ನರಿಮೊಗರು ಗ್ರಾಮ ಸಭೆ

0

ಪುತ್ತೂರು: ನರಿಮೊಗರು ಗ್ರಾ.ಪಂ ಗ್ರಾಮ ಸಭೆ ಮಾ.19ರಂದು ನರಿಮೊಗರು ಸಿ.ಎ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು. ಗ್ರಾ.ಪಂ ಅಧ್ಯಕ್ಷೆ ಹರಿಣಿ ಪಂಜಳ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಬಿಆರ್‌ಸಿ ಕೇಂದ್ರದ ರತ್ನಕುಮಾರಿ ಪಿ.ಕೆ ಚರ್ಚಾನಿಯಂತ್ರಣಾಧಿಕಾರಿಯಾಗಿದ್ದರು. ಸಭೆಯಲ್ಲಿ ಗ್ರಾಮಸ್ಥ ರಾಘವೇಂದ್ರ ನಾಯಕ್ ಮಾತನಾಡಿ, ಚಂದ್ರಮ್‌ಸಾಗ್ ಎಂಬಲ್ಲಿ ತೋಡಿಗೆ ನಿರ್ಮಿಸಿರುವ ತಡೆಗೋಡೆಯ ಕಾಮಗಾರಿ ಕಳಪೆಯಾಗಿದ್ದು ತಡೆಗೋಡೆ ಕೆಲವೇ ಸಮಯದಲ್ಲಿ ಬೀಳುವ ಸ್ಥಿತಿಯಲ್ಲಿದೆ, ಇಂತಹ ಕಳಪೆ ಕಾಮಗಾರಿ ಬಗ್ಗೆ ಗ್ರಾ.ಪಂ ಗಮನಹರಿಸಿಲ್ಲವೇ? ಎಂದು ಪ್ರಶ್ನಿಸಿದರು. ಪಿಡಿಓ ರವಿಚಂದ್ರ ಯು ಉತ್ತರಿಸಿ ಈ ಬಗ್ಗೆ ಪರಿಶೀಲಿಸಿ ಬಳಿಕ ನಿರ್ಣಯ ಮಾಡಿ ತಡೆಗೋಡೆ ಸರಿಯಾಗಿ ನಿರ್ಮಿಸಲು ಸಂಬಂಧಪಟ್ಟವರಿಗೆ ತಿಳಿಸುವ ಎಂದು ಹೇಳಿದರು.

