ಪುತ್ತೂರು: ಎ.13ರಂದು ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (ಎಕೆಬಿಎಂಎಸ್) ಅಧ್ಯಕ್ಷ ಸ್ಥಾನದ ಚುನಾವಣೆಗೆ ಸಂಬಂಧಿಸಿ ಮಂಗಳೂರು ಪ್ರತಿನಿಧಿಯಾಗಿ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಈ ಕುರಿತು ಅಧಿಕೃತ ಘೋಷಣೆಯೊಂದು ಬಾಕಿಯಾಗಿದೆ.
ಎ.13ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (ಎಕೆಬಿಎಂಎಸ್) ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಲಿದೆ. ಈ ಕುರಿತು ಪ್ರತಿ ಜಿಲ್ಲೆಯಿಂದ ಚುನಾಯಿತ ಪ್ರತಿನಿಧಿಗಳ ಆಯ್ಕೆ ಆಗಬೇಕಾಗಿದ್ದು, ಮಾ.27ರಂದು ಜಿಲ್ಲಾ ಪ್ರತಿನಿಧಿಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಮಂಗಳೂರು ಜಿಲ್ಲಾ ಪ್ರತಿನಿಧಿಯಾಗಿ ಮಹೇಶ್ ಕಜೆ ಮಾತ್ರ ನಾಮಪತ್ರ ಸಲ್ಲಿಸಿದರಿಂದ ಬಹುತೇಕ ಅವರು ಅವಿರೋಧ ಆಯ್ಕೆಯಾದಂತೆ. ಆದರೂ ಮಾ.29ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಆ ಬಳಿಕ ಅವರನ್ನು ಚುನಾವಣಾಧಿಕಾರಿ ಅವಿರೋಧವಾಗಿ ಅಧಿಕೃತ ಘೋಷಣೆ ಮಾಡಲಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆದ ಜಿಲ್ಲಾ ಪ್ರತಿನಿಧಿಗಳ ಆಯ್ಕೆಯಲ್ಲಿ ಹಲವಾರು ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಆದರೆ ಅವರೆಲ್ಲರ ಅಧಿಕೃತ ಘೋಷಣೆ ಇನ್ನಷ್ಟೆ ಆಗಬೇಕಾಗಿದೆ.
ಪ್ರಥಮ ಬಾರಿಗೆ ಜಿಲ್ಲಾ ಪ್ರತಿನಿಧಿಗಳ ಚುನಾವಣೆ ಪ್ರಕ್ರಿಯೆ:
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಹಳೆಯ ಬೈಲಾ ಪ್ರಕಾರ ರಾಜ್ಯದ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯುತ್ತಿದ್ದು, ಉಳಿದಂತೆ ಪ್ರತಿನಿಧಿಗಳ ಆಯ್ಕೆ ಮಾಡುವ ಕ್ರಮವಿತ್ತು. ಆದರೆ ಈ ಭಾರಿ ಹೊಸ ಬೈಲಾ ಪ್ರಕಾರ ಜಿಲ್ಲಾ ಪ್ರತಿನಿಧಿಗಳ ಚುನಾವಣೆಗೂ ಅವಕಾಶ ನೀಡಲಾಗಿದೆ. ತಾಲೂಕಿನಲ್ಲಿ ಪ್ರತಿನಿಧಿಗಳ ನೇಮಕವಾದ ಬಳಿಕ ಜಿಲ್ಲಾ ಪ್ರತಿನಿಧಿಗಳ ಆಯ್ಕೆಗೆ ಚುನಾವಣೆ ನಡೆದು ಅದರಲ್ಲಿ ಆಯ್ಕೆಯಾದವರಿಂದ ರಾಜ್ಯದ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ. ಬಹುತೇಕ ಎಲ್ಲವು ಅವಿರೋಧವಾಗಿ ಆಯ್ಕೆ ನಡೆದಿದೆ. ಹೊಸ ಬೈಲಾ ಪ್ರಕಾರ ಮಂಗಳೂರು ಪ್ರಥಮವಾಗಿ ಮಂಗಳೂರಿನಲ್ಲೂ ಚುನಾವಣಾ ಕೇಂದ್ರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Home ಇತ್ತೀಚಿನ ಸುದ್ದಿಗಳು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಂಗಳೂರು ಪ್ರತಿನಿಧಿಯಾಗಿ ಮಹೇಶ್ ಕಜೆ ಅವಿರೋಧ ಆಯ್ಕೆ- ಘೋಷಣೆಯೊಂದೇ ಬಾಕಿ