ಅಭಿಪ್ರಾಯ ಪಡೆಯದೆ ನಿರ್ಧಾರ | ಪಕ್ಷದ ಹಿರಿಯ ಮುಖಂಡರ ಅತೃಪ್ತಿ
ನೆಲ್ಯಾಡಿ: ಕಡಬ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರಲ್ಲಿ ಅಪಸ್ವರ ಕೇಳಿಬಂದಿದೆ. ನಿಕಟಪೂರ್ವ ಅಧ್ಯಕ್ಷರು ಅಭಿಪ್ರಾಯ ಪಡೆಯದೆ ಏಕಾಏಕಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡರು ಅತೃಪ್ತಿ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ. ಅಲ್ಲದೇ ಮಂಗಳೂರಿಗೆ ಆಗಮಿಸಿದ ಕೆಪಿಸಿಸಿ ಹಿರಿಯ ಉಪಾಧ್ಯಕ್ಷರ ಗಮನಕ್ಕೂ ಈ ವಿಚಾರ ತಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನಿವಾಸಿ, ಉದ್ಯಮಿ ಅಭಿಲಾಷ್ ಪಿ.ಕೆ.ಅವರನ್ನು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಇತ್ತೀಚೆಗೆ ನೇಮಕಗೊಳಿಸಲಾಗಿತ್ತು. ಇದರಿಂದ ಅಸಮಾಧಾನಗೊಂಡಿರುವ ಪಕ್ಷದ ಹಿರಿಯ ಮುಖಂಡರ 1 ಗುಂಪು ನೆಲ್ಯಾಡಿಯ ಹೋಟೆಲ್ವೊಂದರಲ್ಲಿ ಸಭೆ ಸೇರಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದೆ. ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದ ಅಭಿಲಾಷ್ ತಮ್ಮ ಅವಧಿಯಲ್ಲಿ ಒಂದೇ ಒಂದು ಸಭೆ ನಡೆಸದೆ ಪಕ್ಷ ಸಂಘಟನೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಅವರೊಬ್ಬ ಉದ್ಯಮಿಯಾಗಿದ್ದು ಪಕ್ಷಕ್ಕಾಗಿ ಹೆಚ್ಚಿನ ಸಮಯ ಮೀಸಲಿಡುತ್ತಿಲ್ಲ. ಆದರೂ ನಿಕಟಪೂರ್ವ ಅಧ್ಯಕ್ಷ ಸುಧೀರ್ಕುಮಾರ್ ಹಾಗೂ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಒಂದಿಬ್ಬರು ಮುಖಂಡರು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಅಭಿಲಾಷ್ ಪಿ.ಕೆ.ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಪಕ್ಷದ ಮುಖಂಡರಿಂದ ಕೇಳಿಬಂದಿದೆ.
ಯಾರ ಅಭಿಪ್ರಾಯವೂ ಕೇಳಿಲ್ಲ:
ಕಡಬ ತಾಲೂಕಿನಲ್ಲಿ 42 ಗ್ರಾಮಗಳಿವೆ. ಎಲ್ಲಾ ಗ್ರಾಮಗಳಲ್ಲೂ ಪಕ್ಷದ ಮುಖಂಡರು, ಕಾರ್ಯಕರ್ತರು ಪಕ್ಷ ಸಂಘಟನೆ ನಿಟ್ಟಿನಲ್ಲಿ ಸಕ್ರೀಯವಾಗಿ ಕೆಲಸ ಮಾಡುತ್ತಿದ್ದಾರೆ. ಆದರೂ ಯಾರ ಅಭಿಪ್ರಾಯವನ್ನೂ ಪಡೆಯದೆ ಬ್ಯುಸಿನೆಸ್ ಮಾಡುತ್ತಿರುವ, ಮೆಚುರಿಟಿ ಇಲ್ಲದ ವ್ಯಕ್ತಿಯೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ದ.ಕ.ಜಿಲ್ಲಾ ಯುವ ಕಾಂಗ್ರೆಸ್ನ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭಿಲಾಷ್ 13ನೇ ಸ್ಥಾನ ಪಡೆದುಕೊಂಡು ಹೀನಾಯವಾಗಿ ಸೋತಿದ್ದರು. ಈ ಎಲ್ಲಾ ವಿಚಾರಗಳು ಗೊತ್ತಿದ್ದರೂ ಒಂದಿಬ್ಬರು ನಾಯಕರು ಪಕ್ಷದ ಹಿತ ಬದಿಗಿಟ್ಟು ತಮ್ಮ ಸ್ವ ಹಿತಾಸಕ್ತಿಗಾಗಿ ಯಾರ ಗಮನಕ್ಕೂ ತಾರದೆ ಅಭಿಲಾಷ್ ಪಿ.ಕೆ.ಅವರ ನೇಮಕ ಮಾಡಲಾಗಿದೆ ಎಂಬ ಮಾತು ಪಕ್ಷದ ಮುಖಂಡರಿಂದ ಕೇಳಿಬಂದಿದೆ.
