ಪುತ್ತೂರು: ತುಳು ಭಾಷೆಗೆ ಈ ಶತಮಾನ ಸುವರ್ಣ ಕಾಲವೆಂದೇ ಹೇಳಬೇಕು. ಎಷ್ಟೋ ದಶಕಗಳಲ್ಲಿ ಆಗದ ತುಳುವಿನ ಎಷ್ಟೋ ಕೆಲಸಗಳು ಕಳೆದ ಹತ್ತು ವರ್ಷಗಳಲ್ಲಿ ವೇಗವಾಗಿಯೇ ನಡೆಯುತ್ತಿದೆ. ತುಳು ಭಾಷೆಯನ್ನು ಶೈಕ್ಷಣಿಕ ವಲಯಕ್ಕೆ ತರುವ ಜೊತೆಗೆ, ತುಳು ಲಿಪಿಯ ಮುನ್ನೆಲೆ, ಲಿಪಿಗೆ ಯುನಿಕೋಡ್, ಗೂಗಲ್ ನಲ್ಲಿ ತುಳು ಭಾಷಾಂತರ, ತುಳುವನ್ನು ಆಡಳಿತ ಭಾಷೆಯನ್ನಾಗಿಸುವ ಪ್ರಯತ್ನಗಳು ಹೀಗೆ ಹತ್ತು ಹಲವಾರು ಕೆಲಸಗಳು ತುಳುವಿನ ಉಳಿವಿಗಾಗಿ ನಡೆಯುತ್ತಿವೆ. ಇದೇ ನಿಟ್ಟಿನಲ್ಲಿ ತುಳು ಭಾಷೆಯ ಉಳಿವು-ಅಳಿವು, ಮುಂದಿನ ಪೀಳಿಗೆಗೆ ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯ ಪಸರಬೇಕೆಂಬ ಉದ್ದೇಶದಿಂದ ಸೃಷ್ಟಿಸಿದ ಸಂಸ್ಥೆ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್(ರಿ.). ಈಗ ಈ ಸಂಸ್ಥೆಯು ಹೊಸ ಹೆಜ್ಜೆಯೊಂದಿಗೆ ತುಳುವಿನಲ್ಲಿ ಮತ್ತೊಂದು ಮೈಲಿಗಲ್ಲು ನಡೆಸಲು ಸಜ್ಜಾಗಿದೆ. ತುಳುಭಾಷೆಯಲ್ಲೇ ಮೊದಲು ಎಂಬಂತೆ “ತುಳುನಾಡ್ ಕಾನ್ಕ್ಲೇವ್ -2025″ಎಂಬ ಸಮಾವೇಶ ಕಟಪಾಡಿ ವಿಶ್ವನಾಥ ಕ್ಷೇತ್ರದ ಸಪ್ತಪದಿ ಸಭಾಗೃಹದಲ್ಲಿ ಎ. 13ರಂದು ನಡೆಯುವುದು.
ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿರುವ ಈ ಸಮಾವೇಶದಲ್ಲಿ ತುಳುನಾಡಿನ ಕಾಸರಗೋಡಿನಿಂದ ಉಡುಪಿಯವರೆಗೆ ಅನೇಕ ವಿದ್ವಾಂಸರು ತುಳು ಭಾಷೆ, ಸಂಸ್ಕೃತಿ, ಜನಪದ, ಹೋರಾಟ, ಸಾಹಿತ್ಯ ಮತ್ತು ಲಿಪಿಯ ಬಗೆಗೆ ತಮ್ಮ ವಿಚಾರವನ್ನು ಮಂಡಿಸಲಿರುವರು. ತುಳುವಿನ ಸಾಹಿತ್ಯಕ್ಕೆ ಸತತ ಕೊಡುಗೆ ನೀಡುತ್ತಾ ಕಳೆದ ವರ್ಷ 6 ತುಳು ಪುಸ್ತಕಗಳನ್ನು ತುಳು ಲಿಪಿಯಲ್ಲಿ ಬಿಡುಗಡೆ ಮಾಡಿರುವ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ ಸಂಸ್ಥೆ, ಈ ಬಾರಿ ಸಮಾವೇಶದಲ್ಲಿ ಮತ್ತೆ ಹಲವಾರು ತುಳು ಲಿಪಿಯ ಪುಸ್ತಕಗಳನ್ನು ಬಿಡುಗಡೆ ಮಾಡಲಿದೆ. ಇದೇ ಸಮಾವೇಶದಲ್ಲಿ ತುಳುವಿನ ಪ್ರಸಿದ್ಧ ಲೇಖಕಿಯಾದ ಕುಶಾಲಾಕ್ಷಿ ವಿ.ಕುಲಾಲ್ ಕಣ್ವತೀರ್ಥ ಇವರ ಹತ್ತನೇ ಕೃತಿ “ಪತ್ತ್” ಎಂಬ ತುಳು ಕವನ ಸಂಕಲನವು ತುಳುನಾಡಿನ ಹೆಸರಾಂತ ಬರಹಗಾರರಾದ ಶ್ರೀ ಮುದ್ದು ಮೂಡಬೆಳ್ಳೆಯವರ ಹಸ್ತದಿಂದ ಬಿಡುಗಡೆಗೊಳ್ಳಲಿದೆ. ಹರ್ಷಾ ಬೇಲಾಡಿ ಇವರ ತುಳು ಕವನ ಸಂಕಲನ “ಒಂಜಿ ಕನ” ಹಾಗೆಯೇ 1000 ಪ್ರತಿಗಳು ಮಾರಾಟವಾಗಿ ತುಳು ಲಿಪಿ ಪುಸ್ತಕಗಳ ಇತಿಹಾಸದಲ್ಲೇ ದಾಖಲೆ ಬರೆದ “ಜೀಟಿಗೆ” ಪುಸ್ತಕದ ವಿಸ್ತೃತ ಎರಡನೇ ಮುದ್ರಣದ ಪ್ರತಿಯೂ ಬಿಡುಗಡೆಗೊಳ್ಳಲಿದೆ.
