ವಿಜ್ಞಾನವೇ ಬದುಕಿಗೆ ಬಹಳ ಹತ್ತಿರವಾದ ಸಂಗತಿ ಎಂದು ಹಿರಿಯ ತುಳು ಜನಪದ ವಿದ್ವಾಂಸ ಕೆ.ಕೆ. ಪೇಜಾವರ್
ಸವಣೂರು: ವಿಜ್ಞಾನವೇ ಬದುಕಿಗೆ ಬಹಳ ಹತ್ತಿರವಾದ ಸಂಗತಿ ಎಂದು ಹಿರಿಯ ತುಳು ಜನಪದ ವಿದ್ವಾಂಸ ಕೆಕೆ ಪೇಜಾವರ್ ಮಂಗಳೂರು ಹೇಳಿದರು. ಅವರು ಚಿನ್ನದ ಟೋಪಿ, ಬಣ್ಣದ ಹಾಡು, ಕನಸಿನ ಕಲಿಕೆ, ಬಣ್ಣದ ಬಣ್ಣ, ಹೊಸ ಬಣ್ಣ ಹೀಗೆ ಕಳೆದ 5 ವರ್ಷಗಳಿಂದ ವಿಭಿನ್ನ ರೀತಿಯಲ್ಲಿ ಮಕ್ಕಳ ರಂಗ ಶಿಬಿರಗಳನ್ನು ನಡೆಸುತ್ತಾ ಬಂದಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಣ್ಚಪ್ಪಾಡಿ ಇದರ ಆರನೇ ವರ್ಷದ ಮಕ್ಕಳ ವಿಜ್ಞಾನಾತ್ಮಕ ರಂಗ ಶಿಬಿರ ಪುಣ್ಚ ಕುಂಚದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಗಣಿತದ ಮೂಲ ಪರಿಕಲ್ಪನೆಯಾದ ಅನೌಪಚಾರಿಕ ಅಳತೆ ಮಾನ ಪಾವು ಸೇರಿನೊಂದಿಗೆ ಅಕ್ಕಿಯನ್ನು ಅಳತೆ ಮಾಡಿ ಗೆರೆಸೆಗೆ ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಗಣಿತ ಮತ್ತು ವಿಜ್ಞಾನ ನಮ್ಮ ಬದುಕಿನ ಅವಿಭಾಜ್ಯ ಅಂಗ. ಬದುಕು ಎಂಬುದು ದಿನನಿತ್ಯದ ಲೆಕ್ಕದ ಹಾಗೆ ಬದುಕಿನ ಲೆಕ್ಕವನ್ನು ನಾವು ಮಕ್ಕಳಿಗೆ ಹೇಳಿಕೊಡಬೇಕು ಇಂತಹ ಹೊಸ ಪರಿಕಲ್ಪನೆಯ ರಂಗ ಶಿಬಿರಗಳು ಮಕ್ಕಳ ಪ್ರತಿಭೆಗೆ ಪ್ರೇರಣೆಯಾಗುವುದರಲ್ಲಿ ಸಂಶಯವಿಲ್ಲ ಎಂದರು.
ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಂದರಿ ಬಿ ಎಸ್.ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ನಡೆಸುತ್ತಾ ಬಂದಿರುವ ಪುಣ್ಚಪ್ಪಾಡಿ ಶಾಲೆಯ ಶಿಬಿರವು ವಿಶಿಷ್ಟವಾಗಿ ವಿನೂತನವಾಗಿ ಹೀಗೆ ಮುಂದುವರೆಯಲಿ ಎಂದು ಹಾರೈಸಿದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ರೈ ಪಿ ಡಿ ನಮ್ಮ ಶಾಲೆಯಲ್ಲಿ ನಡೆಯುವ ರಂಗ ತರಬೇತಿ ಶಿಬಿರಗಳು ಊರಿಗೆ ಹಬ್ಬವಾಗಿ ನಡೆಯುತ್ತಿವೆ ಎಂದು ಹೇಳಿದರು.
