ಪುತ್ತೂರು:ಸುಮಾರು ಎಂಟು ವರ್ಷಗಳ ಹಿಂದೆ ದಾಖಲಾಗಿದ್ದ ಅಕ್ರಮ ಮದ್ಯ ಮಾರಾಟ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
2017ರ ನ.14ರಂದು ರಾತ್ರಿ ಅಬಕಾರಿ ನಿರೀಕ್ಷಕ ವಿಜಯ ಕುಮಾರ್ರವರು ಸಿಬ್ಬಂದಿಗಳೊಂದಿಗೆ 34 ನೆಕ್ಕಿಲಾಡಿ ಗ್ರಾಮದ ಮಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿಯ ಪುತ್ತೂರಿಗೆ ಹೋಗುವ ಕೂಡು ರಸ್ತೆಯ ಬಸ್ ತಂಗುದಾಣದ ಬಳಿ ದಾಳಿ ನಡೆಸಿದಾಗ ನಿತ್ಯಾನಂದ ಪೂಜಾರಿ ಎಂಬವರು ಅಕ್ರಮವಾಗಿ ಮದ್ಯ ಹೊಂದಿ ಮಾರಾಟ ಮಾಡುತ್ತಿದ್ದದ್ದು ಪತ್ತೆಯಾಗಿತ್ತು. ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಮದ್ಯವನ್ನು ಸಂಜೀವ ಪೂಜಾರಿ ಎಂಬವರ ಬಾರ್ನಿಂದ ಖರೀದಿ ಮಾಡಿರುವುದು ತನಿಖೆವೇಳೆ ಕಂಡು ಬಂದ ಹಿನ್ನೆಲೆ ಬಾರ್ ಮಾಲಕ ಸಂಜೀವ ಪೂಜಾರಿಯವರನ್ನು 2ನೇ ಆರೋಪಿಯನ್ನಾಗಿ ಸೇರಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ಪುತ್ತೂರು ಇದರ ನ್ಯಾಯಾಧೀಶ ಶಿವಣ್ಣ ಹೆಚ್.ಆರ್.ರವರು ಆರೋಪಿಗಳನ್ನು ದೋಷಮುಕ್ತರೆಂದು ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.
ಆರೋಪಿ ನಿತ್ಯಾನಂದ ಪೂಜಾರಿ ಪರ ವಕೀಲ ರಾಕೇಶ್ ಮಸ್ಕರೇನ್ಹಸ್ ಮತ್ತು ಆರೋಪಿ ಸಂಜೀವ ಪೂಜಾರಿಯವರ ಪರ ಹಿರಿಯ ವಕೀಲ ಮಹೇಶ್ ಕಜೆ ಅವರು ವಾದಿಸಿದ್ದರು.