ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿಗಳು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಅನುಷ್ಟಾನಗೊಳಿಸುತ್ತಿರುವ ಇನ್ಸ್ಪೈರ್ ಅವಾರ್ಡ್ ಮಾನಕ್ನ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಲಾ ವಿದ್ಯಾರ್ಥಿಗಳ ಕಲ್ಪನೆ ಮತ್ತು ನಾವೀನ್ಯತೆಗಳನ್ನು ಪೋಷಿಸಲು ಹಾಗೂ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ವೃತ್ತಿ ಜೀವನವನ್ನು ಮುಂದುವರಿಸಲು ಪ್ರೇರಕವಾದಂತಹ ಈ ಸ್ಪರ್ಧೆಯಲ್ಲಿ ಪುತ್ತೂರು ಉರ್ಲಾಂಡಿ ನಿವಾಸಿಗಳಾದ ಮಹೇಶ್ ಜಿ ಶೆಟ್ಟಿ ಹಾಗೂ ಸುಕನ್ಯಾ ಶೆಟ್ಟಿಯವರ ಪುತ್ರ ಅಂಬಿಕಾ ಸಂಸ್ಥೆಯ ಆರನೇ ತರಗತಿಯ ವಿದ್ಯಾರ್ಥಿ ದೀಪಾಂಶ ಶೆಟ್ಟಿಯವರು ’ಬಾದಮ್ ಎಲೆಯಿಂದ ಪ್ರಾಣಿಗಳ ಸಾಬೂನು’ ಪ್ರಾಜೆಕ್ಟ್ ಪ್ರಸ್ತುತಪಡಿಸಿದರೆ, ಪುತ್ತೂರು ಹಾರಾಡಿ ನಿವಾಸಿಗಳಾದ ಮಧುಸೂದನ ಸಾಲೆ ಮತ್ತು ವಿನುತ ಎಂ ಸಾಲೆ ಅವರ ಪುತ್ರ ಎಂಟನೇ ತರಗತಿಯ ವಿದ್ಯಾರ್ಥಿ ಅನಿತೇಜ್ ಎಂ ಸಾಲೆ ಇವರು ’ಗೋಡಂಬಿ ಶೆಲ್ ಗ್ಯಾಸ್ಫೈರ್ ಸ್ಟೌವ್’ ತಯಾರಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲಾ ಶಿಕ್ಷಕಿ ರಮ್ಯ ಲಕ್ಷೀ ಮತ್ತು ರಾಜೇಶ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನ ನೀಡಿರುತ್ತಾರೆ.
ಶಾಲಾ ಹಂತದಲ್ಲಿ ವಿದ್ಯಾರ್ಥಿಗಳ ಸಂಶೋಧನೆಯನ್ನು ಗಮನಿಸಿ ಅತ್ಯುತ್ತಮ ಸಂಶೋಧನೆಗಳನ್ನು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ವೆಬ್ ಸೈಟ್ಗೆ ದಾಖಲಿಸಲಾಗುತ್ತದೆ.
ಈ ಸಂದರ್ಭದಲ್ಲಿ ಸಂಶೋಧನೆಯ ವಿವರಗಳೊಂದಿಗೆ ವಿದ್ಯಾರ್ಥಿಗಳು ಸಂಶೋಧನೆಯನ್ನು ತೊಡಗಿರುವ ವೀಡಿಯೋಗಳನ್ನೂ ವೆಬ್ ಸೈಟ್ನಲ್ಲಿ ಹಾಕಬೇಕಾಗುತ್ತದೆ. ಹೀಗೆ ವಿದ್ಯಾರ್ಥಿಗಳ ಹಾಗೂ ಅವರ ಸಂಶೋಧನೆಗಳ ಸಂಪೂರ್ಣ ವಿವರಗಳನ್ನು ಗಮನಿಸಿದ ನಂತರ ಅವರನ್ನು ಆಯ್ಕೆ ಮಾಡಲಾಗುತ್ತದೆ. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದವರಿಗೆ ತಮ್ಮ ಸಂಶೊಧನಾ ಪ್ರಾಜೆಕ್ಟ್ ಮುಂದುವರೆಸುವುದಕ್ಕಾಗಿ ಹತ್ತು ಸಾವಿರ ರೂಪಾಯಿಗಳ ಪ್ರೋತ್ಸಾಹಧನ ದೊರಕುತ್ತದೆ.