ನರೇಂದ್ರ ಪ.ಪೂ.ಕಾಲೇಜಿನಲ್ಲಿ ವ್ಯವಹಾರ ಕ್ಲಬ್ ವತಿಯಿಂದ ಬ್ಯಾಂಕಿಂಗ್ ಬಗ್ಗೆ ವಿಶೇಷ ಉಪನ್ಯಾಸ

0

ಪುತ್ತೂರು: ಬ್ಯಾಂಕುಗಳು ಆಧುನಿಕ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿದೆ. ಅವು ದೇಶದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜನರಲ್ಲಿ ಉಳಿತಾಯದ ಹವ್ಯಾಸವನ್ನು ಪ್ರೋತ್ಸಾಹಿಸಲು ಬ್ಯಾಂಕುಗಳು ಕಾಲಕಾಲಕ್ಕೆ ವಿವಿಧ ಯೋಜನೆಗಳನ್ನು ನೀಡುತ್ತವೆ. ಬ್ಯಾಂಕಿನಲ್ಲಿ ಹಾಕುವ ಹಣವು ಉಳಿತಾಯವಾಗುವುದಲ್ಲದೆ ಬೆಳೆಯುತ್ತದೆ. ವ್ಯವಹಾರಗಳ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ವ್ಯಕ್ತಿಗಳ ಹಣ ಮತ್ತು ಇತರ ಅಮೂಲ್ಯ ಆಸ್ತಿಗಳನ್ನು ರಕ್ಷಿಸುವ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ದೇಶದ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಖಂಡಿತವಾಗಿಯೂ ಅವಿಭಾಜ್ಯ ಪಾತ್ರವನ್ನು ವಹಿಸುತ್ತವೆ. ಎಂದು ಪುತ್ತೂರಿನ ಯುನಿಯನ್ ಬ್ಯಾಂಕ್ ನ ಸೀನಿಯರ್ ಮ್ಯಾನೇಜರ್ ಆಗಿರುವ ಸುರೇಶ್ ನಾಯಕ್ ಇವರು ಹೇಳಿದರು.


ತೆಂಕಿಲದ ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಉದ್ಯಮ ಕ್ಷೇತ್ರದ ಕೌಶಲ್ಯ ಮತ್ತು ಜ್ಞಾನವನ್ನು ಸುಧಾರಿಸುವ ರಿಟೈಲ್ ಬ್ಯುಸಿನೆಸ್ ತರಬೇತಿ ಕ್ಲಬ್ ವ್ಯವಹಾರ ವತಿಯಿಂದ ಆಯೋಜಿಸಿದ ಬ್ಯಾಂಕಿಂಗ್ ವಿಷಯಾಧಾರಿತ ಉಪನ್ಯಾಸ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.


ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಪುತ್ತೂರಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಇದರ ನಿವೃತ್ತ ಮ್ಯಾನೇಜರ್ ಜಗದೀಶ ನಾಯಕ್ ರವರು ಮಾತನಾಡುತ್ತಾ ಬ್ಯಾಂಕುಗಳು ವ್ಯಾಪಾರಿಗಳಿಗೆ ಸಾಲ ಮತ್ತು ಮುಂಗಡಗಳನ್ನು ಒದಗಿಸುವ ಮೂಲಕ ದೇಶದೊಳಗೆ ವ್ಯಾಪಾರವನ್ನು ಉತ್ತೇಜಿಸುತ್ತವೆ. ಇದು ವಿವಿಧ ದೇಶಗಳ ನಡುವಿನ ವ್ಯಾಪಾರ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಪ್ರಕ್ರಿಯೆಯನ್ನು ಸುಗಮಗೊಳಿಸಲು ಅವು ಸುಲಭವಾದ ಹಣದ ವಹಿವಾಟು ಆಯ್ಕೆಗಳನ್ನು ಒದಗಿಸುತ್ತವೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಪ್ರಗತಿಯೊಂದಿಗೆ ಎಲ್ಲಿಂದಲಾದರೂ ಹಣವನ್ನು ಕಳುಹಿಸುವುದು ಮತ್ತು ಸ್ವೀಕರಿಸುವುದು ಸುಲಭವಾಗಿದೆ ಎಂದು ಹೇಳಿದರು.


ಚೆಕ್ ಮತ್ತು ಬ್ಯಾಂಕ್ ವ್ಯವಹಾರಗಳ ಫಾರಮ್ ಭರ್ತಿ ಮಾಡುವ ಬಗ್ಗೆ, ಲಾಕರ್ ಸೌಲಭ್ಯ, ನಿಧಿಗಳ ವರ್ಗಾವಣೆ, ಡ್ರಾಫ್ಟ್‌ಗಳ ವಿತರಣೆ ಮುಂತಾದ ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡಿದರು.


ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಕಬಕ ಸತೀಶ್ ರಾವ್ ರವರು ಮಾತನಾಡುತ್ತಾ ಯುವಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಹಾಗೂ ಉದ್ಯಮಶೀಲರಾಗಲು ಬೇಕಾದ ಜ್ಞಾನದ ಜೊತೆಗೆ ಸೂಕ್ತ ಮಾರ್ಗದರ್ಶನವನ್ನು ಈ ವ್ಯವಹಾರ ತರಬೇತಿ ಕಾರ‍್ಯಕ್ರಮ ನೀಡುತ್ತಿದೆ.ಅದರ ಸದುಪಯೋಗವನ್ನು ಪಡೆದುಕೊಂಡು ಆರ್ಥಿಕ ಬೆಳವಣಿಗೆಯ ಜೊತೆಗೆ ಸಾಮಾಜಿಕ ಪ್ರಗತಿಯಲ್ಲಿ ಕೈಜೋಡಿಸಬೇಕಿದೆ.ಎಂದು ಹೇಳಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ಶಾನ್ವಿ ಸ್ವಾಗತಿಸಿ, ಶಾಲ್ಮಲಿ ವಂದಿಸಿದರು.

LEAVE A REPLY

Please enter your comment!
Please enter your name here