ಕಾಂಚನ ಹಾ.ಉ.ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರರವರಿಗೆ ಅಭಿನಂದನಾ ಕಾರ್ಯಕ್ರಮ -ಸನ್ಮಾನ

0

  • *ಎಂದಿಗೂ ಅವ್ಯವಹಾರಕ್ಕೆ ಎಡೆಮಾಡಿ ಕೊಟ್ಟಿಲ್ಲ: ಯಶವಂತ ಜಿ.
  • *ಶೇ.100ರಷ್ಟು ಪರಿಪೂರ್ಣ ಕೆಲಸ: ಡಾ.ಜಿತೇಂದ್ರ ಪ್ರಸಾದ್
  • *ಹೈನುಗಾರರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ; ರಾಜೇಶ್ ಕಾಮತ್
  • *ಚಂದ್ರಶೇಖರರವರ ಸೇವೆ ಸಂಘಕ್ಕೆ ಇನ್ನೂ ಬೇಕು; ಡೆನ್ನಿಸ್ ಪಿಂಟೋ
  • *ಸೇವಾ ರೂಪದಲ್ಲಿ ಕೆಲಸ ಮಾಡಿದ್ದಾರೆ: ಶಿವರಾಮ ಕಾರಂತ್
  • *ಅಧ್ಯಕ್ಷರುಗಳಿಂದ ಪೂರ್ಣ ಸಹಕಾರ ದೊರೆತಿದೆ; ಚಂದ್ರಶೇಖರ ಗೌಡ

ನೆಲ್ಯಾಡಿ: ಬಜತ್ತೂರು ಗ್ರಾಮದ ಕಾಂಚನ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಳೆದ 35 ವರ್ಷಗಳಿಂದ ಕಾರ್ಯನಿರ್ವಹಣಾಧಿಕಾರಿಯಾಗಿದ್ದು ಮಾ.31ರಂದು ಸೇವಾ ನಿವೃತ್ತಿಯಾಗಲಿರುವ ಚಂದ್ರಶೇಖರ ಗೌಡರವರಿಗೆ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಹಾಗೂ ಸನ್ಮಾನ ಮಾ.28ರಂದು ಬೆಳಿಗ್ಗೆ ಸಂಘದ ವಠಾರದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾರ್ಯದರ್ಶಿಗಳ ಸೇವೆ ಅಮೂಲ್ಯವಾಗಿರುತ್ತದೆ. ಗುಣಮಟ್ಟದ ಬಗ್ಗೆ ಹೆಚ್ಚಿನ ಕಾಳಜಿ ಇರಬೇಕಾಗುತ್ತದೆ. ಸರಳ ವ್ಯಕ್ತಿತ್ವದ ಚಂದ್ರಶೇಖರ ಅವರದ್ದು ಮಾತು ಕಡಿಮೆಯಾದರೂ ಸಂಘದ ಸದಸ್ಯರಿಗೆ ಒಳ್ಳೆಯ ಸರ್ವೀಸ್ ನೀಡಿದ್ದಾರೆ. ಹೊಸದಾಗಿ ಬರುವ ಕಾರ್ಯದರ್ಶಿಗಳೂ ಅವರ ಮಾದರಿಯಲ್ಲಿಯೇ ಕೆಲಸ ಮಾಡಬೇಕು. ಚಂದ್ರಶೇಖರ ಅವರ ನಿವೃತ್ತ ಜೀವನವು ಸುಖಮಯವಾಗಿರಲಿ. ಅವರಿಗೆ ದೇವರು ಆಯುಷ್ಯ, ಆರೋಗ್ಯ ಕರುಣಿಸಲಿ. ಮುಂದೆಯೂ ಅವರು ಸಂಸ್ಥೆಯೊಂದಿಗೆ ಇರಲಿ ಎಂದರು.

