ಉಪ್ಪಿನಂಗಡಿ: ಹರಿಯುವ ನೀರನ್ನು ತಡೆ ಹಿಡಿದು ಹಿನ್ನೀರು ಸಂಗ್ರಹಿಸಿ ಅಂತರ್ಜಲ ವೃದ್ಧಿಗೆಂದು ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ಅಣೆಕಟ್ಟು ನಿರ್ಮಿಸಲಾಗಿದೆ. ಆದರೆ ಈ ಬಾರಿ ಅಣೆಕಟ್ಟಿನ ಗೇಟು ಅಳವಡಿಕೆಯಲ್ಲಿ ಲೋಪವಾಗಿದ್ದರಿಂದ ಗಮನಾರ್ಹ ನೀರು ಸೋರಿಕೆಯಾಗುತ್ತಿರುವ ಬಗ್ಗೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಳಿಯೂರು ಅಣೆಕಟ್ಟಿನಲ್ಲಿ ನಾಲ್ಕು ಮೀಟರ್ ಎತ್ತರದ ಗೇಟು ಅಳವಡಿಸಲಾಗಿದ್ದು, ಇದರ ಪರಿಣಾಮ ಉಪ್ಪಿನಂಗಡಿಯ ಹಳೆಗೇಟುವರೆಗೆ ನೇತ್ರಾವತಿ ನದಿಯಲ್ಲಿ ಹಿನ್ನೀರು ಸಂಗ್ರಹವಾಗುತ್ತಿದೆ. 2024 ರ ಬೇಸಿಗೆಯಲ್ಲಿ ನದಿಯಲ್ಲಿ ಸಮರ್ಪಕವಾಗಿ ಹಿನ್ನೀರು ಸಂಗ್ರಹಿಸಲ್ಪಟ್ಟು, ಬಿರು ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಇಲ್ಲಿ ಸಂಗ್ರಹವಾದ ನೀರು ಆಸರೆಯಾಗಿತ್ತು. ಈ ಬಾರಿ ಅಣೆಕಟ್ಟಿನ ಗೇಟು ಅಳವಡಿಕೆಯ ಕಾರ್ಯದಲ್ಲಿ ಗಮನಾರ್ಹ ಲೋಪವುಂಟಾಗಿದ್ದು, ದೊಡ್ಡ ಪ್ರಮಾಣದ ನೀರು ಸೋರಿಕೆಯಾಗುತ್ತಿದೆ. ಪ್ರಸಕ್ತ ನದಿಯಲ್ಲಿ ನೀರಿನ ಹರಿವು ಜೀವಂತವಿದ್ದು, ಅಣೆಕಟ್ಟಿನಲ್ಲಿ ನೀರು ತುಂಬಿ ಗೇಟಿನ ಮೇಲಿಂದ ಧುಮ್ಮುಕ್ಕಿ ಹರಿಯುತ್ತಿದೆ. ಇದರೊಂದಿಗೆ ಗೇಟು ಅಳವಡಿಕೆಯ ಕೆಳ ಭಾಗದಲ್ಲಿಯೂ ದೊಡ್ದ ಪ್ರಮಾಣದಲ್ಲಿ ನೀರಿನ ಸೋರಿಕೆಯುಂಟಾಗುತ್ತಿದ್ದು, ಇದು ಇದೇ ರೀತಿ ಮುಂದುವರೆದರೆ, ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಸಮಯದಲ್ಲಿ ತಡೆಹಿಡಿದು ಸಂಗ್ರಹಿಸಲಟ್ಟ ನೀರಿನ ಸೋರಿಕೆಗೆ ಕಾರಣವಾಗಿ ಅಣೆಕಟ್ಟಿನ ಹಿನ್ನೀರಿನ ಸಂಗ್ರಹದಲ್ಲಿ ವ್ಯತ್ಯಯ ಉಂಟಾಗಲಿದೆ.
ಬೋಟಿಂಗ್ಗೂ ಸಮಸ್ಯೆ ಸಾಧ್ಯತೆ ?:
ಮಾ.22ರಂದು ನಡೆಯುವ ಉಬಾರ್ ಕಂಬಳೋತ್ಸವದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ನೇತ್ರಾವತಿ ನದಿಯ ಹಿನ್ನೀರಿನಲ್ಲಿ ಬೋಟಿಂಗ್ ಆಯೋಜಿಸಲಾಗಿದ್ದು, ಕಂಬಳ ಕರೆಯ ಬಳಿ ನದಿಯಲ್ಲಿ ಹಿನ್ನೀರು ಕಡಿಮೆ ಇರುವುದರಿಂದ ಬೋಟಿಂಗ್ಗೂ ಸಮಸ್ಯೆಯಾಗುವ ಸಾಧ್ಯತೆ ಎದುರಾಗಿದೆ.
ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿರಿಸಬೇಕು: ನೈತಡ್ಕ
ಅಣೆಕಟ್ಟಿನ ನೀರಿನ ಸೋರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಧುರೀಣ ಅನಂತ ಪ್ರಸಾದ್ ನೈತಡ್ಕ, ಗೇಟು ಅಳವಡಿಸುವ ಸಮಯದಲ್ಲಿ ಮರದ ಕುತ್ತಿಯೊಂದು ಸಿಲುಕಿಕೊಂಡಿತ್ತು. ಅದನ್ನು ತೆರವುಗೊಳಿಸಿದ ಬಳಿಕವೇ ಗೇಟು ಅಳವಡಿಸಿ ಎಂದು ಸಲಹೆ ನೀಡಿದ್ದೆವು. ಗೇಟು ಅಳವಡಿಸಿದ ಬಳಿಕ ತೆರವುಗೊಳಿಸಲು ಸಾಧ್ಯ ಎಂದು ಪ್ರತಿಪಾದಿಸಿ ಗೇಟು ಅಳವಡಿಸಿ ಮರದ ಕುತ್ತಿಯನ್ನು ತೆರವುಗೊಳಿಸಲು ಮುಂದಾದರು. ಆದರೆ ಈಗ ಆ ಗೇಟ್ನಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಹೊರಗೆ ಹರಿದು ಹೋಗುವಂತಾಗಿದೆ. ಇರುವ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿರಿಸಿದರೆ ಯೋಜನೆ ದೀರ್ಘಕಾಲ ಪ್ರಯೋಜನಕ್ಕೆ ಬರಬಹುದಾಗಿದೆ ಎಂದು ತಿಳಿಸಿದ್ದಾರೆ.