ಪುಣಚ: ಪುಣಚ ಗ್ರಾಮದ ನೀರುಮಜಲು ಶ್ರೀ ಕೋಟಿ ಚೆನ್ನಯ ಗರಡಿಯಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಬ್ರಹ್ಮ ಬೈದೆರ್ಕಳ ನೇಮೋತ್ಸವ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಾ.12ರಂದು ಸಂಭ್ರಮದಿಂದ ನಡೆಯಿತು.
ಮಾ.11ರಂದು ಬೆಳಿಗ್ಗೆ ನಾಗತಂಬಿಲ, ರಾತ್ರಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಕಾರ್ತಿಕ ಪೂಜೆ ನಡೆಯಿತು.
ಮಾ.12ರಂದು ಬೆಳಿಗ್ಗೆ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರ ಪೌರೋಹಿತ್ಯದಲ್ಲಿ ಮಹಾಗಣಪತಿ ಹೋಮ ನಡೆದು, ಮಧ್ಯಾಹ್ನ ಶುದ್ಧ ಕಲಶಾದಿ ಹೋಮ, ತಂಬಿಲ ನಡೆಯಿತು. ರಾತ್ರಿ ಶ್ರೀ ಬೈದರ್ಕಳ ಗರಡಿ ಇಳಿಯುವ ಕಾರ್ಯಕ್ರಮ, ಆಯುಧ ಒಪ್ಪಿಸುವುದು, ಮಾಯಂದಾಳ್ ದೇವಿಯ ಉತ್ಸವ, ಪೂಜಾರಿಗಳ ಸೇಟು, ಬೈದೆರ್ಕಳ ಸೇಟು ನಡೆದು ಮಾ.13ರ ಮುಂಜಾನೆ ಪ್ರಸಾದ ವಿತರಣೆ ನಡೆಯಿತು.

ಮಧ್ಯಾಹ್ನ ಮತ್ತು ರಾತ್ರಿ ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆ ನಡೆಯಿತು. ಗಣ್ಯರು, ಮಿತ್ರರು, ಊರ ಹಾಗೂ ಪರಊರ ಸಾವಿರಾರು ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಗರಡಿಯ ಆಡಳಿತ ಮುಖ್ಯಸ್ಥರಾದ ಸಂಕಪ್ಪ ಪೂಜಾರಿ ನೀರುಮಜಲು, ಸೀತಾರಾಮ ಪೂಜಾರಿ ನೀರುಮಜಲು, ಗರಡಿ ಮನೆಯ ನಾರಾಯಣ ಪೂಜಾರಿ ನೀರುಮಜಲು ಅತಿಥಿಗಳನ್ನು ಭಕ್ತಾದಿಗಳನ್ನು ಸ್ವಾಗತಿಸಿದರು. ಯುವವಾಹಿನಿ ವಿಟ್ಲ ಘಟಕದ ಪದಾಧಿಕಾರಿಗಳು, ಸದಸ್ಯರು ಅನ್ನ ಸಂತರ್ಪಣೆಯಲ್ಲಿ ಸ್ವಯಂ ಸೇವಕರಾಗಿ ಸಹಕರಿಸಿದರು.