ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಭಿವೃದ್ಧಿ ಕೆಲಸಗಳ ಬಗ್ಗೆ ನಡೆದ ತಾಂಬೂಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಮಾ.8ರಿಂದ ಆರಂಭಗೊಂಡ ವಿವಿಧ ಪರಿಹಾರ ಕಾರ್ಯಕ್ರಮಗಳು ಮಾ.14ರಂದು ಆಶ್ಲೇಷಬಲಿ ಮತ್ತು ಮುಷ್ಠಿಕಾಣಿಕೆ ಸಮರ್ಪಣೆಯೊಂದಿಗೆ ಪೂರ್ಣಗೊಂಡಿದೆ.
ಮಾ.8 ರಂದು ಸಂಜೆ ಅಘೋರ ಹೋಮ, ಬಾದೋಚ್ಚಾಟನೆ, ವನದುರ್ಗಾಹೋಮ ನಡೆಯಿತು. ಮಾ.9ಕ್ಕೆ ಬೆಳಿಗ್ಗೆ ಗಂಟೆ 8ಕ್ಕೆ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ನವಗ್ರಹ ಶಾಂತಿಹೋಮ, ಮೃತ್ಯುಂಜಯ ಹೋಮ, ಸಂಜೆ ಗಂಟೆ ದುರ್ಗಾಪೂಜೆ, ರಾತ್ರಿ ದೈವ ತಂಬಿಲ, ಮಾ.10ಕ್ಕೆ ಪವಮಾನ ಹೋಮ, ಭೂ ವರಾಹ ಶಾಂತಿ, ತಿಲಹೋಮ, ಹಾಗು ಮಾ.11ಕ್ಕೆ ಸರ್ಪಸಂಸ್ಕಾರ, ಮಾ.14ಕ್ಕೆ ಬೆಳಿಗ್ಗೆ ಪಂಚಗವ್ಯ, ಪುಣ್ಯಾರ್ಚನೆ, ಮಧ್ಯಾಹ್ನ ಮೂಲ ನಾಗ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ಬ್ರಹ್ಮಚಾರಿ ಆರಾಧನೆ ನಡೆದ ಬಳಿಕ ಶ್ರೀ ದೇವಳದಲ್ಲಿ ಮಧ್ಯಾಹ್ನ ಪೂಜೆಯ ಮುಂದೆ ಮುಷ್ಠಿಕಾಣಿಕೆ ಸಮರ್ಪಣೆ ಮಾಡಲಾಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಅರ್ಚಕರು, ಚಾಕ್ರಿಯವರು, ನಿತ್ಯ ಸೇವಕರು, ಕಚೇರಿ ಸಿಬ್ಬಂದಿಗಳು, ಭಕ್ತರು ಮುಷ್ಠಿಕಾಣಿಕೆ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸಮಿತಿ ಸದಸ್ಯರಾದ ವಿನಯ್ ಸುವರ್ಣ, ಮಹಾಬಲ ರೈ ವಳತ್ತಡ್ಕ, ಕೃಷ್ಣವೇಣಿ, ಸುಭಾಷ್ ರೈ ಬೆಳ್ಳಿಪ್ಪಾಡಿ, ಈಶ್ವರ ಬೇಡೆಕರ್, ದಿನೇಶ್ ಪಿ.ವಿ, ನಳಿನಿ ಪಿ ಶೆಟ್ಟಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಹಿರಿಯರಾದ ಕಿಟ್ಟಣ್ಣ ಗೌಡ, ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯ ರಾಮದಾಸ್ ಗೌಡ, ಈಶ್ವರ ಭಟ್ ಪಂಜಿಗುಡ್ಡೆಯವರ ಪುತ್ರ ವರುಣ್ ಪಂಜಿಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಅರ್ಚಕರೂ ಆಗಿರುವ ವೇ ಮೂ ವಸಂತ ಕೆದಿಲಾಯ ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ದೇವ್ಥಾನದಲ್ಲಿ ಮಧ್ಯಾಹ್ನದ ಮಹಾಪೂಜೆ ನೆರವೇರಿಸಿದರು.