ನೆಲ್ಯಾಡಿಯಲ್ಲಿ ಸಭೆ:
ಅಭಿಲಾಷ್ ಪಿ.ಕೆ.ನೇಮಕದಿಂದ ಅಸಮಾಧಾನಗೊಂಡಿರುವ ಪಕ್ಷದ ಹಿರಿಯ ನಾಯಕರ ಗುಂಪೊಂದು ನೆಲ್ಯಾಡಿಯಲ್ಲಿ ಸಭೆ ಸೇರಿ ಚರ್ಚೆ ನಡೆಸಿದೆ. ಈ ಸಭೆಯಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಳ್ಳೇರಿ, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಮಾಜಿ ಸದಸ್ಯರಾದ ಆಶಾ ಲಕ್ಷ್ಮಣ್, ಫಝಲ್ ಕೋಡಿಂಬಾಳ, ಕೆ.ಟಿ.ವಲ್ಸಮ್ಮ, ಡಿಸಿಸಿ ಸದಸ್ಯ ಸಿ.ಜೆ.ಸೈಮನ್, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶಾಕೀರ್, ಮುಖಂಡರಾದ ಕೆ.ಪಿ.ಅಬ್ರಹಾಂ ನೆಲ್ಯಾಡಿ, ಪೂವಪ್ಪ ಕರ್ಕೇರ, ಜೆ.ಪಿ.ಎಂ.ಚೆರಿಯನ್, ಸತೀಶ್ ಶೆಟ್ಟಿ ಬೀರುಕ್ಕು, ಸುಧೀರ್ ದೇವಾಡಿಗ, ಯತೀಶ್ ಬಾನಡ್ಕ, ಎ.ಕೆ.ಬಶೀರ್ ಸಹಿತ 50ಕ್ಕೂ ಹೆಚ್ಚು ಮುಖಂಡರು ಪಾಲ್ಗೊಂಡಿದ್ದು ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿಯುತ್ತಿರುವ ಹಿರಿಯರನ್ನು ಕಡೆಗಣಿಸಿ ಅಭಿಲಾಷ್ ಪಿ.ಕೆ.ಅವರ ನೇಮಕ ಮಾಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಕೆಪಿಸಿಸಿಗೆ ದೂರು:
ಅಭಿಲಾಷ್ ಪಿ.ಕೆ.ನೇಮಕದಿಂದ ಅಸಮಾಧಾನಗೊಂಡಿರುವ ಪಕ್ಷದ ನಾಯಕರ ಗುಂಪೊಂದು ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ್ದ ಕೆಪಿಸಿಸಿ ಹಿರಿಯ ಉಪಾಧ್ಯಕ್ಷರಾದ ನಾರಾಯಣ ಸ್ವಾಮಿ ಹಾಗೂ ಸುದರ್ಶನ್ ಅವರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅಭಿಲಾಷ್ ಪಿ.ಕೆ.,ಅವರ ಅಧ್ಯಕ್ಷತೆಯಲ್ಲಿ ಪಕ್ಷ ಸಂಘಟನೆ ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
ಅಭಿಪ್ರಾಯ ಪಡೆಯದೆ ನೇಮಕ ಸಮಂಜಸವಲ್ಲ:
ನಾನು 35 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿದ್ದೇನೆ. 10 ವರ್ಷ ವಲಯ ಕಾಂಗ್ರೆಸ್ ಅಧ್ಯಕ್ಷನಾಗಿ, 5 ವರ್ಷ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷನಾಗಿ, 2 ಸಲ ತಾ.ಪಂ.ಸದಸ್ಯನಾಗಿ, 1 ಸಲ ಜಿ.ಪಂ.ಸದಸ್ಯನಾಗಿಯೂ ಕೆಲಸ ಮಾಡಿದ್ದೇನೆ. ಕಡಬ ಬ್ಲಾಕ್ನ ಪಕ್ಷದ ಹಿರಿಯ ಮುಖಂಡರ, ಬ್ಲಾಕ್ನಲ್ಲಿ ಬೇರೆ ಬೇರೆ ಜವಾಬ್ದಾರಿಯಿರುವ ಪದಾಧಿಕಾರಿಗಳ ಅಭಿಪ್ರಾಯ ಪಡೆಯದೆ ನಿಕಟಪೂರ್ವ ಅಧ್ಯಕ್ಷ ಸುಧೀರ್ಕುಮಾರ್ ಶೆಟ್ಟಿಯವರು ತಮ್ಮ ಆಪ್ತ ವಲಯದಲ್ಲಿನ ಒಂದಿಬ್ಬರು ನಾಯಕರ ಅಭಿಪ್ರಾಯ ಪಡೆದು ಅಭಿಲಾಷ್ ಪಿ.ಕೆ.ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಸಮಂಜಸವಲ್ಲ. ಇದನ್ನು ಪಕ್ಷದ ಜಿಲ್ಲಾ ನಾಯಕರ ಗಮನಕ್ಕೂ ತರಲಾಗಿದೆ. ಈ ಬಗ್ಗೆ ಸೂಕ್ತ ಸ್ಪಂದನೆ ಸಿಗುವ ಭರವಸೆ ಇದೆ.
