ರಾಮಕುಂಜ: ಕೊಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಮಾ.29ರಂದು ಸಂಜೆ ಚಾಲನೆ ದೊರೆತಿದೆ.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಧ್ವಜಾರೋಹಣ ನಡೆದ ಬಳಿಕ ದೇವರ ಬಲಿ ಹೊರಟು ಉತ್ಸವ ನಡೆಯಿತು. ಪವಿತ್ರಪಾಣಿ ವೆಂಕಟ್ರಮಣ ಕುದ್ರೆತ್ತಾಯ, ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ನೀರಜ್‌ಕುಮಾರ್ ರೈ ಅರುವಾರ ಬಾಳಿಕೆ, ಸದಸ್ಯರಾದ ಯತೀಶ್ ಗುಂಡಿಜೆ, ಸುನೀತ್‌ರಾಜ್ ಶೆಟ್ಟಿ ಬಂತೆಜಾಲು, ಶ್ರೀಧರ ಪೂಜಾರಿ ತುಂಬೆತ್ತಡ್ಕ, ಸಂಜೀವ ಸುದೆಂಗಳ, ಗೋಪಾಲನಾಯ್ಕ್ ಸಿಗೆತ್ತಡಿ, ಸುಜಾತ ಜೆ.ಶೆಟ್ಟಿ ಬಡಿಲ, ಮೀನಾಕ್ಷಿ ಕೆ.ಮುಂಡೈಮಾರು, ಉತ್ಸವ ಸಮಿತಿ, ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಎಲ್ಲಾ ಉಪಸಮಿತಿಯವರು, ಗ್ರಾಮಸ್ಥರು ಉಪಸ್ಥಿತರಿದ್ದರು. ರಾತ್ರಿ ಪುತ್ತೂರು ಎಸ್‌ಆರ್‌ಕೆ ಟ್ರೇಡರ‍್ಸ್‌ನ ಕೇಶವ ಅಮೈ ಅವರ ಸೇವಾರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮ:
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ವಿದುಷಿ ಭಾಗ್ಯಶ್ರೀ ರೈಯವರ ಕೊಯಿಲ ಶಾಖೆಯ ಶಿಷ್ಯವೃಂದದವರಿಂದ ನೃತ್ಯಾರ್ಪಣಾ, ಬಳಿಕ ಪುತ್ಯೆ ಬಳಗ ಇವರ ಪ್ರಾಯೋಜಕತ್ವದಲ್ಲಿ ಕಡಬ ಭಾರತೀಯ ಕಲೆಗಳ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ನೃತ್ಯಗುರು ವಿದುಷಿ ಪ್ರಮೀಳಾ ಲೋಕೇಶ್‌ರವರ ನಿರ್ದೇಶನದಲ್ಲಿ ನೃತ್ಯ ನಿನಾದ ನಡೆಯಿತು. ನಂತರ ಪುತ್ತೂರು ಎಸ್‌ಆರ್‌ಕೆ ಲ್ಯಾಡರ‍್ಸ್‌ನವರ ಪ್ರಾಯೋಜಕತ್ವದಲ್ಲಿ 9ನೇ ವರ್ಷದ ಕಲಾಸೇವೆ ಪ್ರಯುಕ್ತ ಕಲರ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾಯನ ಸಂಭ್ರಮ ನಡೆಯಿತು.
ನಾಳೆ ದರ್ಶನ ಬಲಿ:
ಮಾ.30ರಂದು ರಾತ್ರಿ ಬಲಿ ಹೊರಟು ಉತ್ಸವ, ಆತೂರಿನಿಂದ ಗೋಕುಲನಗರ, ಕೆ.ಸಿ.ಫಾರ್ಮ್ ತನಕ ಪೇಟೆ ಸವಾರಿ, ಕಟ್ಟೆಪೂಜೆಗಳು ನಡೆಯಲಿವೆ. ಮಾ.31ರಂದು 9.30ರಿಂದ ಉತ್ಸವ ಆರಂಭಗೊಂಡು 12ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಲಿದೆ. ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಆನೆಗುಂಡಿಯವರೆಗೆ ಪೇಟೆ ಸವಾರಿ, ಆನೆಗುಂಡಿಯಲ್ಲಿ ಕೆರೆ ಉತ್ಸವ, ಆನೆಗುಂಡಿ ಬೂಡಿನಿಂದ ದುಗಲಾಯ ದೈವದ ಭಂಡಾರ ತರುವುದು, ದೇವಸ್ಥಾನದಲ್ಲಿ ರಂಗಪೂಜೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭೀಷ್ಮ ವಿಜಯ ಯಕ್ಷಗಾನ ತಾಳಮದ್ದಳೆ, ಶನಿಮಹಾತ್ಮೆ ಪೌರಾಣಿಕ ನಾಟಕ ನಡೆಯಲಿದೆ.