ಎಂದಿಗೂ ಅವ್ಯವಹಾರಕ್ಕೆ ಎಡೆಮಾಡಿ ಕೊಟ್ಟಿಲ್ಲ:
ಕಾರ್ಯಕ್ರಮ ಉದ್ಘಾಟಿಸಿದ ಸಂಘದ ಸ್ಥಾಪಕಾಧ್ಯಕ್ಷ ಯಶವಂತ ಜಿ.ಯಶವಂತ ಮಹಲ್ ಕೆಮ್ಮಾರ ಅವರು ಮಾತನಾಡಿ, ೩೫ ವರ್ಷ ಸುದೀರ್ಘ ಸೇವೆ ಸಲ್ಲಿಸಿದ ಚಂದ್ರಶೇಖರ ಗೌಡರವರು ಸಂಘದಲ್ಲಿ ಎಂದಿಗೂ ಅವ್ಯವಹಾರಕ್ಕೆ ಎಡೆಮಾಡಿ ಕೊಟ್ಟಿಲ್ಲ. ಅವರ ವಿರುದ್ಧ ಈ ತನಕ ಯಾರಿಂದಲೂ ಸಂಘಕ್ಕೆ ದೂರು ಬಂದಿಲ್ಲ. ದಿನಕ್ಕೆ ೨೨ ಲೀ.ಹಾಲು ಖರೀದಿಯೊಂದಿಗೆ ಆರಂಭಗೊಂಡ ಸಂಘದಲ್ಲಿ ಒಂದು ಹಂತದಲ್ಲಿ ದಿನಕ್ಕೆ ೧೨೦೦ ಲೀ. ಹಾಲು ಸಂಗ್ರಹವಾಗಿರುವುದು ಹೆಮ್ಮೆಯ ವಿಚಾರ. ಹಾಲಿನ ಗುಣಮಟ್ಟಕ್ಕೆ ಸಂಬಂಧಿಸಿ ಸಂಘಕ್ಕೆ ಮೂರು ಸಲ ಒಕ್ಕೂಟದಿಂದ ಪ್ರಶಸ್ತಿ ಬಂದಿದೆ. ಇದರಲ್ಲಿ ಸಂಘದ ಕಾರ್ಯದರ್ಶಿ ಚಂದ್ರಶೇಖರ ಹಾಗೂ ಅವರ ತಂಡದ ಶ್ರಮವಿದೆ. ನಿವೃತ್ತಿಯಾಗುತ್ತಿರುವ ಚಂದ್ರಶೇಖರ ಅವರ ಜೀವನವು ಸುಖಮಯವಾಗಿರಲಿ ಎಂದು ಹಾರೈಸಿದರು.

ಶೇ.೧೦೦ರಷ್ಟು ಪರಿಪೂರ್ಣ ಕೆಲಸ:
ಅತಿಥಿಯಾಗಿದ್ದ ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ,ಜಿತೇಂದ್ರ ಪ್ರಸಾದ್‌ರವರು ಮಾತನಾಡಿ, ಚಂದ್ರಶೇಖರ ಅವರು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ್ದಾರೆ. ೨೨ ಲೀ.ಹಾಲು ಖರೀದಿಯೊಂದಿಗೆ ೧೨೦೦ ಲೀ.ಹಾಲು ಖರೀದಿಸುವ ಹಂತಕ್ಕೆ ಸಂಘ ಬೆಳೆದಿರುವುದರಲ್ಲಿ ಚಂದ್ರಶೇಖರ ಅವರ ಶ್ರಮವಿದೆ. ಅವರ ಕೆಲಸ ಶೇ.೧೦೦ರಷ್ಟು ಪರಿಪೂರ್ಣವಾಗಿತ್ತು. ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ, ಸವಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸಿದ್ದಾರೆ ಎಂದರು.

ಹೈನುಗಾರರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ:
ಇನ್ನೋರ್ವ ಅತಿಥಿ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಮಾತನಾಡಿ, ಪರಸ್ಪರ ಸಹಕಾರ ಮನೋಭಾವ, ಹೊಂದಾಣಿಕೆಯಿಂದ ಕೆಲಸ ಮಾಡುವುದು ಸಹಕಾರ ಸಂಘಗಳ ತತ್ವವಾಗಿದೆ. ಸಹಕಾರ ತತ್ವದಂತೆ ೩೫ ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಚಂದ್ರಶೇಖರ ಅವರು ಎಲ್ಲಾ ಹೈನುಗಾರರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಹೊಸ ಕಾರ್ಯದರ್ಶಿಯವರಿಗೂ ಹಾಲು ಉತ್ಪಾದಕರು ಸಹಕಾರ ನೀಡಿ. ಈ ಮೂಲಕ ಸಂಘ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಹೇಳಿದರು.

