ಉಪ್ಪಿನಂಗಡಿ: ಇಲ್ಲಿನ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ನಿ ಇದರ ಅಮೃತ ಸಹಕಾರಿ ಮಾರ್ಟ್ನಲ್ಲಿ ಗ್ರಾಹಕರಿಗೆ ಯುಗಾದಿ, ರಂಜಾನ್ ಹಾಗೂ ಈಸ್ಟರ್ ಹಬ್ಬಗಳ ಪ್ರಯುಕ್ತ ಅದೃಷ್ಟ ಡ್ರಾ ಆಕರ್ಷಕ ಬಹುಮಾನ ಯೋಜನೆಯ ಕರಪತ್ರದ ಬಿಡುಗಡೆ ಕಾರ್ಯಕ್ರಮವು ಸಂಘದ ಕೇಂದ್ರ ಕಚೇರಿಯಲ್ಲಿ ನಡೆಯಿತು.
ಕರಪತ್ರ ಬಿಡುಗಡೆ ಮಾಡಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ತನ್ನ ಸದಸ್ಯರ ಆರ್ಥಿಕ ಬೆಳವಣಿಗೆಗೆ ಪೂರಕವಾದ ಕಾರ್ಯದ ಜೊತೆಗೆ, ತನ್ನ ಗ್ರಾಹಕರ ಅನುಕೂಲಕ್ಕಾಗಿ ವಿವಿಧ ರೀತಿಯ ವ್ಯವಹಾರವನ್ನು ನಡೆಸುತ್ತಿದೆ. ಸೇವಾ ಮನೋಭಾವದೊಂದಿಗೆ ಗ್ರಾಹಕರಿಗೆ ಗುಣಮಟ್ಟದ ದಿನೋಪಯೋಗಿ ಸಾಮಗ್ರಿಗಳನ್ನು ಕೈಗೆಟಕುವ ದರದಲ್ಲಿ ಸಹಕಾರ ತತ್ವದಡಿಯಲ್ಲಿ ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ. ಈ ಮಧ್ಯೆ ತನ್ನ ಗ್ರಾಹಕರಿಗೆ ಅದೃಷ್ಟ ಬಹುಮಾನವನ್ನು ಒದಗಿಸಿ ಮುಂಬರುವ ಹಬ್ಬಗಳ ಸಂತಸವನ್ನು ಹೆಚ್ಚಿಸುವ ನಡೆ ಸ್ವಾಗತಾರ್ಹವೆಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವೈದ್ಯರಾದ ಡಾ. ಸುಪ್ರೀತ್ ಲೋಬೋ ಮಾತನಾಡಿ, ಸರ್ವ ಧರ್ಮದ ಹಬ್ಬಗಳು ಜೊತೆಯಾಗಿ ಬಂದಿರುವ ಈ ಸುಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷವಾದ ಕೊಡುಗೆ ನೀಡುತ್ತಿರುವ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಈ ಯೋಜನೆಯು ಗ್ರಾಹಕಸ್ನೇಹಿಯಾಗಿದ್ದು, ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬೇಕು ಎಂದರು.
ಸಂಘದ ಮಾಜಿ ನಿರ್ದೇಶಕರಾದ ಅಝೀಝ್ ಬಸ್ತಿಕಾರ್ ಮಾತನಾಡಿ, ಈ ಸಹಕಾರಿ ಸಂಘವು ನಿಂತ ನೀರಾಗದೆ ಹರಿಯುವ ನೀರಿನಂತೆ ಸ್ವಚ್ಛವಾಗಿ ಶುಭ್ರವಾಗಿ ಕಳೆದ ಎಪ್ಪತ್ತೈದು ವರುಷಗಳಿಂದ ಸಹಕಾರ ಕ್ಷೇತ್ರಗಳಲ್ಲಿ ತನ್ನ ಗಮನಾರ್ಹ ಸೇವೆಯನ್ನು ನೀಡುತ್ತಿರುವುದು ಪ್ರಶಂಸನೀಯವೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಸಂಘದ ಅಧ್ಯಕ್ಷರಾದ ಸುನಿಲ್ ಕುಮಾರ್ ದಡ್ಡು, ಕನಿಷ್ಠ ಬೆಲೆಗೆ ಗರಿಷ್ಠ ಗುಣಮಟ್ಟದ ವಸ್ತುಗಳ ಲಭ್ಯತೆಯ ನಮ್ಮ ಅಮೃತ ಸಹಕಾರಿ ಮಾರ್ಟ್ ಹಬ್ಬಗಳ ಈ ಸಮಯದಲ್ಲಿ ಗ್ರಾಹಕರಿಗೆ ಪ್ರಯೋಜನ ಕಲ್ಪಿಸುವ ಸಲುವಾಗಿ ತಲಾ ಒಂದು ಸಾವಿರ ಮೌಲ್ಯದ ಖರೀದಿಗೆ ಒಂದು ಕೂಪನ್ ಒದಗಿಸಿ ಪ್ರತಿ ಹತ್ತು ದಿನಕ್ಕೊಂದು ಲಕ್ಕಿ ಡ್ರಾ ದ ಮೂಲಕ ಬಹುಮಾನವನ್ನು ಒದಗಿಸಲಾಗುತ್ತದೆ . ಮಾತ್ರವಲ್ಲದೆ ಪ್ರತಿ ಖರೀದಿ ಮೌಲ್ಯದ ಮೇಲೆ ಗ್ರಾಹಕರ ಖಾತೆಗೆ ಪಾಯಿಂಟ್ ಗಳನ್ನು ನೀಡುವ ಮೂಲಕ ಗ್ರಾಹಕರಿಗೆ ಲಾಭಾಂಶವನ್ನು ಹಂಚುವ ಕಾರ್ಯ ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ದಯಾನಂದ ಸರೋಳಿ, ನಿರ್ದೇಶಕರಾದ ರಾಜೇಶ್, ಸುಬ್ರಹ್ಮಣ್ಯ ಕುಮಾರ್ ಅಗರ್ತ, ವಸಂತ ಪಿಜಕ್ಕಳ, ಸದಾನಂದ ಶೆಟ್ಟಿ ಜಿ., ರಾಘವ ನಾಯ್ಕ, ಗೀತಾ, ಶ್ರೀರಾಮ, ಸಂಧ್ಯಾ, ಸುಂದರ ಕೆ. ಸಂಘದ ಮಾಜಿ ಅಧ್ಯಕ್ಷರುಗಳಾದ ವೆಂಕಟ್ರಮಣ ಭಟ್ ಪೆಲಪ್ಪಾರು, ಚಂದ್ರಶೇಖರ ಭಟ್ ತಾಳ್ತಾಜೆ, ಕೆ. ವಿ. ಪ್ರಸಾದ, ಮಾಜಿ ನಿರ್ದೇಶಕರುಗಳಾದ ಜಯಂತ ಪೊರೋಳಿ ಮತ್ತು ಜಗದೀಶ ರಾವ್ ಎಂ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಮುಕುಂದ ಬಜತ್ತೂರು, ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸದಾನಂದ ಶೆಟ್ಟಿ, ಸದಸ್ಯರಾದ ಶೌಕತ್ ಆಲಿ, ಬಜತ್ತೂರು ಗ್ರಾಮ ಪಂಚಾಯತ್ ಸದಸ್ಯರಾದ ಉಮೇಶ್ ಓಡ್ರಪಾಲ್, ಸಂಘದ ಸದಸ್ಯರಾದ ಹರಿರಾಮಚಂದ್ರ, ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಶೋಭಾ, ಸಿಬ್ಬಂದಿ ವರ್ಗ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸಂಘದ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಪುಷ್ಪರಾಜ ಶೆಟ್ಟಿ ಯವರು ಕಾರ್ಯಕ್ರಮವನ್ನು ನಿರೂಪಿಸಿ, ಶಾಖಾ ವ್ಯವಸ್ಥಾಪಕರಾದ ಪ್ರವೀಣ ಆಳ್ವರವರು ವಂದಿಸಿದರು.