ಪುಡಾ ಅಧ್ಯಕ್ಷರಾಗಿ ಅಮಳ ರಾಮಚಂದ್ರ ಬಹುತೇಕ ಖಚಿತ

0

ಪುತ್ತೂರು: ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರ(ಪುಡಾ) ಅಧ್ಯಕ್ಷರಾಗಿ ಅಮಳ ರಾಮಚಂದ್ರ ಅವರು ಆಯ್ಕೆಗೊಳ್ಳುವುದು ಬಹುತೇಕ ಖಚಿತಗೊಂಡಿದ್ದು ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.


ಕಳೆದ ಎಂಟು ತಿಂಗಳಿನಿಂದ ಖಾಲಿಯಿರುವ ಪುಡಾ ಅಧ್ಯಕ್ಷ ಸ್ಥಾನಕ್ಕೆ ಕೆಲವರ ಹೆಸರು ಮುನ್ನಲೆಗೆ ಬಂದಿತ್ತಾದರೂ ಅಂತಿಮವಾಗಿ ಕೆಪಿಸಿಸಿ ವಕ್ತಾರರೂ ಆಗಿರುವ ಅಮಳ ರಾಮಚಂದ್ರ ಅವರ ಹೆಸರೇ ಫೈನಲ್ ಆಗಿದೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಮುಖಂಡರು, ನ್ಯಾಯವಾದಿಯೂ ಆಗಿರುವ ಭಾಸ್ಕರ ಕೋಡಿಂಬಾಳ ಅವರು ಪುಡಾ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಶಾಸಕ ಅಶೋಕ್ ರೈ ಅವರ ಶಿಫಾರಸಿನಂತೆ ನೇಮಕ ನಡೆದಿತ್ತು. ಆದರೆ ಅವರು ಅಧ್ಯಕ್ಷರಾದ ಕೆಲವೇ ತಿಂಗಳಲ್ಲಿ ಶಾಸಕರ ಮಾತಿನಿಂದ ಮುನಿಸಿಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಭಾಸ್ಕರ ಕೋಡಿಂಬಾಳ ಅವರ ದಿಢೀರ್ ರಾಜೀನಾಮೆ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯೂ ಆಗಿತ್ತು. ಅಂತಿಮವಾಗಿ ಅವರು ಯಾರ ಮನವೊಲಿಕೆಗೂ ಒಪ್ಪದ ಕಾರಣ ಅವರ ರಾಜೀನಾಮೆ ಅಂಗೀಕಾರಗೊಂಡಿತ್ತು.

ಅಮಳ ರಾಮಚಂದ್ರ ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಪಕ್ಷದ ಇನ್ನಿತರ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಮುಖ ಭಾಷಣಗಾರರೂ ಆಗಿರುವ ಅಮಳ ರಾಮಚಂದ್ರ ಅವರು ಪಕ್ಷದ ಯೋಜನೆ, ಸಿದ್ದಾಂತ, ಕಾರ್ಯಕ್ರಮಗಳನ್ನು ಪ್ರಬಲವಾಗಿ ಸಮರ್ಥಿಸುವ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಆಲಿ ಹೆಸರು ಮುನ್ನೆಲೆಗೆ:

ಪುಡಾ ಅಧ್ಯಕ್ಷರ ಆಯ್ಕೆ ವಿಚಾರ ಕಾಂಗ್ರೆಸ್‌ಗೂ ಒಂದು ರೀತಿಯ ತಲೆ ನೋವಾಗಿ ಪರಿಣಮಿಸಿತ್ತು. ಭಾಸ್ಕರ ಕೋಡಿಂಬಾಳ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಗರ ಸಭೆಯ ಮಾಜಿ ಸದಸ್ಯ ಎಚ್ ಮುಹಮ್ಮದ್ ಆಲಿಯವರ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತು. ಮುಹಮ್ಮದ್ ಆಲಿಯವರೇ ಪುಡಾ ಅಧ್ಯಕ್ಷರಾಗುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಅದರ ಜೊತೆಗೆ ಇನ್ನಿತರ ಕೆಲವು ಕಾಂಗ್ರೆಸ್ ಮುಖಂಡರುಗಳ ಹೆಸರೂ ಕೇಳಿ ಬಂದಿತ್ತು. ಇದೀಗ ಅಂತಿಮವಾಗಿ ಅಮಳ ರಾಮಚಂದ್ರ ಅವರ ಹೆಸರನ್ನು ಶಾಸಕರು ಅಂತಿಮಗೊಳಿಸಿ ಸಿಎಂ ಅವರಿಗೆ ರವಾನಿಸಿದ್ದು ಅವರ ಹೆಸರೇ ಪುಡಾ ಅಧ್ಯಕ್ಷತೆಗೆ ಕೆಲವೇ ದಿನಗಳಲ್ಲಿ ಘೋಷಣೆಯಾಗುತ್ತದೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here