ಚಂದ್ರಶೇಖರರವರ ಸೇವೆ ಸಂಘಕ್ಕೆ ಇನ್ನೂ ಬೇಕು:
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡೆನ್ನಿಸ್ ಪಿಂಟೊ ಪುಯಿಲ ಮಾತನಾಡಿ, ಸರಕಾರದ ನಿಯಮದಂತೆ ಚಂದ್ರಶೇಖರ ಗೌಡರವರಿಗೆ ಅನಿವಾರ್ಯವಾಗಿ ಸಂಘದಿಂದ ಬೀಳ್ಕೊಡುಗೆ ನೀಡುತ್ತಿದ್ದೇವೆ. ಅವರ ಸೇವೆ ಸಂಘಕ್ಕೆ ಇನ್ನೂ ಬೇಕು. ಅವರೊಂದಿಗೆ ೪೭ ವರ್ಷಗಳಿಂದ ಒಡನಾಟದಲ್ಲಿದ್ದೇನೆ. ೩೫ ವರ್ಷ ಸಂಘದಲ್ಲಿ ಕಾರ್ಯದರ್ಶಿಯಾಗಿ ಎಲ್ಲಾ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಚಂದ್ರಶೇಖರ ಅವರು ಸಫಲರಾಗಿದ್ದಾರೆ. ಅವರು ನಿಷ್ಪಕ್ಷಪಾತ ಹಾಗೂ ಪ್ರಮಾಣಿಕವಾಗಿ ಸೇವೆ ನೀಡಿದ್ದಾರೆ. ಎಲ್ಲವನ್ನೂ ಸಮಾಧಾನಚಿತ್ತದಿಂದ ಆಲಿಸಿ, ಸಂಘದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿ ಸಂಘ ಎತ್ತರಕ್ಕೆ ಬೆಳೆಯಲೂ ಕಾರಣೀಭೂತರಾಗಿದ್ದಾರೆ. ಆದ್ದರಿಂದ ಅವರಿಗೆ ಪ್ರವೃತ್ತಿಯಿಂದ ನಿವೃತ್ತಿ ಇಲ್ಲ. ಸಂಘಕ್ಕೆ ಅವರಿಂದ ನಿರಂತರ ಸಹಕಾರ ಸಿಗಬೇಕೆಂದು ಹೇಳಿದರು.

ಸೇವಾ ರೂಪದಲ್ಲಿ ಕೆಲಸ ಮಾಡಿದ್ದಾರೆ:
ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ಶಿವರಾಮ ಕಾರಂತ ಉರಾಬೆ ಅವರು, ೩೫ ವರ್ಷದ ಹಿಂದೆ ಈ ಭಾಗದ ಹೈನುಗಾರರು ಕೊಯಿಲಕ್ಕೆ ಹಾಲು ಕೊಂಡೊಯ್ಯುತ್ತಿದ್ದರು. ಇಲ್ಲಿನ ಹಾಲು ಉತ್ಪಾದಕರ ಪ್ರಯತ್ನದಿಂದ ೧೯೯೧ರಲ್ಲಿ ಕಾಂಚನ ಹಾಲು ಉತ್ಪಾದಕರ ಸಹಕಾರ ಸಂಘ ಆರಂಭಗೊಂಡಿತ್ತು. ಆಗ ಟೈಲರ್ ವೃತ್ತಿ ಮಾಡುತ್ತಿದ್ದ ಚಂದ್ರಶೇಖರ್ ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಿ ಅವರ ಟೈಲರಿಂಗ್ ವೃತ್ತಿ ಮಾಡುತ್ತಿದ್ದ ಕಟ್ಟಡದಲ್ಲಿಯೇ ಹಾಲು ಖರೀದಿ ಆರಂಭಿಸಲಾಯಿತು. ಆರಂಭದಲ್ಲಿ ತಿಂಗಳಿಗೆ ೨೦೦ ರೂ.ವೇತನ ಪಡೆಯುತ್ತಿದ್ದ ಚಂದ್ರಶೇಖರ ಅವರು ಸೇವಾ ರೂಪದಲ್ಲಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದಾರೆ. ಸಂಘಕ್ಕೆ ೩೦ ಸೆಂಟ್ಸ್ ನಿವೇಶನ ಮಂಜೂರುಗೊಂಡ ಬಳಿಕ ದಾನಿಗಳ ಸಹಕಾರದೊಂದಿಗೆ ಕಟ್ಟಡವೂ ನಿರ್ಮಾಣಗೊಂಡಿತು. ಈ ಸಂಘ ಪೆರಿಯಡ್ಕ, ವಳಾಲು, ಶಾಂತಿನಗರದಲ್ಲಿ ಶಾಖೆಯನ್ನೂ ಹೊಂದಿತ್ತು. ಈಗ ಮೂರು ಶಾಖೆಗಳೂ ಸ್ವಂತ ಸಂಘಗಳಾಗಿವೆ. ಚಂದ್ರಶೇಖರ್ ಅವರು ಪ್ರಾಮಾಣಿಕವಾಗಿ, ನಿಷ್ಠೆಯಿಂದ ಹಾಗೂ ಎಲ್ಲಾ ಅಧ್ಯಕ್ಷರೊಂದಿಗೆ, ನಿರ್ದೇಶಕರೊಂದಿಗೆ ಉತ್ತಮ ಸಂಬಂಧವಿರಿಸಿಕೊಂಡು ಕೆಲಸ ನಿರ್ವಹಿಸಿದ್ದಾರೆ. ಲೆಕ್ಕಪತ್ರಗಳ ನಿರ್ವಹಣೆ, ಒಕ್ಕೂಟದಿಂದ ನೀಡುತ್ತಿದ್ದ ಮಾಹಿತಿಯನ್ನೂ ಸಕಾಲದಲ್ಲಿ ನೀಡುತ್ತಿದ್ದರು. ಸಾಮಾಜಿಕ ಕಳಕಳಿಯೂ ಹೊಂದಿರುವ ಚಂದ್ರಶೇಖರ ಗೌಡರ ಸೇವೆ ಸಂಘಕ್ಕೆ ಮುಂದೆಯೂ ಸಿಗಬೇಕೆಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಚಂದ್ರಶೇಖರ ಗೌಡ ಅವರು ಮಾತನಾಡಿ, ೧೯೯೧ರಲ್ಲಿ ೨೨.೬ ಲೀ.ಹಾಲು ಖರೀದಿಯೊಂದಿಗೆ ಆರಂಭಗೊಂಡ ಕಾಂಚನ ಹಾಲು ಉತ್ಪಾದಕರ ಸಹಕಾರ ಸಂಘವು ಹಲವು ಎಡರು ತೊಡರುಗಳ ಮಧ್ಯೆ ಬೆಳೆದು ನಿಂತಿದೆ. ಹಾಲು ಉತ್ಪಾದಕರ ಮನೆಗಳಿಗೆ ಭೇಟಿ ನೀಡಿ ಹೈನುಗಾರರಿಗೆ ಪ್ರೋತ್ಸಾಹ ನೀಡಿ ಹಾಲು ಸಂಗ್ರಹ ಹೆಚ್ಚಿಸಲಾಗಿದೆ. ಗುಣಮಟ್ಟಕ್ಕಾಗಿ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಮೂರು ಸಲ ಪ್ರಶಸ್ತಿ ಬಂದಿದೆ. ಸಂಘದ ಅಧ್ಯಕ್ಷರುಗಳಿಂದ ಪೂರ್ಣ ಸಹಕಾರ ದೊರೆತಿರುವುದರಿಂದ ೩೫ ವರ್ಷ ಕೆಲಸ ನಿರ್ವಹಿಸಿದ್ದೇನೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಜನರ ಸಂಪರ್ಕ ಸಂಘದಿಂದಾಗಿ ದೊರೆತಿದೆ. ಹಾಲು ಉತ್ಪಾದಕರಿಂದ ಸಂಘ ಈ ಮಟ್ಟಕ್ಕೆ ಬೆಳೆದಿದೆ. ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿವೃತ್ತ ವ್ಯವಸ್ಥಾಪಕ ಡಾ.ರಾಮಕೃಷ್ಣ ಭಟ್, ಬಜತ್ತೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಕುಸುಮಾವತಿ ಮುದ್ಯ, ಬೆಳ್ಳಿಪ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಮನೋಹರ ಡಿ.ವಿ., ನಿವೃತ್ತ ಹಾಲು ಪರೀಕ್ಷಕ ಮ್ಯಾಕ್ಸಿಂ ಪೀಟರ್ ಪಿಂಟೋ ಅವರು ಚಂದ್ರಶೇಖರ ಅವರ ಬಗ್ಗೆ ಮಾತನಾಡಿ ಶುಭಹಾರೈಸಿದರು.

