ನೆಲ್ಯಾಡಿ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಮಹಾಸಮ್ಮೇಳನ, 1971ರ ಇಂಡೋಪಾಕ್ ಯುದ್ಧದ ವಿಜಯ ದಿವಸ್ ಆಚರಣೆ

0

ನೆಲ್ಯಾಡಿ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ದ.ಕ.ಜಿಲ್ಲೆ ಇದರ ’ಮಹಾ ಸಮ್ಮೇಳನ ಹಾಗೂ 1971ರ ಇಂಡೋ ಪಾಕ್ ಯುದ್ಧದ ವಿಜಯ ದಿವಸ್ 2025’ ಡಿ.13ರಂದು ಬೆಳಿಗ್ಗೆ ನೆಲ್ಯಾಡಿ ಬಿರ್ವ ಸಭಾಂಗಣದಲ್ಲಿ ನಡೆಯಿತು.


1971ರ ಇಂಡೋ ಪಾಕ್ ಯುದ್ಧದಲ್ಲಿ ಭಾಗವಹಿಸಿದ ವೀರ ಯೋಧರಿಗೆ ಗೌರವಾರ್ಪಣೆ ಮಾಡಿದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಮಹಾಪೋಷಕರೂ, ಮಾಜಿ ಸಂಸದರೂ ಆದ ಡಾ|ತೇಜಸ್ವಿನಿ ಅವರು ಮಾತನಾಡಿ, ಸೈನಿಕನಿಗೆ ಯಾವತ್ತೂ ನಿವೃತ್ತಿಯಿಲ್ಲ. ಆತ ಸಾಯುವ ತನಕವೂ ಸೈನಿಕನಾಗಿಯೇ ಇರುತ್ತಾನೆ. ಭಾರತವು ನೆರೆಯ 7 ದೇಶಗಳೊಂದಿಗೆ 15,500 ಕಿ.ಮೀ. ಭೂಭಾಗ ಗಡಿಹಂಚಿಕೊಂಡಿದೆ. 7500 ಕೀ.ಸಮುದ್ರ ತೀರ ಹಂಚಿಕೊಂಡಿದೆ. ಮೆರಿಟೈನ್ ಬಾರ್ಡರ್ ಸಹ ಇದೆ. ಇದರಲ್ಲಿ 12 ಸಾವಿರ ಕಿ.ಮೀ.ಶತ್ರು ರಾಷ್ಟ್ರಗಳ ಜೊತೆ ಗಡಿ ಹಂಚಿಕೊಂಡಿದೆ. ಅತ್ಯಂತ ಚಳಿ ಪ್ರದೇಶದಲ್ಲಿ ಯೋಧರು ರಾತ್ರಿ ಹಗಲು ಕಾಯುತ್ತಿರುತ್ತಾರೆ. ಯೋಧರದ್ದು ಅತ್ಯಂತ ಕಠಿಣವಾದ ಜೀವನ. ಆದ್ದರಿಂದ ಪ್ರತಿ ಶಾಲೆ, ಮನೆಗಳಲ್ಲೂ ಸೈನಿಕರ ಜೀವನದ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಹೇಳಿದರು.


ಬೇಡಿಕೆ ಈಡೇರಿಸಲಿ;
ಸರಕಾರ ನಿವೃತ್ತ ಸೈನಿಕರ ನ್ಯಾಯಯುತವಾದ ಬೇಡಿಕೆ ಈಡೇರಿಸಲಿ. ಸೈನಿಕರು ಸಂಯಮಕ್ಕೆ ಹೆಸರಾದವರು. ಆದರೆ ಅದಕ್ಕೂ ಕಾಲಮಿತಿಯಿದೆ. ಭಾರತ ಸರಕಾರ, ಕರ್ನಾಟಕ ಸರಕಾರ ಸೈನಿಕರಿಗೆ ಘೋಷಿಸಿರುವ ಸವಲತ್ತುಗಳನ್ನು ನೀಡಬೇಕು. ಸೈನಿಕರಿಗೆ ನಿವೇಶನಕ್ಕೆ ಪೊಲೀಸರು, ಜನರೇ ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳಿದ ಡಾ.ತೇಜಸ್ವಿನಿ ಅವರು, ಸಂಘಟನೆಯಲ್ಲಿ ಒಗ್ಗಟ್ಟು ಇರುತ್ತದೆ. ಮಾಜಿ ಸೈನಿಕರ ಸಂಘ ಬಲಪಡಿಸುವ ನಿಟ್ಟಿನಲ್ಲಿ ಎಲ್ಲಾ ಮಾಜಿ ಸೈನಿಕರು ಕೈಜೋಡಿಸಬೇಕೆಂದು ಹೇಳಿದರು.