ಫ್ಯಾಕ್ಟರಿ ಸಮಸ್ಯೆ ಪರಿಶೀಲನೆಗೆ ಬಂದ ಅಧಿಕಾರಿಗಳಿಂದ ಸುಳ್ಳು ವರದಿ-ಆರೋಪ
ಪುರುಷರಕಟ್ಟೆ ಬಿಂದು ಫ್ಯಾಕ್ಟರಿಯಿಂದ ಕೊಳಚೆ ನೀರು ಬಿಡುವ ವಿಚಾರದಲ್ಲಿ ಅನೇಕ ವರ್ಷಗಳಿಂದ ಚರ್ಚೆ ನಡೆಯುತ್ತಿದ್ದು ಇತ್ತೀಚೆಗೆ ನಡೆಸಿದ ಮಾತುಕತೆಯಂತೆ ತಾತ್ಕಾಲಿಕವಾಗಿ ಸಮಸ್ಯೆಗೆ ಪರಿಹಾರ ದೊರಕಿತ್ತು, ಆದರೆ ಇದೀಗ ಮತ್ತೆ ಸಮಸ್ಯೆ ಶುರುವಾಗಿದೆ ಎಂದು ಕೆಲವು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಪರಿಶೀಲನೆಗೆ ಬಂದಿರುವ ಅಧಿಕಾರಿಗಳು ಸ್ಥಳೀಯ ಆರು ಮನೆಗಳಿಗೆ ಭೇಟಿ ನೀಡಿದ್ದೇವೆಯೆಂದೂ, ಯಾವುದೇ ಸಮಸ್ಯೆಯಿಲ್ಲವೆಂದೂ ವರದಿ ನೀಡಿದ್ದಾರೆ, ಇದು ಸತ್ಯ ಮರೆಮಾಚಿದ ಸುಳ್ಳು ವರದಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ವೈದ್ಯಾಧಿಕಾರಿಗಳು ಮಾಹಿತಿ ನೀಡಬೇಕೆಂದರು ಗ್ರಾಮಸ್ಥರು ಹೇಳಿದರು. ಸರ್ವೆ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ನಮಿತಾ ನಾಯ್ಕ್ ಉತ್ತರಿಸಿ ಅದು ನಾನು ಭೇಟಿ ನೀಡಿ ಮಾಡಿದ್ದಲ್ಲ, ಆರೋಗ್ಯಾಧಿಕಾರಿ ಮಾಡಿದ ವರದಿ ಎಂದು ಉತ್ತರಿಸಿದರು. ಗ್ರಾಮಸ್ಥ ಸಲೀಂ ಮಾಯಂಗಳ ಮಾತನಾಡಿ, ಅಧಿಕಾರಿಗಳು ಸತ್ಯವನ್ನು ಮುಚ್ಚಿಹಾಕಿ ಸುಳ್ಳು ವರದಿ ಸಿದ್ದಪಡಿಸಬೇಕಾದರೆ ಅವರು ಲಂಚ ಪಡೆದಿರಬೇಕು ಎಂದು ಆರೋಪಿಸಿದರು. ಅಧಿಕಾರಿಗಳು ಭೇಟಿ ನೀಡಿ ಸಿದ್ದಪಡಿಸಿದ ವರದಿ ಪ್ರತಿ ನಮಗೆ ಕೊಡಿ, ನಾವು ಕಾನೂನು ಪ್ರಕಾರ ಹೋಗುತ್ತೇವೆ ಎಂದು ರಾಘವೇಂದ್ರ ಹೇಳಿದರು.
ಫ್ಯಾಕ್ಟರಿ ಮುಚ್ಚಬೇಕೆಂದು ನಾವು ಹೇಳುತ್ತಿಲ್ಲ, ಸಮಸ್ಯೆ ಸರಿಪಡಿಸದಿದ್ದರೆ ಲೈಸೆನ್ಸ್ ನವೀಕರಣ ಮಾಡಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದರು. ನಮ್ಮ ಮನವಿಗೆ ಸ್ಪಂದನೆಯಿಲ್ಲ ಎಂದರೆ ನಾವು ದಾಖಲೆ ಸಮೇತ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದು ಸುಬ್ರಾಯ ಶೆಟ್ಟಿಮಜಲು ಹೇಳಿದರು. ಇದಕ್ಕೆ ಹಲವರು ಧ್ವನಿಗೂಡಿಸಿದರು.

ಕುಮಾರಧಾರ ನದಿ ಬದಿಯಲ್ಲಿ ನಿತ್ಯ ಕಿರಿಕಿರಿ..!
ಶಾಂತಿಗೋಡು ಬಳಿ ಕುಮಾರಧಾರ ನದಿ ಬದಿಯಲ್ಲಿ ಬಾಟಲಿಗಳ ರಾಶಿಯಿದ್ದು ಇಲ್ಲಿ ಪ್ರತಿನಿತ್ಯ ಕುಡಿದು ಬಂದು ಕಿರಿಕಿರಿ ಮಾಡುತ್ತಿರುತ್ತಾರೆ, ಇದು ಊರವರಿಗೆ ಸಮಸ್ಯೆಯಾಗಿ ಪರಿಣಮಿಸಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರೋರ್ವರು ಆಗ್ರಹಿಸಿದರು. ಪುತ್ತೂರು ನಗರಠಾಣೆಯ ಎಸ್.ಐ ಆಂಜನೇಯ ರೆಡ್ಡಿ ಉತ್ತರಿಸಿ ಅಂತಹ ವಿಚಾರಗಳು ಕಂಡು ಬಂದಲ್ಲಿ 112 ಸಂಖ್ಯೆಗೆ ಕರೆ ಮಾಡಿ ತಿಳಿಸಿ ಎಂದು ಹೇಳಿದರು.

