ಪುತ್ತೂರು : ಮಾ.10 ರಂದು ನಿಧನರಾದ ರಾಜ್ಯದ ಮಾಜಿ ಸಚಿವ, ಬಂಟ್ವಾಳ ತಾಲೂಕಿನ ಬಾಕ್ರಬೈಲು ನಿವಾಸಿಯಾಗಿದ್ದ ಬಿ.ಸುಬ್ಬಯ್ಯ ಶೆಟ್ಟಿಯವರ ಶ್ರದ್ಧಾಂಜಲಿ ಕಾರ್ಯಕ್ರಮ ಮಾ.22 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಮುಖ್ಯಮಂತ್ರಿ ದೇವರಾಜ ಅರಸು ನೇತೃತ್ವದ ಸರ್ಕಾರದಲ್ಲಿ ಭೂ ಸುಧಾರಣಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಸುಬ್ಬಯ್ಯ ಶೆಟ್ಟಿಯವರು ಸರ್ಕಾರವು ಭೂಸುಧಾರಣಾ ಕಾಯ್ದೆ ತರುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರಲ್ಲದೆ, ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕೂಡ ಶ್ರಮಿಸಿದ್ದರು.ರೈತರಿಗೆ ಕೃಷಿ ಭೂಮಿಯ ಮಾಲೀಕತ್ವವನ್ನು ನೀಡುವ ಕ್ರಾಂತಿಕಾರಿ ಪರಿಕಲ್ಪನೆಯನ್ನು ಜಾರಿಗೊಳಿಸಲು ಆರಂಭದಲ್ಲಿ ಸ್ವಂತ ಭೂಮಿಯನ್ನು ಬಿಟ್ಟುಕೊಟ್ಟ ಭೂಮಾಲೀಕರಲ್ಲಿ ಇವರೂ ಒಬ್ಬರಾಗಿ ಗಮನ ಸೆಳೆದಿದ್ದರು.ರಾಜ್ಯ ಸರ್ಕಾರದಲ್ಲಿ ಮಾಹಿತಿ, ಇಂಧನ ಹಾಗೂ ಶಿಕ್ಷಣ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಂತಹ ಒಬ್ಬ ಅಸಾಮಾನ್ಯ ವ್ಯಕ್ತಿ ಸುಬ್ಬಯ್ಯ ಶೆಟ್ಟಿಯವರು ಎಂದು ಹೇಳಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ನುಡಿ ನಮನ ಸಲ್ಲಿಸಿದರು.

ಮೃತರ ಭಾವ ತುಕರಾಮ ರೈ ಸವಣೂರು ಮಾತನಾಡಿ , ಸುಬ್ಬಯ್ಯ ಭಾವ ಜೀವನದಲ್ಲಿ ನಿಷ್ಠೆ , ಶಿಸ್ತು ,ಬದ್ಧತೆ ಹಾಗೂ ಆದ್ಯತೆ ಮತ್ತು ಆದರ್ಶ ಮೌಲ್ಯ ಅಳವಡಿಸಿಕೊಂಡಿರುವ ಮೂಲಕ ಎಲ್ಲರಿಗೂ ದಾರಿದೀಪವಾದವರು. ಆದರೆ , ರಾಜಕೀಯದಲ್ಲಿ ಇವೆಲ್ಲವೂ ಕ್ಷೀಣಿಸುತ್ತ ಬಂದಂತೆ ಅವರು ನೇಪತ್ಯಕ್ಕೆ ಸರಿದರು. ಹಣ ,ಧರ್ಮ ,ಜಾತಿ ರಾಜಕೀಯದಿಂದ ಆದರ್ಶ , ಮೌಲ್ಯಗಳಿಗೆ ನೆಲೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೊಮ್ಮಗಳು ವೃತ್ತಿಯಲ್ಲಿ ವಕೀಲೆಯಾಗಿರುವ ಮಿಹಿಕಾ ಹೆಗ್ಡೆ ತಾತನ ಗುಣಗಾನ ಮಾಡಿದರು. ಈ ಸಂಧರ್ಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ , ಮಾಜಿ ಶಾಸಕಿ ಶಕುಂತಲಾ ಶೆಟ್ಟಿ , ವಿಧಾನ ಪರಿಷತ್ತು ಸದಸ್ಯ ಐವನ್ ಡಿ ಸೋಜಾ ಅರಿಯಡ್ಕ ಚಿಕ್ಕಪ್ಪ ನಾೖಕ್ ಸಹಿತ ಮೃತರ ಸ್ನೇಹಿತರು ,ಬಂದುಗಳು ಮತ್ತು ಕುಟುಂಬದ ವರ್ಗದವರಿದ್ದರು.
ಆ ಬಳಿಕ ಮೃತರ ಆತ್ಮಕ್ಕೆ ಗೌರವ ಸಲ್ಲಿಸಿದರು. ಬಳಿಕ ಮೃತರ ಭಾವಚಿತ್ರಕ್ಕೆ ಪುಪ್ಪಾರ್ಚನೆ ನಡೆಯಿತು.ಸುಬ್ಬಯ್ಯ ಶೆಟ್ಟಿ ಪುತ್ರಿಯರಾದ ಅಮೇರಿಕಾದಲ್ಲಿ ವೈದ್ಯೆಯಾಗಿರುವ ಉಮಾ ಹಾಗೂ ಬೆಂಗಳೂರಿನಲ್ಲಿ ವೈದ್ಯೆಯಾಗಿರುವ ರೇಷ್ಮಾ, ಅಳಿಯ ನಿಖಿಲಾನಂದ ಹೆಗ್ಡೆ ಹಾಗೂ ಮೊಮ್ಮಕ್ಕಳು ಸಹಿತ ಹಲವರು ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತುಕರಾಮ ರೈ ಸವಣೂರು ಕಾರ್ಯಕ್ರಮ ನಿರೂಪಿಸಿದರು.