ಶಿಬಿರಗಳು ವಿಜ್ಞಾನ ಗಣಿತಕ್ಕೆ ಒತ್ತು ಕೊಟ್ಟಾಗ ಪರಿಪೂರ್ಣ ಕೌಶಲದ ಅಭಿವೃದ್ಧಿಯಾಗುತ್ತದೆ, ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಶಿಬಿರಗಳು ಅತ್ಯಾವಶ್ಯಕ ಎಂದು ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಶೀನಪ್ಪ ಶೆಟ್ಟಿ ನೆಕ್ರಾಜೆ ಹೇಳಿದರು. ಸದಸ್ಯರಾದ ಗಿರಿಶಂಕರ ಸುಲಾಯ ಮಕ್ಕಳಿಗೆ ನೀಡುವ ಅವಕಾಶಗಳಿಂದಲೇ ಮಕ್ಕಳ ಪ್ರತಿಭೆ ಅನಾವರಣಗೊಳ್ಳುವುದು ಎಂಬುವುದಕ್ಕೆ ಪುಣ್ಚಪ್ಪಾಡಿ ಶಾಲೆಯಲ್ಲಿ ನಡೆಯುವ ರಂಗ ತರಬೇತಿ ಶಿಬಿರಗಳು ಸಾಕ್ಷಿ ನೀಡಿವೆ ಎಂದು ಹೇಳಿದರು.
ಸವಣೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜಯಂತ್ ವೈ ಮಾತನಾಡಿ, ಶಿಬಿರದಲ್ಲಿ ಆದ ಕಲಿಕೆ ಬದುಕಿನುದ್ದಕ್ಕೂ ಪ್ರೇರಣೆಯಾಗಲಿ, ಶಾಲೆಯು ಈ ನಿಟ್ಟಿನಲ್ಲಿ ಶಿಬಿರದ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಯತ್ನಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಶ್ರೀ ಕುಚ್ಚೆಜಾಲು, ಬಾಬು ಜರಿನಾರು, ಎಸ್ ಡಿಎಂಸಿ ಅಧ್ಯಕ್ಷ ವಿಜಯ ಗೌಡ ಶಿಬಿರಕ್ಕೆ ಶುಭ ಹಾರೈಸಿದರು. ಮೊದಲ ದಿನದ ಸಂಪನ್ಮೂಲ ವ್ಯಕ್ತಿಗಳಾಗಿ ಕೃಷ್ಣಪ್ಪ ಬಂಬಿಲ ಮಕ್ಕಳಿಗೆ ರಂಗ ನಾಟಕ, ರಂಗ ಗೀತೆಗಳು, ರಂಗ ಚಟುವಟಿಕೆಗಳ ತರಬೇತಿಯನ್ನು ನೀಡಿದರು.
ಈ ಸಂದರ್ಭದಲ್ಲಿ 7ನೇ ತರಗತಿ ವಿದ್ಯಾರ್ಥಿಗಳು ನೀಡಿದ ಕೊಡುಗೆ ಸಿಸಿಟಿವಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಸುಂದರಿ ಬಿ ಎಸ್ ಯವರು ಉದ್ಘಾಟಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ರಶ್ಮಿತಾ ಜೈನ್ ಸ್ವಾಗತಿಸಿ, ಪದವೀಧರ ಶಿಕ್ಷಕಿ ಶೋಭಾ ಕೆ ವಂದಿಸಿದರು. ಶಿಕ್ಷಕಿ ಚಂದ್ರಿಕಾ ಎಸ್ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ಹಾಗೂ ಪುಣ್ಚಪ್ಪಾಡಿ ಗ್ರಾಮದ ಪುಟಾಣಿಗಳು, ಪೋಷಕರು ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಅಂಗಳದಲ್ಲಿ ಮಕ್ಕಳು ಹಾಗೂ ಪೋಷಕರು ನಿರ್ಮಿಸಿದ್ದ ಕೊಳ, ಕಾರಂಜಿ, ಕೊಳದಲ್ಲಿ ವಿಧವಿಧ ಮೀನುಗಳು ಶಿಬಿರದ ಆಕರ್ಷಣೀಯವಾಗಿತ್ತು.
ಗಣಿತದ ಮೂಲ ಪರಿಕಲ್ಪನೆಯಾದ ಅನೌಪಚಾರಿಕ ಅಳತೆ ಮಾನ ಪಾವು ಸೇರಿನೊಂದಿಗೆ ಅಕ್ಕಿಯನ್ನು ಅಳತೆ ಮಾಡಿ ಗೆರೆಸೆಗೆ ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿರುವುದು ವಿಶೇಷವಾಗಿತ್ತು. ವಿಜ್ಞಾನದ ಪರಿಕಲ್ಪನೆಯಲ್ಲಿ ಶಿಬಿರ ಆಯೋಜಿಸಿ, ವಿಜ್ಞಾನ, ಗಣಿತ, ಪರಿಸರ ಪ್ರೀತಿಯ ಚಟುವಟಿಕೆಗಳು, ಪರಿಸರ ಹಾಡುಗಳು, ಗಿಡ ಕಸಿ ಕಟ್ಟುವುದು ಶಿಬಿರದ ವಿಶೇಷತೆಯಾಗಿದೆ.