ಪುತ್ತೂರು: 2017ರಲ್ಲಿ ಕೆಎಸ್ಆರ್ಟಿಸಿ ಬಸ್ಸಿಗೆ ಕಲ್ಲೆಸೆದು ಹಾನಿಗೊಳಿಸಿದ್ದ ಪ್ರಕರಣದ ಆರೋಪಿಗಳಿಬ್ಬರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
2017ರ ಫೆ.25ರಂದು ಎಪಿಎಂಸಿ ರಸ್ತೆ ಹೀರೋ ಶೋರೂಂ ಬಳಿ ಘಟನೆ ನಡೆದಿತ್ತು. ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಎಪಿಎಂಸಿ ರಸ್ತೆಯಲ್ಲಿ ಬಂದು ಹೀರೋ ಶೋರೂಂ ಎದುರು ತಲುಪುವ ಸಮಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಕಡೆಯಿಂದ ಎಪಿಎಂಸಿ ಕಡೆಗೆ ಹೋಗುವ ಆಕ್ಟೀವಾ ಮೋಟಾರ್ ಸೈಕಲ್ನಲ್ಲಿ ಬಂದ ಆರೋಪಿಗಳು ಬಸ್ಸಿನ ಎದುರು ಗಾಜಿಗೆ ಕಲ್ಲೆಸೆದ ಪರಿಣಾಮ ಬಸ್ಸಿನ ಎದುರಿನ ಗ್ಲಾಸ್ ಒಡೆದುಹೋಗಿ ಸುಮಾರು 12 ಸಾವಿರ ರೂ.ನಷ್ಟ ಉಂಟಾಗಿತ್ತು ಎಂದು ಬಸ್ಸಿನ ಚಾಲಕ ಗಂಗಾಧರ ಎಂಬವರು ನೀಡಿದ ದೂರಿನ ಮೇರೆಗೆ ಬಲ್ನಾಡು ಗ್ರಾಮದ ಒಳಕಡ್ಯ ನಿವಾಸಿ ಪುನೀತ್ ಹಾಗೂ ಕೈಂತಿಲ ಹರ್ಷಿತ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳನ್ನು ನಿರ್ದೋಷಿಗಳೆಂದು ಬಿಡುಗಡೆಗೊಳಿಸಿದೆ. ಆರೋಪಿಗಳ ಪರ ವಕೀಲರಾದ ಮಾಧವ ಪೂಜಾರಿ,ರಾಕೇಶ್ ಬಲ್ನಾಡ್, ಮೋಹಿನಿ ವಾದಿಸಿದ್ದರು.