ಏಕತೆ, ಸಂಘಟಿತರಾಗಿ ಕೆಲಸ ಮಾಡುವ-ನೋಬರ್ಟ್;
ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ನೋಬರ್ಟ್ ರೋಡ್ರಿಗಸ್ ಮಾತನಾಡಿ, ಈ ಸಂಘಟನೆ ಮಾಜಿ ಸೈನಿಕರಿಗೆ ಬೆನ್ನೆಲುಬು ಆಗಿದೆ. ದ.ಕ.ಜಿಲ್ಲೆಯಲ್ಲಿರುವ 4 ತಾಲೂಕು ಘಟಕಗಳು ಜಿಲ್ಲಾ ಸಂಘಕ್ಕೆ ಪಿಲ್ಲರ್‌ಗಳಂತೆ ಕೆಲಸ ಮಾಡುತ್ತಿವೆ. ಮುಂದೆಯೂ ಮಾಜಿ ಸೈನಿಕರ ಏಳಿಗೆಗಾಗಿ ಏಕತೆಯಿಂದ, ಸಂಘಟಿತರಾಗಿ ಕೆಲಸ ಮಾಡುವ ಎಂದರು.

ದೇಶಪ್ರೇಮ ಕೇವಲ ನಾಟಕೀಯವಾಗಿ ಇರಬಾರದು; ಡಾ| ಶಿವಣ್ಣ
ವಿಜಯ ದಿವಸ ಛಾಯ ಫಲಕ ಅನಾವರಣಗೊಳಿಸಿದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ|ಶಿವಣ್ಣ ಎನ್.ಕೆ.ಅವರು, ಕಳೆದ 30ವರ್ಷಗಳಿಂದ ಸೈನಿಕರಿಗೆ ಜಮೀನು, ನಿವೇಶನ, ಉದ್ಯೋಗ ಸಿಗುತ್ತಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಸೈನಿಕರಿಗೆ ಮೀಸಲಾತಿ ಇದೆ. ಆದರೆ ಕಾರ್ಯರೂಪಕ್ಕೆ ಬಂದಿಲ್ಲ. ನಾವೂ ಕೇಳಲೂ ಹೋಗುತ್ತಿಲ್ಲ. 1.42 ಲಕ್ಷ ನಿವೃತ್ತ ಸೈನಿಕರಿದ್ದರೂ ಕೇವಲ 12 ಸಾವಿರ ಮಂದಿ ಮಾತ್ರ ಸಂಘಟನೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಸಂಘಟನೆ ಬಲಿಷ್ಠಗೊಳಿಸಿ ಹೋರಾಟದಿಂದ ಸವಲತ್ತು ಪಡೆಯುವ ಎಂದು ಹೇಳಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೈನಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ದೇಶಪ್ರೇಮ ಕೇವಲ ನಾಟಕೀಯವಾಗಿ ಇರಬಾರದು ಎಂದರು.

ಸಂಘಟನೆ ಬಲಿಷ್ಠಗೊಳಿಸುವ; ಛಾಯಾ ಲಲಿತೇಶ್
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವೀರನಾರಿ ಘಟಕದ ರಾಜ್ಯಾಧ್ಯಕ್ಷೆ ಛಾಯಾ ಲಲಿತೇಶ್ ಮಾತನಾಡಿ, ಮಾಜಿ ಸೈನಿಕರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಸ್ಥಾಪನೆಯಾಗಿದೆ. ಸಂಘಟನೆ ಮೂಲಕ ವೀರನಾರಿಯರಿಗೂ ನೆರವು ಸಿಗುತ್ತಿದೆ. ಎಲ್ಲರೂ ಒಗ್ಗಟ್ಟಿನಿಂದ ಸಂಘಟನೆಯನ್ನು ಬಲಿಷ್ಠಗೊಳಿಸುವ ಎಂದರು.

