ಐಬಿ ವೆಲ್ಫೇರ್ ಅಸೋಸಿಯೇಶನ್‌ನ ಕಾರ್ಯಕ್ರಮ ಸಮಾಜಕ್ಕೆ ಮಾದರಿ-ಪುತ್ತೂರು ತಂಙಳ್
ಪುತ್ತೂರು: ಐಬಿ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಮೂರನೇ ವರ್ಷದ ಅರ್ಹ ಬಡ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮ ಮಾ.4ರಂದು ಪುತ್ತೂರು ಬದ್ರಿಯಾ ಜುಮಾ ಮಸೀದಿ ಸಭಾಂಗಣದಲ್ಲಿ ನಡೆಯಿತು.
ದುವಾ ನೆರವೇರಿಸಿ ಕಿಟ್ ವಿತರಣೆಗೆ ಚಾಲನೆ ನೀಡಿದ ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೋಕೋಯ ತಂಙಳ್ ಮಾತನಾಡಿ, ಐಬಿ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಅರ್ಹ ಕುಟುಂಬಗಳಿಗೆ ಪ್ರತೀ ವರ್ಷ ಕಿಟ್ ನೀಡುತ್ತಿರುವುದು ಸಂತಸದ ವಿಚಾರ ಮತ್ತು ಇದು ಸಮಾಜಕ್ಕೆ ಮಾದರಿಯೆನಿಸಿದೆ, ಇದೇ ರೀತಿ ಶಿಕ್ಷಣ ಕ್ಷೇತ್ರಕ್ಕೂ ನೀವು ಸೇವೆ ನೀಡಬೇಕು, ಜೊತೆಗೆ ಅಮಲು ಪದಾರ್ಥಗಳ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಬೇಕೆಂದು ಹೇಳಿದರು.
ಸಂತ ಫೀಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಆಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ ಧರ್ಮಗಳೆಲ್ಲವೂ ಶಾಂತಿ, ಸಹೋದರತೆಯನ್ನು ಬೋಧಿಸಿದ್ದು ಪರಸ್ಪರ ಅರಿತುಕೊಂಡು ನಾವೆಲ್ಲಾ ಜೀವಿಸಿದಾಗ ಸಮಾಜ ಸುಂದರವಾಗಿರುತ್ತದೆ, ಪ್ರತಿಯೊಬ್ಬರೂ ಅವರವರ ಧರ್ಮವನ್ನು ಅನುಸರಿಸಿಕೊಂಡು ಇನ್ನೊಂದು ಧರ್ಮವನ್ನು ಗೌರವಿಸಿದಾಗ ಸಮಾಜ ನೆಮ್ಮದಿ ಕಾಣುತ್ತದೆ ಎಂದು ಹೇಳಿದರು. ನಮ್ಮ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಸೇರಿಕೊಂಡು ಪವಿತ್ರ ರಂಝಾನ್ ತಿಂಗಳಲ್ಲಿ ಬಡವರಿಗೆ ಕಿಟ್ ನೀಡುತ್ತಿರುವ ಪ್ರಶಂಸನೀಯ, ಇಂತಹ ಒಳ್ಳೆಯ ಕಾರ್ಯಕ್ರಮಗಳನ್ನು ಮುಂದುವರಿಸಿ ಎಂದು ಅವರು ಹೇಳಿದರು.
ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್ ಮಾತನಾಡಿ, ಐಬಿ ವೆಲ್ಫೇರ್ ಅಸೋಸಿಯೇಶನ್ ಸಂಸ್ಥೆಯು ಮಾದರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದಕ್ಕೆ ನಮ್ಮ ಸಹಕಾರ ಇದೆ, ಅರ್ಹ ಕುಟುಂಬಗಳಿಗೆ ರಂಝಾನ್ ಕಿಟ್ ಕೊಡುವ ಕಾರ್ಯ ಶ್ಲಾಘನೀಯ ಮತ್ತು ಮಾದರಿ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ, ಫಿಲೋಮಿನಾ ಕಾಲೇಜಿನಲ್ಲಿ ಕಲಿತ ನಿರ್ದಿಷ್ಟ ಬ್ಯಾಚಿನ ಯುವಕರು ಸೇರಿಕೊಂಡು ಏರ್ಪಡಿಸಿರುವ ಕಿಟ್ ವಿತರಣೆ ಶ್ಲಾಘನೀಯ, ಇದರ ಜೊತೆಗೆ ಅಮಲು ಪದಾರ್ಥಗಳಂತಹ ದುಶ್ಚಟಗಳಿಗೆ ವಿದ್ಯಾರ್ಥಿಗಳು ಬಲಿಯಾಗದಂತೆ ನೀವು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.

ಪುತ್ತೂರು ನಗರಸಭಾ ಸದಸ್ಯ ರಿಯಾಝ್ ಪರ್ಲಡ್ಕ ಮಾತನಾಡಿ, ಐಬಿ ವೆಲ್ಫೇರ್ ಅಸೋಸಿಯೇಶನ್ ಮೂಲಕ ಕಿಟ್ ವಿತರಿಸುವುದರಿಂದ ಅನೇಕ ಅರ್ಹ ಕುಟುಂಬಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ, ಇಂತಹ ಒಳ್ಳೆಯ ಕಾರ್ಯಕ್ರಮ ಯಾರು ಮಾಡಿದರೂ ನಮ್ಮ ಸಹಕಾರ ಇರಲಿದೆ ಎಂದು ಹೇಳಿದರು.
ಪತ್ರಕರ್ತ ಯೂಸುಫ್ ರೆಂಜಲಾಡಿ ಮಾತನಾಡಿ, ಯುವ ಪಡೆಯನ್ನು ಹೊಂದಿರುವ ಐಬಿ ವೆಲ್ಫೇರ್ ಅಸೋಸಿಯೇಶನ್ ಪ್ರತೀ ವರ್ಷ ಸಮಾಜಕ್ಕೆ ಮಾದರಿಯೆನಿಸಿದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಭವಿಷ್ಯದಲ್ಲಿ ಶಿಕ್ಷಣ ಕ್ಷೇತ್ರ ಮತ್ತು ಸಾಮಾಜಿಕ ಪಿಡುಗುಗಳ ವಿರುದ್ಧ ಸಂಘಟಿತ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಸರ್ವೆ ಕಲ್ಪಣೆ ಸರಕಾರಿ ಪ್ರೌಢ ಶಾಲಾ ಕಾರ್ಯಾಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಮಾತನಾಡಿ, ಐಬಿ ವೆಲ್ಫೇರ್ ಅಸೋಸಿಯೇಶನ್ ಸಂಸ್ಥೆಯು ಬಡವರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದು ನಿಮ್ಮ ಕಾರ್ಯಕ್ರಮಗಳಿಗೆ ನಮ್ಮ ಬೆಂಬಲ, ಪ್ರೋತ್ಸಾಹ ಸದಾ ಇರಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಐಬಿ ವೆಲ್ಫೇರ್ ಅಸೋಸಿಯೇಶನ್‌ನ ಅಧ್ಯಕ್ಷ ಇಬ್ರಾಹಿಂ ಬಾತಿಷಾ ಆತೂರು ಮಾತನಾಡಿ, 2014-17 ನೇ ಸಾಲಿನ ಸಂತ ಫೀಲೋಮಿನಾ ಕಾಲೇಜಿನ ವಿದ್ಯಾರ್ಥಿಗಳ ಬಳಗದ ಸಂಘಟನೆ ನಮ್ಮದಾಗಿದ್ದು ನಮ್ಮ ಬಳಗದ ಗೆಳೆಯ ಇಹ್‌ತಿಶಾಂ ಎಂಬವರು ಅಕಾಲಿಕ ನಿಧನ ಹೊಂದಿದ ಬಳಿಕ ಆತನ ನೆನಪಿಗಾಗಿ ‘ಇಹ್‌ತಿಶಾಂ ಬ್ರದರ‍್ಸ್’(ಐ.ಬಿ) ಎನ್ನುವ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡು ಸಮಾಜಮುಖಿಯಾಗಿ ಕಾರ್ಯಾಚರಿಸುತ್ತಿದ್ದೇವೆ. ಕಿಟ್ ವಿತರಣೆ ಮಾತ್ರವಲ್ಲದೇ ಇನ್ನಿತರ ಸಮಾಜಮುಖಿ ಕಾರ್ಯಕ್ರಮಗಳನ್ನು ಕೂಡಾ ಹಮ್ಮಿಕೊಂಡಿದ್ದೇವೆ. ಇದಕ್ಕೆ ಊರಲ್ಲಿರುವ ಮತ್ತು ವಿದೇಶದಲ್ಲಿರುವ ನಮ್ಮ ಬ್ಯಾಚ್‌ನ ಗೆಳೆಯರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ, ಈ ಬಾರಿ 80 ಕುಟುಂಬಗಳಿಗೆ ಕಿಟ್ ವಿತರಿಸುತ್ತೇವೆ ಎಂದು ಅವರು ಹೇಳಿದರು.
ಐಬಿ ವೆಲ್ಫೇರ್ ಅಸೋಸಿಯೇಶನ್‌ನ ಕಾರ್ಯಾಧ್ಯಕ್ಷ ಸಲೀತ್ ಎ.ಕೆ ವಂದಿಸಿದರು. ರಫೀಕ್ ಗೋಳಿತ್ತಡಿ ಕಾರ್ಯಕ್ರಮ ನಿರೂಪಿಸಿದರು. ಐಬಿ ವೆಲ್ಫೇರ್ ಅಸೋಸಿಯೇಶನ್‌ನ ಸದಸ್ಯರಾದ ನೌಷಾದ್, ಮುಸ್ತಫಾ, ನೂರುದ್ದೀನ್, ಇರ್ಷಾದ್, ನಾಸಿರ್, ಅಸ್ಕರ್, ಸವಾದ್, ಮುಖ್ತಾರ್ ಸಹಕರಿಸಿದರು.