ಮಂಗಳೂರು: ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಮರಾಠಿಗರು ನಡೆಸುವ ದೌರ್ಜನ್ಯ, ದಬ್ಬಾಳಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಲವು ಕನ್ನಡ ಪರ ಸಂಘಟನೆಗಳು ಮಾ.22ರಂದು ಕರೆ ನೀಡಿರುವ ಕರ್ನಾಟಕ ರಾಜ್ಯ ಬಂದ್‌ಗೆ ದ.ಕ.ಜಿಲ್ಲೆಯಲ್ಲಿ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ.
ಜಿಲ್ಲೆಯ ಜೀವನಾಡಿಯಂತಿರುವ ಖಾಸಗಿ ಸಿಟಿ, ಸರ್ವಿಸ್, ಎಕ್ಸ್‌ಪ್ರೆಸ್ ಬಸ್‌ಗಳು ಎಂದಿನಂತೆ ಮಾ.22ರಂದೂ ಸಂಚರಿಸಲಿವೆ. ರಿಕ್ಷಾ ಸಹಿತ ಇತರ ಟೂರಿಸ್ಟ್ ವಾಹನಗಳೂ ಚಲಿಸಲಿವೆ. ಹೊಟೇಲ್, ಅಂಗಡಿ ಮುಂಗಟ್ಟುಗಳು ತೆರೆಯಲಿವೆ.
ದ.ಕ. ಬಸ್ ಮಾಲಕರ ಸಂಘ ಹಾಗೂ ಕೆನರಾ ಬಸ್ ಮಾಲಕರ ಸಂಘವು, ವಿವಿಧ ಸಂಘಟನೆಗಳ ಬೇಡಿಕೆಗೆ ಸಹಮತ, ಸಹಾನುಭೂತಿ ವ್ಯಕ್ತಪಡಿಸಿದೆ. ಬಸ್ ಮಾಲಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಮಾ.22ರಂದು ಬಸ್ ಬಂದ್ ಮಾಡುವುದಿಲ್ಲ ಎಂದಿನಂತೆ ಸಂಚರಿಸಲಿವೆ. ಸಾವರ್ಜನಿಕರ ಹಿತದೃಷ್ಟಿ, ಮುಖ್ಯವಾಗಿ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಸ್ ಬಂದ್ ಮಾಡುವುದಿಲ್ಲ ಎಂದು ದ.ಕ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ತೊಂದರೆ:
ಸಾರ್ವಜನಿಕರಿಗೆ ಸಮಸ್ಯೆಯಾಗುವುದರಿಂದ ಬಂದ್ ಮಾಡುವುದಿಲ್ಲ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್ ಪ್ರತಿಕ್ರಿಯಿಸಿದ್ದಾರೆ.