ಪುತ್ತೂರು: ಇಲ್ಲಿನ ರೆಸ್ಟೋರೆಂಟ್ವೊಂದರಲ್ಲಿ ಊಟ ಮಾಡುವ ಸಂದರ್ಭ ಇತ್ತಂಡದ ನಡುವೆ ಮಾತಿನ ಚಕಮಕಿ ನಡೆದ ಮತ್ತು ವಿಷಯ ತಿಳಿದು ಪೊಲೀಸರು ಬಂದಾಗ ಇತ್ತಂಡದವರೂ ಪರಾರಿಯಾದ ಘಟನೆ ಪುತ್ತೂರು ದರ್ಬೆಯ ದೊನ್ನೆ ಬಿರಿಯಾನಿ ರೆಸ್ಟೋರೆಂಟ್ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಇತ್ತೀಚೆಗಷ್ಟೆ ಚಿತ್ರನಟ ದರ್ಶನ್ ಜೊತೆ ಮಡಾಯಿಕಾವು ಭಗವತಿ ದೇವಸ್ಥಾನದಲ್ಲಿ ಕಾಣಿಸಿಕೊಂಡು ಫೋಟೋ ವೈರಲ್ ಆಗಿದ್ದ ಪ್ರಜ್ವಲ್ ರೈ ಪಾತಾಜೆ ಹಾಗೂ ದೀಕ್ಷಿತ್, ಸ್ನೇಹಿತ ಉದಯ್ ಎಂಬವರೊಳಗೆ ಯಾವುದೋ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದೆ. ವಿಚಾರ ತಾರಕಕ್ಕೇರುವ ಹಂತದಲ್ಲಿ ಮಾಹಿತಿ ಅರಿತು ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಲ್ಲಿಗೆ ಬಂದ ವೇಳೆ ಎಲ್ಲರೂ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಉಪ್ಪಿನಂಗಡಿಯಲ್ಲಿ ತಲ್ವಾರ್ನಿಂದ ದಾಳಿ:
ಬಳಿಕದ ಬೆಳವಣಿಗೆಯಲ್ಲಿ, ಇದೇ ಘಟನೆ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ನೆಕ್ಕಿಲಾಡಿಯಲ್ಲಿ ರಾತ್ರಿ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಕಾರು ಮತ್ತು ರಿಕ್ಷಾದಲ್ಲಿ ಬಂದ ಎರಡು ಗುಂಪುಗಳು ಸಿನಿಮೀಯ ಶೈಲಿಯಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಗಾಯಗೊಂಡವರನ್ನು ಪ್ರಥಮ ಚಿಕಿತ್ಸೆಗಾಗಿ ಉಪ್ಪಿನಂಗಡಿಯ ಆಸ್ಪತ್ರೆಗೆ ಕರೆಕೊಂಡು ಬಂದಿದ್ದು, ಅಲ್ಲಿಯೂ ತಲವಾರು ಹಿಡಿದು ಇನ್ನೊಂದು ಗುಂಪು ಓಡಿಸಿದೆ ಎಂದು ಸುದ್ದಿಯಾಗಿದೆ.
ಪ್ರಜ್ವಲ್ ರೈ ಪಾತಾಜೆ ತಂಡದಿಂದ, ಸ್ಕೂಟರ್ನಲ್ಲಿ ಹೋಗುತ್ತಿದ್ದವರ ಮೇಲೆ ತಲ್ವಾರ್ ದಾಳಿಯಾಗಿದೆ. ಇದರಿಂದಾಗಿ ದೀಕ್ಷಿತ್ ಮತ್ತು ಜಯರಾಮ ಎಂಬವರು ಗಾಯಗೊಂಡಿದ್ದಾರೆ. ದೀಕ್ಷಿತ್ ಗಂಭೀರ ಗಾಯಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ. ಘಟನೆ ಸಂಬಂಧ ಯಾರೂ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.