ವಿಟ್ಲ: ನವಿಲು ಬಸದಿ ಎಂದು ಜನಪ್ರಿಯತೆಯನ್ನು ಪಡೆದಿರುವ ವಿಟ್ಲದ ಭಗವಾನ್ 1008 ಚಂದ್ರನಾಥ ಸ್ವಾಮೀ ಬಸದಿಯಲ್ಲಿ ಮಾ.14ರಂದು ಬೆಳಿಗ್ಗೆ 7 ಗಂಟೆಯಿಂದ ಸಂಕ್ರಮಣ ದಿನದ ವಿಶೇಷ ಪೂಜೆ ನಡೆಯಲಿದೆ.
ಬಸದಿಯ ಕ್ಷೇತ್ರ ರಕ್ಷಕನಾಗಿ ಪ್ರತಿಷ್ಠಾಪಿಸಲ್ಪಟ್ಟಿರುವ ಶ್ರೀ ಕ್ಷೇತ್ರಪಾಲ ದೇವರ ಕಾರಣಿಕ ಅಪಾರವಾಗಿದ್ದು, ಮುಂದಿನ ದಿನಗಳಲ್ಲಿ ಪ್ರತೀ ಸಂಕ್ರಮಣದಂದು ಇಡೀ ದಿನ ವಿಶೇಷ ಪೂಜೆಯನ್ನು ನೆರವೇರಿಸುವ ಸಂಕಲ್ಪ ಮಾಡಲಾಗಿದೆ. ಒಟ್ಟಿನಲ್ಲಿ ಇಡೀ ಬಸದಿಯ ಪರಿಸರವೂ ದೈವಿಕ ಕಳೆಯಿಂದ ವಿಶೇಷವಾಗಿ ಕಂಗೊಳಿಸುತ್ತಿದೆ. ಬರುವ ಭಕ್ತರ ಅನುಕೂಲಕ್ಕಾಗಿ ಅರ್ಚಕರಲ್ಲದೇ, ಇಬ್ಬರು ಉಸ್ತುವಾರಿಯ ಕಾರ್ಯಕರ್ತರನ್ನೂ ನೇಮಿಸಲಾಗಿದೆ. ಸಹೃದಯರಾದ ಧರ್ಮಬಂಧುಗಳು ವಿಟ್ಲ ಬಸದಿಗೆ ಬಂದು ಶ್ರೀ ದೇವ ದೇವಿಯರ ಸಾನಿಧ್ಯದಲ್ಲಿ ಪೂಜೆಗೈದು-ಪ್ರಾರ್ಥನೆ ಸಲ್ಲಿಸುವುದಕ್ಕೆ ಬೇಕಾದ ಎಲ್ಲಾ ರೀತಿಯ ಅನುಕೂಲತೆಗಳನ್ನು ಕಲ್ಪಿಸಲಾಗಿದೆ.
ಬಸದಿಯ ವೈಶಿಷ್ಟ್ಯ:
ಬಸದಿಯ ಗೋಪುರದ ಬಾಗಿಲಿನ ಎಡಬಲದಲ್ಲಿ ಎರಡು ಸುಂದರ ಆನೆಕಲ್ಲುಗಳಿವೆ. ವಿಶಾಲವಾದ ಗೋಪುರವಿದೆ. ಬಸದಿಯ ಮುಂಭಾಗದಲ್ಲಿ ಸುಂದರ ಕೆತ್ತನೆಯಿಂದ ಕೂಡಿದ ಆಕರ್ಷಕ ಕಂಬಗಳಿವೆ. ಕುಳಿತು ಭಜಿಸಲು ಸಾಕಷ್ಟು ಸ್ಥಳಾವಕಾಶವುಳ್ಳ ಪ್ರಾರ್ಥನಾ ಮಂಟಪವಿದೆ. ಅಲ್ಲಿಂದಲೇ ಎಲ್ಲರೂ ನಿರಾಳವಾಗಿ ದೇವರದರ್ಶನ ಮಾಡಲು ಅನುಕೂಲವಾಗುವ ರೀತಿಯ ವಿಶಾಲವಾದ ಪ್ರವೇಶ ದ್ವಾರವಿದೆ. ಬಸದಿಯ ಸುತ್ತಲೂ ಆನೆ, ಸಿಂಹ, ನವಿಲುಗಳ ಸಾಲುಪಟ್ಟಿಕೆಗಳಿವೆ. ಅಲ್ಲಲ್ಲಿ ಗೋಡೆಯ ಮೇಲೆ ಅಳವಡಿಸಿದ ಸುಂದರ ನೀತಿ ಸಂದೇಶವನ್ನು ಹೊಂದಿದ ಅಮೂಲ್ಯ ಶಿಲಾಚಿತ್ರಗಳಿವೆ. ಬಸದಿಯ ಮೇಲ್ಬಾವಣಿಗೆ ನವಿಲಿನ ಹಸಿರು, ನೇರಳೆ ಮತ್ತು ಸ್ವರ್ಣವರ್ಣದಿಂದ ಕೂಡಿದ ವಿದೇಶದಿಂದ ತರಿಸಿರುವ ತಾಮ್ರದ ಹೊದಿಕೆಯಿದೆ, ಮೇಲೆ ನವಿಲಿನ ಪ್ರತಿಕೃತಿ ಮತ್ತು ಸುಂದರ ಮಂಗಲಕಲಶಗಳು ಶೋಭಿಸುತ್ತಿವೆ. ಒಟ್ಟಿನಲ್ಲಿ ವಿಟ್ಲ ಬಸದಿ ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆಂದು ಹಂಬಲಿಸುವ ರೀತಿಯಲ್ಲಿ ಸರ್ವಾಂಗ ಸುಂದರವಾಗಿ ಪೇಟೆಯ ಮಧ್ಯೆ ಕಂಗೊಳಿಸುತ್ತಿದೆ. ಭಕ್ತಬಂದುಗಳು ಕ್ಷೇತ್ರಕ್ಕೆ ಆಗಮಿಸಿ ಇಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.