ಸಂಘದ ಉಪಾಧ್ಯಕ್ಷ ಶಶಿಧರ ಮುದ್ಯ, ಮಾಜಿ ಅಧ್ಯಕ್ಷರಾದ ಶ್ರೀಧರ ಗೌಡ ಮುದ್ಯ, ಹರಿಶ್ಚಂದ್ರ ಗೌಡ ಮುದ್ಯ, ನಿರ್ದೇಶಕ ರುಕ್ಮಯ ಗೌಡ ಪುಯಿಲ, ರವೀಂದ್ರ ಮುದ್ಯ ಅವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ನಿರ್ದೇಶಕ ಉಮೇಶ್ ನೆಕ್ಕರೆ ಸ್ವಾಗತಿಸಿ, ನಿರ್ದೇಶಕ ಸುರೇಶ್ ಬಿದಿರಾಡಿ ವಂದಿಸಿದರು. ನಿರ್ದೇಶಕ ನಾರಾಯಣ ಕೆಳಗಿನಮನೆ ನಿರೂಪಿಸಿದರು. ಶರತ್ ಮುದ್ಯ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಯಂ.ಶಶಿಧರ ಗೌಡ ಮುದ್ಯ, ನಿರ್ದೇಶಕರಾದ ಯಂ.ಹರಿಶ್ಚಂದ್ರ ಗೌಡ ಮುದ್ಯ, ಯಂ.ರವೀಂದ್ರ ಗೌಡ ಮುದ್ಯ, ಪ್ರೇಮ ನೂಜೋಲು, ಹೊನ್ನಮ್ಮ ನೂಜೋಲು, ರುಕ್ಮಯ ಗೌಡ ಪುಯಿಲ, ಶ್ರೀಧರ ಬಿ.ಬರಮೇಲು,ರತ್ನಾವತಿ ನಾಯಿಲ, ವಸಂತಿ ಬಿ.ಬೇರಿಕೆ, ನಿಯೋಜಿತ ಕಾರ್ಯದರ್ಶಿ ಅಜಯ್‌ಕುಮಾರ್ ಪದಕ, ಹಾಲು ಪರೀಕ್ಷಕಿ ಭವಾನಿ ಬಿ.ಪುಯಿಲ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಗಂಗಾಧರ ಗೌಡ ಪಿ.ಎನ್. ಕೆಮ್ಮಾರ, ತಾ.ಪಂ.ಮಾಜಿ ಸದಸ್ಯ ಮುಕುಂದ ಗೌಡ ಬಜತ್ತೂರು, ಶಾಂತಿನಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರತಾಪ್‌ಚಂದ್ರ ರೈ ಕುದ್ಮಾರುಗುತ್ತು, ಕಾರ್ಯದರ್ಶಿ ರಜತ್, ಕುಂತೂರುಪದವು ಹಾಲು ಉತ್ಪಾದಕರ ಸಹಕಾರ ಸಂಘದ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಮಂಜಪ್ಪ ಗೌಡ, ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ಸುಬ್ರಹ್ಮಣ್ಯ ಭಟ್, ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಗದೀಶ್ ರಾವ್ ಮಣಿಕ್ಕಳ, ಕಾರ್ಯದರ್ಶಿ ಮಧುಶ್ರೀ, ವಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಸಂತ ಗೌಡ ಪಿಜಕ್ಕಳ, ಕಾರ್ಯದರ್ಶಿ ಪದ್ಮಾವತಿ, ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಅನುರಾಧಾ, ಆಲಂತಾಯ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಲತಾಶ್ರೀ ಸೇರಿದಂತೆ ಸಂಘದ ಸದಸ್ಯರು, ಚಂದ್ರಶೇಖರ ಗೌಡರವರ ಹಿತೈಷಿಗಳು, ಹಾಲು ಉತ್ಪಾದಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ ಸಂಘದ ಕಚೇರಿಯಲ್ಲಿ ಗಣಹೋಮ ನಡೆಯಿತು. ಬೆಳಿಗ್ಗೆ ಫಲಾಹಾರ ಹಾಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಸನ್ಮಾನ:
ಕಾಂಚನ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಚಂದ್ರಶೇಖರ ಹಾಗೂ ಅವರ ಪತ್ನಿ ಗಿರಿಜಾ ಅವರನ್ನು ಸನ್ಮಾನಿಸಲಾಯಿತು. ಚಂದ್ರಶೇಖರ ಅವರಿಗೆ ಚಿನ್ನದ ಉಂಗುರ, ಶಾಲುಹಾಕಿ, ಪೇಟ, ಫಲತಾಂಬೂಲ, ಸ್ಮರಣಿಕೆ ನೀಡಿ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಚಂದ್ರಶೇಖರ ಅವರ ಹಿತೈಷಿಗಳೂ ಗೌರವಿಸಿದರು. ಸಂಘದ ಉಪಾಧ್ಯಕ್ಷ ಶಶಿಧರ ಮುದ್ಯ ಸನ್ಮಾನಪತ್ರ ವಾಚಿಸಿದರು.

LEAVE A REPLY

Please enter your comment!
Please enter your name here