ಉಚಿತ ಶಿಕ್ಷಣಕ್ಕಾಗಿ ನಡೆದ ಪ್ರವೇಶ ಪರೀಕ್ಷೆಯಲ್ಲಿ ಪಾಲ್ಗೊಂಡ 1000ಕ್ಕೂ ಮಿಕ್ಕ ವಿದ್ಯಾರ್ಥಿಗಳು
ದಕ್ಷಿಣ ಕನ್ನಡ, ಕಾಸರಗೋಡು, ಕೊಡಗು ಹಾಗೂ ಹಾಸನ ಜಿಲ್ಲೆಯ 8 ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ ಉತ್ತಮ ಪ್ರತಿಕ್ರಿಯೆ ಡಿಸೆಂಬರ್ ಕೊನೆಯ ವಾರದೊಳಗೆ ಫಲಿತಾಂಶ ಪ್ರಕಟ

ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವತಿಯಿಂದ ನಡೆದ ಮೇಧಾ-2026 ಉಚಿತ ಶಿಕ್ಷಣ ಯೋಜನೆಯ ಪರೀಕ್ಷೆಗೆ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದ್ದು, ಎರಡನೇ ವರ್ಷ ನಡೆದ ಈ ಯೋಜನೆಯಲ್ಲಿ, ದಕ್ಷಿಣಕನ್ನಡ, ಕಾಸರಗೋಡು, ಕೊಡಗು ಹಾಗೂ ಹಾಸನ ಜಿಲ್ಲೆಯ ಒಟ್ಟು 8 ಕೇಂದ್ರಗಳಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಸುಮಾರು 1054 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು.
ಪುತ್ತೂರಿನ ನೆಹರು ನಗರದ ವಿವೇಕಾನಂದ ಆವರಣದಲ್ಲಿರುವ ವಿವೇಕಾನಂದ ಪದವಿ ಪೂರ್ವ ಕಾಲೇಜು, ಕಡಬದ ಪಂಜರಸ್ತೆಯ ವಿದ್ಯಾನಗರದಲ್ಲಿರುವ ಸರಸ್ವತಿ ಪ್ರೌಢಶಾಲೆ, ವಿಟ್ಲದ ಸಾಲೆತ್ತೂರು ರಸ್ತೆಯಲ್ಲಿರುವ ಪಿ.ಎಂ.ಶ್ರೀ ಸರಕಾರಿ ಪ್ರೌಢಶಾಲೆ, ಪಾಣೆಮಂಗಳೂರಿನಲ್ಲಿರುವ ಎಸ್.ಎಲ್.ಎನ್.ಪಿ. ವಿದ್ಯಾಲಯ, ಸುಳ್ಯದ ಜಾಲ್ಸೂರಿನ ವಿನೋಬ ನಗರದಲ್ಲಿರುವ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ, ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿರುವ ಶ್ರೀ ಭಾರತಿ ವಿದ್ಯಾಪೀಠ, ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಹಾಗೂ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿರುವ ರೋಟರಿ ಇಂಗ್ಲಿಷ್ ಸ್ಕೂಲ್ ಗಳಲ್ಲಿ ಈ ಪರೀಕ್ಷೆಯು ನಡೆದಿತ್ತು. ಈ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ 2026-27ನೇ ಸಾಲಿನಿಂದ ಪದವಿ ಪೂರ್ವ ವಿಭಾಗದಲ್ಲಿ ಸಂಪೂರ್ಣ ಉಚಿತ ಶಿಕ್ಷಣ ದೊರೆಯಲಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭಗೊಂಡಿದ್ದು ಡಿಸೆಂಬರ್ ಕೊನೆಯ ವಾರದೊಳಗೆ ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳಲಿದೆ.