ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ನಗರ,ವಿಟ್ಲ ಹಾಗೂ ಕ್ಷೇತ್ರ ವ್ಯಾಪ್ತಿಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಾದರೂ ಗ್ರಾಪಂ ಪಿಡಿಒ ತಕ್ಷಣ ಸ್ಪಂದಿಸಬೇಕು ಎಂದು ಶಾಸಕ ಅಶೋಕ್ ರೈ ಸೂಚನೆ ನೀಡಿದರು.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದರು.
ಮುರ ಪರಿಸರದಲ್ಲಿ ನೀರಿನ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ ಎಂದು ಗೊತ್ತಿದೆ ಇದಕ್ಕೆ ಪೂರ್ವ ಸಿದ್ದತೆ ಏನು ಮಾಡಿದ್ದೀರಿ? ಎಂದು ಅಧಿಕಾರಿಗಳನ್ನು ಶಾಸಕರು ಪ್ರಶ್ನಿಸಿದರು. ಕಳೆದ ಎರಡು ದಿನಗಳಿಂದ ಮಳೆ ಬಂದ ಕಾರಣ ಸ್ವಲ್ಪ ಸಮಸ್ಯೆ ಕಡಿಮೆಯಾಗಿದೆ. ನೀರಿನ ಸಮಸ್ಯೆ ಎಲ್ಲೆಲ್ಲಿ ಇದೆಯೋ ಅದನ್ನು ಗುರುತಿಸಿ ಅಲ್ಲಿ ಯಾವ ಕಾರಣಕ್ಕೆ ಸಮಸ್ಯೆಯಾಗಿದೆ ಎಂಬುದನ್ನು ಪರಿಶೀಲನೆ ಮಾಡಬೇಕು. ಕೊಳವೆ ಬಾವಿ ಬತ್ತಿದ್ದೋ ಅಥವಾ ಪಂಪ್ ಹಾಳಾಗಿದ್ದೋ ಅಥವಾ ಟ್ಯಾಂಕ್ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡಬೇಕು. ಜನರಿಗೆ ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು.
24 ಗಂಟೆಯೊಳಗೆ ಸಮಸ್ಯೆ ಪರಿಹರಿಸಿ:
ಕುಡಿಯುವ ನೀರು ವಿತರಣೆಯಲ್ಲಿ ಏನೇ ಸಮಸ್ಯೆ ಇದ್ದರೂ ಅದನ್ನು 24 ಗಂಟೆಯೊಳಗೆ ಪರಿಹರಿಸಬೇಕು. ಯಾವುದೇ ಕಾರಣಕ್ಕೂ ಜನರಿಗೆ ಕುಡಿಯಲು ನೀರಿಲ್ಲ ಎಂಬ ದೂರುಗಳು ಬರದಂತೆ ಕ್ರಮಕೈಗೊಳ್ಳಿ ಎಂದು ಶಾಸಕರು ಅಧಿಕಾರಿಗೆ ಸೂಚನೆ ನೀಡಿದರು.
ನನ್ನ ಕಚೇರಿ ಮೂಲಕವೂ ವ್ಯವಸ್ಥೆ ಮಾಡಿದ್ದೇವೆ:
ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ಬ್ಲಾಕ್, ವಿಟ್ಲ ಹಾಗೂ ಉಪ್ಪಿನಂಗಡಿ ಬ್ಲಾಕ್ ನಲ್ಲಿ ಎಲ್ಲಿಯಾದರೂ ನೀರಿನ ಸಮಸ್ಯೆ ಇದ್ದಲ್ಲಿ ಗ್ರಾಪಂ ಪಿಡಿಒ ತಕ್ಷಣ ಸ್ಪಂದಿಸಬೇಕು. ಅವರಿಗೆ ಸಾಧ್ಯವಾಗದೇ ಇದ್ದಲ್ಲಿ ನನ್ನ ಕಚೇರಿ ಮೂಲಕ ಟ್ಯಾಂಕರ್ ನಲ್ಲಿ ನೀರು ಪೂರೈಕೆ ವ್ಯವಸ್ಥೆ ಮಾಡಿದ್ದೇನೆ. ಸಾರ್ವಜನಿಕರು ಶಾಸಕರ ಕಚೇರಿ ಸಿಬ್ಬಂದಿಯನ್ನು ಸಂಪರ್ಕಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದುಶಾಸಕ ಅಶೋಕ್ ರೈ ತಿಳಿಸಿದರು.
ಬಿಳಿಯೂರು ಡ್ಯಾಂ ಲೀಕೇಜ್ ಸರಿಯಾಗಿದಾ?
ಉಪ್ಪಿನಂಗಡಿ ಬಿಳಿಯೂರು ಕಿಂಡಿ ಅಣೆಕಟ್ಟಿನಲ್ಲಿ ಲೀಕೇಜ್ ಇರುವ ಬಗ್ಗೆ ದೂರು ಇತ್ತು ಅದೇನಾಗಿದೆ? ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಯನ್ನು ಶಾಸಕರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಲೀಕೇಜ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಅಣೆಕಟ್ಟಿನಲ್ಲಿ ನೀರು ಸಂಗ್ರಹಣೆ ಇದೆ ಎಂದು ಸಭೆಯಲ್ಲಿ ತಿಳಿಸಿದರು.
ವಿದ್ಯುತ್ ಲೈನ್ ದುರಸ್ಥಿ ಮಾಡಿ: ಸಚಿವರ ಸೂಚನೆ
ಮಳೆಗಾಲಕ್ಕೆ ಮುನ್ನವೇ ಬಿದ್ಯುತ್ ಲೈನನ್ನು ಪರಿಶೀಲನೆ ಮಾಡಬೇಕು.ಎಲ್ಲೆಲ್ಲಿ ಅಪಾಯವಿದೆಯೋ ಅದನ್ನು ಸರಿ ಮಾಡಬೇಕು. ಮರದ ಗೆಲ್ಲು ತಾಗುವುದಿದ್ದರೆ ಗೆಲ್ಲನ್ನು ಕಡಿಯಬೇಕು. ಕಳೆದ ವರ್ಷ ವಿದ್ಯುತ್ ತಂತಿ ಬಿದ್ದು ಮೂರು ಜನ ಸಾವನ್ನಪ್ಪಿದ್ದಾರೆ. ಈ ಮಳೆಗಾಲದಲ್ಲಿ ಯಾವುದೇ ಮರಣ ಸಂಭವಿಸಬಾರದು ಎಂದು ಸಚಿವ ದಿನೇಶ್ ಗುಂಡೂರಾವ್ ಮೆಸ್ಕಾಂ ಅಧಿಕಾರಿಗೆ ಸೂಚನೆ ನೀಡಿದರು.
ವೇದಿಕೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ ಸಿಇಒ ಆನಂದ್, ಡಿಎಫ್ಓ ಆಂಟನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.