ಪುತ್ತೂರು ಭಾರತ್ ಮಹಲ್ ನಲ್ಲಿ ಭಾವ ತೀರ ಯಾನ ಚಲನಚಿತ್ರದ 5ನೇ ವಾರದ ಸಂಭ್ರಮ ಆಚರಣೆ

0

ಪುತ್ತೂರು: ಸುಳ್ಯದ ಯುವ ಪ್ರತಿಭೆ, ಸಂಗೀತ ನಿರ್ದೇಶಕ ಮಯೂರ್ ಅಂಬೆಕಲ್ಲು ನಿರ್ದೇಶಿಸಿದ ಭಾವ ತೀರ ಯಾನ ಕನ್ನಡ ಚಲನಚಿತ್ರ ಪುತ್ತೂರಿನ ಭಾರತ್ ಮಹಲ್ ನಲ್ಲಿ 5ನೇ ವಾರಕ್ಕೆ ಕಾಲಿರಿಸಿದ ಹಿನ್ನಲೆಯಲ್ಲಿ ಸಿನಿಮಾ ತಂಡದಿಂದ ಕೇಕ್ ಕತ್ತರಿಸುವ ಮೂಲಕ ಸಂಭ್ರಮ ಆಚರಣೆ ಮಾ.21ರಂದು ಸಂಜೆ ಪುತ್ತೂರು ಭಾರತ್ ಮಹಲ್ ನಲ್ಲಿ ನಡೆಯಿತು.

ಪ್ರೋತ್ಸಾಹವನ್ನು ನೀಡಿದ್ದಾರೆ- ಮಯೂರ್ ಅಂಬೆಕಲ್ಲು
ಭಾವ ತೀರ ಯಾನ ಚಲನಚಿತ್ರಕ್ಕೆ ಸಂಗೀತ ನೀಡಿ, ನಿರ್ದೇಶನಗೈದ ಮಯೂರ್ ಅಂಬೆಕಲ್ಲುರವರು ಮಾತನಾಡಿ ಸುಳ್ಯ ಮತ್ತು ಪುತ್ತೂರಿನ ಪ್ರೇಕ್ಷಕರು ನಮಗೆ ತುಂಬಾ ಒಳ್ಳೆಯ ಪ್ರೋತ್ಸಾಹವನ್ನು ನೀಡಿದ್ದಾರೆ. ಚಿತ್ರಕ್ಕೆ ಎಲ್ಲ ಕಡೆ ತುಂಬಾ ಬೆಂಬಲ ಸಿಗುತ್ತದೆ. ನೋಡಿದವರು ಖುಷಿ ಪಟ್ಟಿದ್ದಾರೆ ಎಂದರು.

ಉತ್ತಮ ಕಥೆ- ನವೀನ್ ಪಡೀಲ್
ತುಳು ಚಲನಚಿತ್ರದ ಹಾಸ್ಯ ನಟ ನವೀನ್ ಪಡೀಲ್‌ರವರು ಮಾತನಾಡಿ ಉತ್ತಮ ಕಥೆಯನ್ನು ಹೊಂದಿರುವ ಈ ಸಿನಿಮಾ ವಿಭಿನ್ನವಾಗಿ ಮೂಡಿ ಬಂದಿದೆ ಎಂದರು

