ಸುಬ್ರಹ್ಮಣ್ಯ: ಅರಣ್ಯ ಪ್ರದೇಶದಲ್ಲಿ ಕೊಳವೆಬಾವಿ ಕೊರೆದು ಸೋಲಾರ್ ಪಂಪ್ ಅಳವಡಿಕೆಗೆ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಆಕ್ಷೇಪ 

0

ಸುಬ್ರಹ್ಮಣ್ಯ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕೊಳವೆಬಾವಿ ಕೊರೆಯುವುದಕ್ಕೆ ಹಾಗೂ ಸೋಲಾರ್ ಪಂಪ್ ಅಳವಡಿಕೆಗೆ ಮಲೆನಾಡು ಜನಹಿತ ರಕ್ಷಣಾ ವೇದಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಸುಬ್ರಹ್ಮಣ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅವರು, ಪಶ್ಚಿಮಘಟ್ಟ ದಟ್ಟ ಕಾಡಿನಲ್ಲಿ ಬೇಸಿಗೆಯಲ್ಲಿ ನೀರಿನ ಅಂಶ ಕಡಿಮೆ ಇದೆ, ಆಹಾರ ಕೂಡ ಕ್ಷೀಣಿಸಿದೆ, ಇದರಿಂದಾಗಿ ಕಾಡುಪ್ರಾಣಿಗಳಿಗೆ ನೀರು ಆಹಾರವನ್ನು ಅರಿಸಿಕೊಂಡು ನಾಡಿಗೆ ಬರುತ್ತಿರುವುದು ಸಾಮಾನ್ಯವಾಗಿದೆ. ಆದುದರಿಂದ ಕೊಳವೆಬಾವಿ ಕೊರೆದು ಸೋಲಾರ್ ಪಂಪು ಮೂಲಕ ನೀರನ್ನು ಶೇಖರಿಸಿ ವನ್ಯಜೀವಿಗಳಿಗೆ ಜೀವಿಸಲು ಅನುಕೂಲ ಮಾಡಿಕೊಡಬೇಕೆಂದು ಅರಣ್ಯ ಮಂತ್ರಿಗಳು ಅರಣ್ಯ ಇಲಾಖೆಗೆ ನೀಡಿದ ಆದೇಶವು ಅವೈಜ್ಞಾನಿಕವಾಗಿದೆ.

ಪಶ್ಚಿಮ ಘಟ್ಟ ಪ್ರದೇಶ ವಿಶಾಲವಾಗಿ ಹಬ್ಬಿ ದಟ್ಟ ಕಾನನದಿಂದ ಕೂಡಿದ್ದು ಸ್ವಚ್ಛಂದವಾದ ಗಾಳಿ ಪಡೆಯುತ್ತಿದ್ದೇವೆ. ಪ್ರಾಣಿಗಳಿಗೆ ನೀರು ಕುಡಿಯಲು ಸಮರ್ಪಕ ನೀರು, ಆಹಾರ ಇಲ್ಲ ಹಾಗೂ ನೀರಿಗಾಗಿ ಆಹಾರಕ್ಕಾಗಿ ನಾಡಿಗೆ ಬರುತ್ತವೆ ಎನ್ನುವ ನೆಪ ಒಡ್ಡಿ ದಟ್ಟ ಅರಣ್ಯದಲ್ಲಿ ಕೊಳವೆ ಬಾವಿ ಕೊರೆಯಲು ಹಾಗೂ ಸೋಲಾರ್ ಪಂಪ್ ಅಳವಡಿಸಲು ಮುಂದಾಗಿದೆ.

ಅರಣ್ಯ ಮಂತ್ರಿಗಳು ಈಗಾಗಲೇ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಈ ಬಗ್ಗೆ ಆದೇಶ ಕೂಡ ನೀಡಿದ್ದಾರೆ. ಇಂತಹ ದುಸ್ಸಾಹಸಕ್ಕೆ ರಾಜ್ಯ ಸರ್ಕಾರವು ಕೈ ಹಾಕಿದಲ್ಲಿ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಕೊಳವೆಬಾವಿ ಕೊರೆಯಲು ಮುಂದಾದಲ್ಲಿ ಅರಣ್ಯ ಪರಿಸರ ಬರಿದಾಗುವ ಹಾಗೂ ಪರಿಸರಕ್ಕೆ ಧಕ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈ ಆದೇಶವನ್ನು ಸರ್ಕಾರವು ಕೂಡಲೇ ಕೈ ಬಿಡಬೇಕೆಂದು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಸದಸ್ಯರಾದ ಅಚ್ಚುತ್ತ ಗೌಡ ಸುಬ್ರಹ್ಮಣ್ಯ, ಅಶೋಕ್ ಕುಮಾರ್ ಮೂಲೆಮಜಲು, ಜಯಪ್ರಕಾಶ್ ಕೂಜುಗೋಡು, ಚಂದ್ರಶೇಖರ ಬಾಳುಗೋಡು, ಚಂದ್ರಹಾಸ ಶಿವಾಲ, ರಮಾನಂದ ಎಣ್ಣೆ ಮಜಲು, ರಾಜೇಶ್ ಕೊಣಾಜೆ , ದುಶ್ಯಂತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here