ಬೋರ್‌ವೆಲ್ ಕೊರೆಯುವುದನ್ನು ನಿಯಂತ್ರಿಸಿ:
ಗ್ರಾಮಸ್ಥ ಸುಬ್ರಾಯ ಶೆಟ್ಟಿಮಜಲು ಮಾತನಾಡಿ, ನೀರಿನ ಸಂರಕ್ಷಣೆ ವಿಚಾರವಾಗಿ ಗ್ರಾ.ಪಂ ದೂರದೃಷ್ಟಿ ಇಟ್ಟುಕೊಂಡು ಈಗಲೇ ಜಾಗ್ರತೆ ಪಾಲಿಸುವ ಮೂಲಕ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿ ನೀರಿನ ಅಭಾವ ವಿಚಾರವಾಗಿ ವಿವರಿಸಿದರು. ಅಂತರ್ಜಲಮಟ್ಟ ಬರಿದಾಗಿದ್ದು ಬೋರ್‌ವೆಲ್ ಕೊರೆಯಲು ಅವಕಾಶ ನೀಡದೇ ನೀರನ್ನು ಸಂರಕ್ಷಣೆ ಮಾಡುವುದು ಅತ್ಯಗತ್ಯ, ಈ ಬಗ್ಗೆ ಗ್ರಾ.ಪಂ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದರು.

ಟ್ರಾಫಿಕ್ ಪೊಲೀಸರಿಂದ ಪದೇ ಪದೇ ಚೆಕ್ಕಿಂಗ್ ಬೇಡ:
ನರಿಮೊಗರಿನಲ್ಲಿ ಪೊಲೀಸರು ತಿಂಗಳ ಬಹುತೇಕ ದಿನಗಳಲ್ಲಿ ವಾಹನ ಚೆಕ್ಕಿಂಗ್ ಮಾಡುತ್ತಿದ್ದು ಇದು ನಮ್ಮಂತವರಿಗೆ ಸಮಸ್ಯೆಯಾಗಿದೆ, ನಾವು ಎಲ್ಲ ದಾಖಲೆಗಳನ್ನು ಸರಿಯಾಗಿಟ್ಟುಕೊಂಡು ಹೋಗುವಾಗಲೂ ಪದೇ ಪದೇ ಪೊಲಿಸರಿಗೆ ದಾಖಲೆ ತೋರಿಸಬೇಕಾಗಿದೆ, ಇದು ತುಂಬ ಕಿರಿಕಿರಿಯಾಗುತ್ತಿದೆ ಎಂದು ಗ್ರಾಮಸ್ಥ ದಿನೇಶ್ ಕೈಪಂಗಳದೋಳ ಹೇಳಿದರು. ನಗರಠಾಣಾ ಎಸ್.ಐ ಆಂಜನೇಯ ರೆಡ್ಡಿ ಉತ್ತರಿಸಿ, ಟ್ರಾಫಿಕ್ ಪೊಲಿಸರು ಅವರ ಕರ್ತವ್ಯವನ್ನು ಮಾಡುತ್ತಾರೆ ಹೊರತು ಯಾರಿಗೂ ತೊಂದರೆ ಕೊಡುವ ಉದ್ದೇಶ ಅಲ್ಲ, ಒಂದು ವೇಳೆ ನೀವು ಒಂದು ದಿವಸ ದಾಖಲೆ ತೋರಿಸಿದ ಮೇಲೆ ಮರುದಿವಸವೂ ಪೊಲೀಸರು ನಿಮ್ಮ ವಾಹನ ನಿಲ್ಲಿಸಿದ್ದಲ್ಲಿ ಅವರಲ್ಲಿ ವಿಚಾರ ತಿಳಿಸಿ, ಯಾವುದೇ ಸಮಸ್ಯೆ ನಿಮಗೆ ಆಗದು ಎಂದು ಅವರು ಸಮಜಾಯಿಷಿ ನೀಡಿದರು.

ಪದೇ ಪದೇ ವಿದ್ಯುತ್ ಕಡಿತ ಬೇಡ:
ಪದೇ ಪದೇ ವಿದ್ಯುತ್ ಕಡಿತಗೊಳಿಸುವುದು ಮತ್ತು ಯಾವುದೇ ಮಾಹಿತಿ ನೀಡದೇ ದಿನ ಪೂರ್ತಿ ವಿದ್ಯುತ್ ಕಡಿತಗೊಳಿಸುವುದರಿಂದ ಭಾರೀ ಸಮಸ್ಯೆಯಾಗುತ್ತಿದೆ, ಈ ಬಗ್ಗೆ ಮೆಸ್ಕಾಂ ಇಲಾಖೆ ಗಮನಹರಿಸಬೇಕು ಎಂದು ಗ್ರಾಮಸ್ಥ ರವೀಂದ್ರ ರೈ ನೆಕ್ಕಿಲು ಹೇಳಿದರು.

