿ ತಾಲೂಕಿನ ರೆಖ್ಯ ನಿವಾಸಿ ಪ್ರಮೋದ್‌ಕುಮಾರ್ ಶೆಟ್ಟಿ ಹಾಗೂ ಕೊಕ್ರಾಡಿಯ ಪ್ರಶಾಂತ್ ಕುಮಾರ್ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಉಳಿದಂತೆ ಈ ಹಿಂದೆ ಇದ್ದವರೇ ಸಮಿತಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಹೊಸ ಸಮಿತಿ:
ಸಾಮಾನ್ಯ ಸ್ಥಾನದಿಂದ ಗಣೇಶ್ ಕಾಶಿಹೌಸ್ ಕೊಕ್ಕಡ, ಸುಬ್ರಹ್ಮಣ್ಯ ಶಬರಾಯ ವಿಶ್ವಂಬರ ಮನೆ ಕೊಕ್ಕಡ, ವಿಶ್ವನಾಥ ಕೆ.ಕೊಲ್ಲಾಜೆ ಕೊಕ್ಕಡ, ಪ್ರಮೋದ್ ಕುಮಾರ್ ಶೆಟ್ಟಿ ರೆಖ್ಯ, ಪ್ರಶಾಂತ್ ಕುಮಾರ್ ಕೊಕ್ರಾಡಿ, ಮಹಿಳಾ ಸ್ಥಾನದಿಂದ ಸಿನಿ ತಂಡಶೇರಿ ಕೊಕ್ಕಡ, ಲೋಕೇಶ್ವರಿ ವಿನಯಚಂದ್ರ ವಳಂಬ್ರ ಕಡಿರುದ್ಯಾವರ, ಪರಿಶಿಷ್ಠ ಜಾತಿ ಸ್ಥಾನದಿಂದ ಹರಿಶ್ಚಂದ್ರ ಉಪ್ಪಾರಪಳಿಕೆ ಕೊಕ್ಕಡ ಹಾಗೂ ಪ್ರಧಾನ ಅರ್ಚಕರು ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದಾರೆ.

ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿದ್ದ, ಸಹಕಾರಿ ಸಂಘದ ಮಾಜಿ ನಿರ್ದೇಶಕನೂ ಆಗಿದ್ದ ನನ್ನನ್ನು ಸೌತಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಈ ಮೊದಲು ಸರಕಾರ ಆಯ್ಕೆ ಮಾಡಿ ಆದೇಶ ಹೊರಡಿಸಿತ್ತು. ಈ ಆದೇಶದಂತೆ ಪತ್ರಿಕೆಗಳಲ್ಲಿ ಸಮಿತಿಗೆ ನೇಮಕಗೊಂಡ ಎಲ್ಲಾ ಸದಸ್ಯರ ಪೋಟೋ ಸಹಿತ ವರದಿ ಪ್ರಕಟವಾಗಿತ್ತು. ಇದನ್ನು ಸ್ವಾಗತಿಸಿ ಹಲವು ಜನರ ಅಭಿಪ್ರಾಯಗಳೂ ಪತ್ರಿಕೆಗಳಲ್ಲಿ ಬಂದಿತ್ತು. ಇದೀಗ ಬೆಳ್ತಂಗಡಿಯಲ್ಲಿ ನಾನು ಹೇಳಿದಂತೆ ಆಗಬೇಕೆಂದು ರಕ್ಷಿತ್ ಶಿವರಾಂ ಅವರು ನನ್ನನ್ನು ಬದಲಾಯಿಸಿ ಅವರ ಪಿ.ಎ.ಪ್ರಶಾಂತ್ ಪೂಜಾರಿಯವರನ್ನು ಸಮಿತಿಗೆ ಸೇರಿಸಿದ್ದಾರೆ. ನನ್ನ ಆಯ್ಕೆಗೆ ರಮಾನಾಥ ರೈ ಅವರು ಕಾರಣ ಎಂಬ ಮತ್ಸರದಿಂದ ಮೊದಲ ಆದೇಶದಲ್ಲಿದ್ದ ನನ್ನ ಹೆಸರನ್ನು ತೆಗೆಸಿ ಪ್ರಶಾಂತ ಪೂಜಾರಿ ಅವರನ್ನು ಸೇರಿಸಿ ಹೊಸ ಆದೇಶ ಮಾಡಿಸಿರುವುದನ್ನು ನಾನು ಖಂಡಿಸುತ್ತೇನೆ. ಕಾಂಗ್ರೆಸ್‌ನವರನ್ನೇ ಅವಮಾನಿಸಿದ ರಕ್ಷಿತ್ ಶಿವರಾಂ ಅವರ ನಡೆಯಿಂದ ಹಲವು ಕಾಂಗ್ರೆಸ್ ಕಾರ್ಯಕರ್ತರಿಗೆ ನೋವಾಗಿದೆ. ಪಕ್ಷದ ಕಾರ್ಯಕರ್ತರನ್ನು ಅವಮಾನಿಸದಂತೆ ರಕ್ಷಿತ್ ಶಿವರಾಂರವರಿಗೆ ಸೂಚನೆ ನೀಡಲು ಪಕ್ಷದ ಅಧ್ಯಕ್ಷರಿಗೆ ಮನವಿ ಮಾಡುತ್ತೇನೆ.
-ಪ್ರಶಾಂತ್ ರೈ ಅರಂತಬೈಲು, ಗೋಳಿತ್ತೊಟ್ಟು

LEAVE A REPLY

Please enter your comment!
Please enter your name here