-ಸರ್ವೋತ್ತಮ ಗೌಡ
ದ.ಕ.ಜಿ.ಪಂ.ಮಾಜಿ ಸದಸ್ಯರು
ಹಿರಿಯರ ಕಡೆಗಣನೆ ಸರಿಯಲ್ಲ:
ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕದ ವೇಳೆ ಹಿರಿಯ ಕಾಂಗ್ರೆಸ್ ಮುಖಂಡರ ಕಡೆಗಣನೆ ಮಾಡಲಾಗಿದೆ. ಈಗ ಅಧ್ಯಕ್ಷರಾಗಿ ನೇಮಕಗೊಂಡಿರುವ ಅಭಿಲಾಷ್ ಪಿ.ಕೆ. ಮೂರು ವರ್ಷ ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ವೇಳೆ ಯುವ ಸಮಿತಿಗೆ ಸದಸ್ಯರ ನೇಮಕ ಮಾಡಿಲ್ಲ. ಒಂದೇ ಒಂದು ಸಭೆಯೂ ಮಾಡಿರುವುದು ದಾಖಲೆಯಲಿಲ್ಲ ಇಲ್ಲ. ಪಕ್ಷದ ಹೆಚ್ಚಿನ ಕಾರ್ಯಕರ್ತರಿಗೆ ಅವರ ಪರಿಚಯವೂ ಇಲ್ಲ. ಅವರು ಹುಟ್ಟುವ ಮೊದಲೇ ನಾವು ಪಕ್ಷದಲ್ಲಿ ಸಕ್ರೀಯವಾಗಿ ಹಲವು ಜವಾಬ್ದಾರಿಯನ್ನೂ ನಿಭಾಯಿಸಿದ್ದೇವೆ. ಹಿರಿಯ ಕಾಂಗ್ರೆಸ್ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನೇಮಕ ಮಾಡಿರುವುದು ಸರಿಯಲ್ಲ.
-ಬಾಲಕೃಷ್ಣ ಬಳ್ಳೇರಿ,
ಮಾಜಿ ಅಧ್ಯಕ್ಷರು, ಕಡಬ ಬ್ಲಾಕ್ ಕಾಂಗ್ರೆಸ್
ಪಕ್ಷದ ತೀರ್ಮಾನ:
ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಭಿಲಾಷ್ ಪಿ.ಕೆ.ಅವರ ನೇಮಕ ಪಕ್ಷದ ತೀರ್ಮಾನವಾಗಿದೆ. ನಿಯಮಬದ್ಧವಾಗಿ ಅರ್ಜಿ ಆಹ್ವಾನಿಸಿ ಆಯ್ಕೆ ನಡೆದಿದೆ. ಪಕ್ಷದ ಉಸ್ತುವಾರಿ ಜಿ.ಎ.ಬಾವಾ ಅವರು ಕಡಬಕ್ಕೆ ಆಗಮಿಸಿ ಸಭೆ ನಡೆಸಿದ್ದು ಆ ಸಭೆಯಲ್ಲಿ 47 ಮಂದಿ ಭಾಗವಹಿಸಿದ್ದರು. ಬಳಿಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಕಾರ್ಯಾಧ್ಯಕ್ಷರೊಂದಿಗೆ ಚರ್ಚಿಸಿಯೇ ಈ ನೇಮಕ ಮಾಡಿದ್ದಾರೆ. ಈಗ ಅಧ್ಯಕ್ಷರಾಗಿ ನೇಮಕಗೊಂಡಿರುವ ಅಭಿಲಾಷ್ ಅವರು ಸಮರ್ಥರಿದ್ದಾರೆ. 5 ವರ್ಷದಿಂದ ಪಕ್ಷದಲ್ಲಿ ಸಕ್ರಿಯವಾಗಿದ್ದಾರೆ. ನೀಡಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಅವರ ನೇಮಕದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರ ಸಹಮತವಿದೆ. ಆಕಾಂಕ್ಷಿಗಳಿಗೆ ಬೇಸರವಾಗುವುದು ಸಹಜ. ಮುಂದೆ ಎಲ್ಲವೂ ಸರಿಯಾಗಲಿದೆ.
-ಸುಧೀರ್ ಕುಮಾರ್
ನಿಕಟಪೂರ್ವ ಅಧ್ಯಕ್ಷರು, ಕಡಬ ಬ್ಲಾಕ್ ಕಾಂಗ್ರೆಸ್