ಸದಭಿರುಚಿಯ ಸಿನಿಮಾ- ಹೇಮನಾಥ ಶೆಟ್ಟಿ
ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಉತ್ತಮ ಸದಭಿರುಚಿಯ ಸಿನಿಮಾವಾಗಿದ್ದು, ಕಥೆಯನ್ನು ನಿರೂಪಿಸಿದ ಯುವ ತಂಡದ ಶ್ರಮ ಇಲ್ಲಿ ಗೆದ್ದಿದೆ ಎಂದರು.
ನಾಯಕ ನಟ ತೇಜಸ್ ಕಿರಣ್, ನಟ ಸಂದೀಪ್ ರಾಜ್ ಗೋಪಾಲ್, ನಾಯಕಿ ಆರೋಹಿ ನೈನಾ, ಶಾಖಾಹಾರಿ ಚಲನಚಿತ್ರದ ನಿರ್ಮಾಪಕ ರಾಜೇಶ್ ಕೀಳಂಬಿ, ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿ, ಪುತ್ತೂರು ಅಕ್ಷಯ ಕಾಲೇಜಿನ ಆಡಳಿತ ಸಮಿತಿ ಅಧ್ಯಕ್ಷ ಜಯಂತ್ ನಡುಬೈಲು, ಸಹಕಾರಿ ಧುರೀಣ ಜಾಕೆ ಮಾಧವ ಗೌಡ, ಸಾಮಾಜಿಕ ಮುಂದಾಳು ಎಂ.ಬಿ.ಸದಾಶಿವ, ಜಿ.ಪಂ, ಮಾಜಿ ಸದಸ್ಯರುಗಳಾದ ಅನಿತಾ ಹೇಮನಾಥ ಶೆಟ್ಟಿ, ಆಶಾ ತಿಮ್ಮಪ್ಪ, ರಂಗಭೂಮಿ ಕಲಾವಿದೆ ವಸಂತಲಕ್ಷ್ಮೀ, ಪುತ್ತೂರು ತಾಲೂಕು ಬಂಟರ ಸಂಘದ ನಿರ್ದೇಶಕ ರವಿಪ್ರಸಾದ್ ಶೆಟ್ಟಿ ಬನ್ನೂರು, ಉಜ್ವಲ್ ಊರುಬೈಲು, ಮೈಮ್ ರಾಮದಾಸ್, ವಿಸ್ಮಯ ವಿನಾಯಕ ಸಹಿತ ನೂರಾರು ಚಿತ್ರಪ್ರೇಕ್ಷಕರು ಉಪಸ್ಥಿತರಿದ್ದರು. ಉಪನ್ಯಾಸಕ ಸೀತಾರಾಮ ಕೇವಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಭಾವ ತೀರ ಯಾನ ಚಲನಚಿತ್ರದ ನಿರ್ಮಾಪಕ ಶೈಲೇಶ್ ಅಂಬೆಕಲ್ಲು ವಂದಿಸಿದರು.

ʼ50ನೇ ದಿನದತ್ತ ಭಾವ ತೀರ ಯಾನʼ ಪುತ್ತೂರು ಭಾರತ್ ಮಹಲ್ ನಲ್ಲಿ ಹೌಸ್ ಪುಲ್ ಪ್ರದರ್ಶನದೊಂದಿಗೆ ಭಾವ ತೀರ ಯಾನ 5ನೇ ವಾರದಲ್ಲಿ ಪ್ರರ್ದಶನಗೊಳ್ಳುತ್ತಿದೆ. ಸುಳ್ಯ, ಪುತ್ತೂರು, ಕಡಬ ಹಾಗೂ ವಿಟ್ಲ ಪ್ರದೇಶಗಳಿಂದ ಚಿತ್ರ ಪ್ರೇಮಿಗಳು ಚಿತ್ರ ವೀಕ್ಷಣೆಗೆ ಬರುತ್ತಿದ್ದಾರೆ. ಚಿತ್ರ 50ನೇ ದಿನದತ್ತ ಸಾಗುತ್ತಿದ್ದು, ಪುತ್ತೂರಿನಲ್ಲಿ ಭಾರಿ ಜನ ಬೆಂಬಲ ವ್ಯಕ್ತವಾಗುತ್ತಿದ್ದು, ಪ್ರೇಕ್ಷಕರ ಪ್ರೋತ್ಸಾಹಕ್ಕೆ ಕೃತಜ್ಞತೆಗಳು
ಶೈಲೇಷ್ ಅಂಬೆಕಲ್ಲು
ನಿರ್ಮಾಪಕರು ಭಾವ ತೀರ ಯಾನ

LEAVE A REPLY

Please enter your comment!
Please enter your name here