ವಿಟ್ಲ: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮ ಪಂಚಾಯತ್ ನ ಮೂವರು ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಮುಂದಿನ ಆರು ವರ್ಷದ ವರೆಗೆ ಉಚ್ಚಾಟನೆ ನಡೆಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್ ರವರು ಆದೇಶಿಸಿದ್ದಾರೆ.
ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಮಹಮ್ಮದ್ ಮಂಚಿ, ರಾಜೇಶ್ ಬಾರಬೆಟ್ಟು, ಎ.ಬಿ.ಅಬ್ದುಲ್ಲಾ ರವರನ್ನು ಪಕ್ಷ ವಿರೋಧಿ ಚಟುವಟಿಕೆಯ ಆರೋಪದಲ್ಲಿ ಇದೀಗ ಉಚ್ಚಾಟಿಸಲ್ಪಟ್ಟವರಾಗಿದ್ದಾರೆ.
ಈ ಮೂವರು ನಿರಂತರವಾಗಿ ಪಕ್ಷದ ಹೆಸರನ್ನು ಹೇಳಿಕೊಂಡು ಗ್ರಾಮ ಪಂಚಾಯತ್ ಮತ್ತು ಸಹಕಾರಿ ಸಂಘಗಳ ಚುನಾವಣೆಗಳಲ್ಲಿ ಪಕ್ಷ ವಿರೋಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಗೆ ಕಾರಣವಾದ ಹಾಗೂ ಕೆಲವೊಂದು ಕಡೆ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳು ಅಲ್ಪ ಮತದಲ್ಲಿ ಗೆಲ್ಲುವ ಮಟ್ಟಕ್ಕೆ ಸಂದರ್ಭವನ್ನು ಸೃಷ್ಟಿ ಮಾಡಿರುವ ಹಿನ್ನೆಲೆಯಲ್ಲಿ ಅವರನ್ನು ಉಚ್ಚಾಟಿಸಲಾಗಿದೆ.