ಯೋಧರ ಕಲ್ಯಾಣಕ್ಕೆ ಅಂಬಿಕಾ ವಿದ್ಯಾಸಂಸ್ಥೆಯಿಂದ ವರ್ಷಕ್ಕೆ 10 ಲಕ್ಷ ರೂ.ಬಳಕೆ-ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು ಅಂಬಿಕಾ ವಿದ್ಯಾಲಯದ ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಯೋಧರ ಜ್ಯೋತಕವಾಗಿ ಅಂಬಿಕಾ ಸಂಸ್ಥೆಯಿಂದ ಪುತ್ತೂರಿನಲ್ಲಿ ಆರಂಭಿಸಿರುವ ಅಮರ್ ಜವಾನ್ ಜ್ಯೋತಿ 2017ರಿಂದ ನೊಂದದೇ ಉರಿಯುತ್ತಿದೆ. ಅಂಬಿಕಾ ವಿದ್ಯಾಸಂಸ್ಥೆ ಉಚಿತ ಶಿಕ್ಷಣ ಸಹಿತ ವರ್ಷಕ್ಕೆ 10 ಲಕ್ಷ ರೂ.,ಯೋಧರಿಗಾಗಿ ಬಳಕೆ ಮಾಡುತ್ತಿದೆ ಎಂದು ಹೇಳಿದ ಅವರು ಸಂಸ್ಥೆಯ ಬೆಳ್ಳಿಹಬ್ಬ ಸಮಾರಂಭದಲ್ಲಿ ಪರಮವೀರ ಚಕ್ರ ಪಡೆದ ಲೆಫ್ಟಿನೆಂಟ್ ಸಂಜಯ್‌ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಲಿದ್ದೇವೆ. ದ.ಕ.ಜಿಲ್ಲೆಯ ಎಲ್ಲಾ ಯೋಧರೂ ಕಾರ್ಯಕ್ರಮಕ್ಕೆ ಬಂದು ಗೌರವ ಸ್ವೀಕರಿಸಬೇಕು ಎಂದರು.

ಇಸಿಹೆಚ್‌ಎಸ್ ಒಐಸಿ ಕರ್ನಲ್ ನಿತಿನ್ ಬಿಡೆ ಅವರು ಯೋಧರಿಗೆ ಸಿಗುವ ಆರೋಗ್ಯ ಸೇವೆಯ ಬಗ್ಗೆ ಮಾಹಿತಿ ನೀಡಿದರು. ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್, ಕಡಬ ತಾಲೂಕು ಉಪತಹಶೀಲ್ದಾರ್ ಗೋಪಾಲ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಮೈಸೂರು ಜಿಲ್ಲಾಧ್ಯಕ್ಷ ದಿವಾಕರ ಗೌಡ, ರಾಮನಗರ ಜಿಲ್ಲಾಧ್ಯಕ್ಷ ಶಿವಪ್ರಸಾದ್, ಬೀದರ್ ಜಿಲ್ಲಾಧ್ಯಕ್ಷ ರಾಜ್‌ಕುಮಾರ್ ಲಡ್ಡೆ, ದ.ಕ.ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಕಾಂಚೋಡ್, ದಾಸಪ್ಪ ಪೂಜಾರಿ, ಕಾರ್ಯದರ್ಶಿ ಸೋಮಶೇಖರ ಎನ್., ಖಜಾಂಜಿ ಚಂದಪ್ಪ ಡಿ.ಎಸ್., ಕಡಬ ತಾಲೂಕು ಘಟಕದ ಅಧ್ಯಕ್ಷ ಸುಬ್ರಾಯ ಬೈಪಡಿತ್ತಾಯ, ಕಾರ್ಯದರ್ಶಿ ಪೌಲೋಸ್ ಪಿ.ಸಿ., ಖಜಾಂಜಿ ಸ್ಟೀಫನ್ ಎ., ಬೆಳ್ತಂಗಡಿ ತಾಲೂಕು ಗೌರವಾಧ್ಯಕ್ಷ ಮಾಣಿ ಎಂ.ಎಂ., ಅಧ್ಯಕ್ಷ ತಂಗಚ್ಚನ್, ಕಾರ್ಯದರ್ಶಿ ಸುರೇಶ್ ಎನ್.ಎಚ್., ಖಜಾಂಜಿ ವಾಲ್ಟರ್ ಸೆಕ್ಯೂರಾ, ಬಂಟ್ವಾಳ ತಾಲೂಕು ಗೌರವಾಧ್ಯಕ್ಷ ಎ.ವೆಂಕಪ್ಪ ಗೌಡ, ಅಧ್ಯಕ್ಷ ಮೋನಪ್ಪ ಪೂಜಾರಿ, ಕಾರ್ಯದರ್ಶಿ ಐವನ್ ಮೇನೇಜಸ್, ಖಜಾಂಜಿ ರಾಜೇಶ್ ಬಂಟ್ವಾಳ, ಪುತ್ತೂರು ತಾಲೂಕು ಘಟಕದ ಗೌರವಾಧ್ಯಕ್ಷ ಸುರೇಶ್, ಅಧ್ಯಕ್ಷ ಗೋಪಾಲ ವಿ.ಬನ್ನೂರು, ಕಾರ್ಯದರ್ಶಿ ಪ್ರಕಾಶ್, ಖಜಾಂಜಿ ವಸಂತ ಎಸ್., ವೀರನಾರಿ ದ.ಕ.ಜಿಲ್ಲಾ ಘಟಕದ ಅಧ್ಯಕ್ಷೆ ಗೀತಾ ಜಿ.ಕೆ., ಕಡಬ ತಾಲೂಕು ಅಧ್ಯಕ್ಷೆ ಕಮಲ, ಪುತ್ತೂರು ತಾಲೂಕು ಅಧ್ಯಕ್ಷೆ ಪುಷ್ಪಾಪರಮೇಶ್ವರ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಸಂಚಾಲಕ ಮ್ಯಾಥ್ಯು ಟಿ.ಜಿ.ಪ್ರಾಸ್ತಾವಿಕವಾಗಿ ಮಾತನಾಡಿದರು. ಕಡಬ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸೆಬಾಸ್ಟಿನ್ ಕೆ.ಕೆ.ಸ್ವಾಗತಿಸಿ, ಮಂಜುನಾಥ ವಂದಿಸಿದರು. ವಳಾಲು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಅನಿ ಸ್ಕರಿಯಾ, ನೆಲ್ಯಾಡಿ ಪಿಎಂಶ್ರೀ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ ಸಹಶಿಕ್ಷಕಿ ಮೇರಿಜೋನ್ ನಿರೂಪಿಸಿದರು. ಜಾನ್ವಿ ಪ್ರಾರ್ಥಿಸಿದರು. 1971ರ ಇಂಡೋಪಾಕ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರ ಆತ್ಮಕ್ಕೆ ಚಿರಶಾಂತಿ ಕೋರಿ 1 ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು. ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಬ್ಯಾಂಡ್ ವಾದ್ಯದೊಂದಿಗೆ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು.