ಉಪ ಆರೋಗ್ಯ ಕೇಂದ್ರಕ್ಕೆ ಅನುದಾನ ಲಭ್ಯ:
ನರಿಮೊಗರು ಭಾಗದ ಜನರ ಬೇಡಿಕೆಯಾಗಿದ್ದ ನರಿಮೊಗರು ಉಪ ಆರೋಗ್ಯ ಕೇಂದ್ರಕ್ಕೆ ಅನುದಾನ ಲಭ್ಯವಾಗಿದೆ ಎಂದು ಸರ್ವೆ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ.ನಮಿತಾ ನಾಯ್ಕ್ ಮಾಹಿತಿ ನೀಡಿದರು.

ನೀರನ್ನು ಪೋಲು ಮಾಡಬೇಡಿ-ಎಸ್.ಐ ಆಂಜನೇಯ ರೆಡ್ಡಿ
ಪುತ್ತೂರು ನಗರ ಠಾಣೆಯ ಎಸ್.ಐ ಆಂಜನೇಯ ರೆಡ್ಡಿ ಮಾತನಾಡಿ ನೀರನ್ನು ಯಾರೂ ಪೋಲು ಮಾಡಬೇಡಿ, ಭವಿಷ್ಯದಲ್ಲಿ ನೀರಿನ ಅಭಾವ ತಲೆದೋರಲಿದ್ದು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು. ದ.ಕ ಜಿಲ್ಲೆ ಭೂಮಿ ಮೇಲಿನ ಸ್ವರ್ಗವಾಗಿದ್ದು ಇಲ್ಲಿ ಕೋಮು ಸೌಹಾರ್ದತೆ ಕದಡುವ ವಿಚಾರ ಬಿಟ್ಟರೆ ಬೇರೆಲ್ಲವೂ ಅತ್ಯುತ್ತಮವಾಗಿದೆ ಎಂದು ಅವರು ಹೇಳಿದರು.


ಇತ್ತೀಚಿನ ದಿನಗಳಲ್ಲಿ ಯುವಜನತೆ ಗಾಂಜಾ, ಎಂಡಿಎಂಎ ಮುಂತಾದ ಮಾದಕ ವಸ್ತುಗಳ ದಾಸರಾಗುತ್ತಿದ್ದು ವಿದ್ಯಾರ್ಥಿಗಳು ಕೂಡಾ ಮಾದಕ ವ್ಯವಸನಗಳಿಗೆ ಬಲಿಯಾಗುತ್ತಿದ್ದಾರೆ, ಇದರಿಂದ ಯುವಜನತೆ ದಾರಿ ತಪ್ಪುವುದಲ್ಲದೇ ಕೊಲೆ, ದೊಂಬಿ ಹೆಚ್ಚಳವಾಗುತ್ತಿದೆ, ಈ ಬಗ್ಗೆ ಪೋಷಕರು ಮತ್ತು ನಾಗರಿಕರು ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಅವರು ಹೇಳಿದರು. ಮದ್ಯ ಕುಡಿದು ವಾಹನ ಓಡಿಸುವುದು, ಮಕ್ಕಳಿಗೆ ವಾಹನ ಓಡಿಸಲು ಕೊಡುವುದು ಮೊದಲಾದವುಗಳ ಬಗ್ಗೆ ಜಾಗ್ರತೆ ವಹಿಸಬೇಕು, ಮಕ್ಕಳಿಗೆ ಮೊಬೈಲ್ ನೀಡುವಾಗಲೂ ಎಚ್ಚರಿಕೆ ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.


ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ಉಮೇಶ್ ಎಂ ಹಾಗೂ ಸದಸ್ಯರು ಉಪಸ್ಥಿತರಿದ್ದರು.ಗ್ರಾ.ಪಂ ಕಾರ್ಯದರ್ಶಿ ಶೇಕ್ ಕಲಂದರ್ ಅಲಿ ವರದಿ ವಾಚಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here