ಇಂಡೋಪಾಕ್ ಯುದ್ಧದಲ್ಲಿ ಭಾಗವಹಿಸಿದವರಿಗೆ ಗೌರವಾರ್ಪಣೆ;
1971ರ ಇಂಡೋಪಾಕ್ ಯುದ್ಧದಲ್ಲಿ ಭಾಗವಹಿಸಿದ ಯೋಧರಾದ ಡೊಮಿನಿಕ್ ಲಿಯೋ ಪಿರೇರಾ, ಗೋಪಾಲಕೃಷ್ಣ ಭಟ್, ಸಿ.ಜಾರ್ಜ್‌ಕುಟ್ಟಿ, ಪುರುಷೋತ್ತಮ, ಎ.ಕೆ.ಶಿವಾನ್, ಬಿ.ರಮಾನಾಥ, ಶಿವಪ್ಪ ಗೌಡ, ನೈನಾನ್ ಒ.ಜಿ., ಜಾನ್ ವರ್ಗೀಸ್, ನಾರಾಯಣ ಪಿಳ್ಳೈ, ಗಣಪಯ್ಯ ಗೌಡ, ತಾರನಾಥ ಎನ್.ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೀರನಾರಿಯರಿಗೆ ಸನ್ಮಾನ;
ವಿವಿಧ ಜಿಲ್ಲೆ, ತಾಲೂಕುಗಳಿಂದ ಆಗಮಿಸಿದ ವೀರ ನಾರಿಯರಾದ ಗೀತಾ, ಕಮಲ, ಲಿಸ್ಸಿ ಡೊಮಿನಿಕ್, ಸೆಲ್ವಿ ಪ್ರಭಾಕರನ್, ಜಯಶ್ರೀ, ಸವಿತಾ ಕೃಷ್ಣಪ್ರಸಾದ್, ಭವ್ಯ ಬಾಲಕೃಷ್ಣ, ಅನಿತಾಗಣಪಯ್ಯ, ಪುಷ್ಪಾಪರಮೇಶ್ವರ, ಅನ್ನಮರಿಯಾ, ಪ್ರೇಮಸುಂದರ ಗೌಡ, ವೇದಾವತಿ ವಿಠಲಶೆಟ್ಟಿ, ಛಾಯಾಲಲಿತೇಶ್, ಶೈಲಜಾಸುರೇಶ್, ಚಿತ್ರಾಸುಬ್ಬಯ್ಯ, ಶಿರೋಮಣಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ|ಶಿವಣ್ಣ ಎನ್.ಕೆ., ಮಹಾಪೋಷಕರಾದ ಡಾ|ತೇಜಸ್ವಿನಿ, ಹುತಾತ್ಮ ಯೋಧ ಕುಂತೂರಿನ ಸುನೀಶ್ ವಿ.ಜೆ.ಅವರ ತಾಯಿ ಮರಿಯಮ್ಮ, ಕಡಬ ತಾಲೂಕು ಘಟಕದ ಉಪಾಧ್ಯಕ್ಷ ಪಿಲಿಫ್, ಮೂವರು ಪುತ್ರರನ್ನು ಸೈನಿಕರಾಗಿ ಮಾಡಿರುವ ದೇವಕಿ ಪೂಜಾರಿ ಬಂಟ್ವಾಳ, ಬಿರ್ವ ಸೆಂಟರ್‌ನ ಸಂಜೀವ ಪೂಜಾರಿ ಮತ್ತಿತರರನ್ನು ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here