ಶ್ರೀ ಪ್ರಹ್ಲಾದ್ ಪಿ. ತಂತ್ರಿಯವರು ಅಭಿವೃದ್ದಿ ಪಡಿಸಿರುವ ಯುನಿಕೋಡ್ ಸಹ್ಯ ತುಳುವಿನ ಆಸ್ಕಿ ಫಾಂಟ್ “ಮಲ್ಲಿಗೆ” ಬಿಡುಗಡೆಗೊಳ್ಳಲಿದೆ. ಈ ಫಾಂಟ್ ಮೂಲಕ ತುಳುವಿನ ಸಾಂಪ್ರದಾಯಿಕ ಬರಹಗಳನ್ನು ಡಿಜಿಟಲೀಕರಣಗೊಳಿಸಲು ಬಹಳ ನೆರವಾಗಲಿದೆ. ತುಳು ಪುಸ್ತಕಮೇಳ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳ ಆಯೋಜನೆ ನಡೆಯಲಿದೆ. ಕೆಮ್ಮಣ್ಣು ಸಿಸ್ಟರ್ಸ್ ಎಂಬ ಪ್ರಸಿದ್ಧ ಗಾಯಕರಿಂದ ತುಳು ಶಾಸ್ತ್ರೀಯ ಸಂಗೀತದ ಕಛೇರಿ ಕಾರ್ಯಕ್ರಮಕ್ಕೆ ಮೆರಗು ನೀಡಲಿದೆ.
ತುಳುನಾಡಿನ ಪುರಾತನ ಭಾಷೆಯಾದ ಕೊರಗ ಭಾಷೆಯ ಅಳಿವು, ಉಳಿವು ಹಾಗೆಯೇ ಕೊರಗ ಜನಾಂಗದ ಸಾಂಸ್ಕೃತಿಕ ಬದುಕಿನ ಬಗ್ಗೆ ಬೆಳಕು ಚೆಲ್ಲಲು ವಿಶೇಷ ಆಹ್ವಾನಿತರಾಗಿ ಬಾಂಬು ಪಾಂಗಾಳ ಇವರು ನಮ್ಮೊಂದಿಗಿದ್ದು, ತುಳು ಜನಪದರು ಕಟ್ಟಿದ ತುಳುನಾಡಿನ ಇತಿಹಾಸದ ಬಗ್ಗೆ ಮಾಹಿತಿ ನೀಡಲು ಸಂಶೋಧಕರಾದ ಡಾ.ತುಕಾರಾಂ ಪೂಜಾರಿಯವರು ತಮ್ಮ ಅಮೂಲ್ಯ ಸಮಯವನ್ನು ನಮ್ಮೊಂದಿಗೆ ಸಹಕರಿಸಲಿದ್ದಾರೆ.
ಈ ಸಮಾವೇಶದಲ್ಲಿ ರಾಜಕೀಯ, ಸಾಮಾಜಿಕ, ಭಾಷಾ ಹೋರಾಟಗಾರರನ್ನು ಒಂದೇ ವೇದಿಕೆಯಲ್ಲಿ ಕೂರಿಸಿ ವಿಚಾರ ವಿನಮಯ ಘೋಷ್ಠಿ ನಡೆಸಿ ರಾಜಕೀಯ ಮತ್ತು ಸಂಘಟನಾ ನೆಲೆಯಲ್ಲಿ ತುಳುವಿನ ಅಸ್ಮಿತೆಯನ್ನು ಕಾಯ್ದುಕೊಳ್ಳಲು ಕಾರ್ಯರೂಪಗೊಳಿಸುವ ಕಾರ್ಯಕ್ರಮ ನಡೆಯುವುದು ಎಂದು ಆಯೋಜಕರು ತಿಳಿಸಿದರು. ತುಳು ಭಾಷೆ ಮತ್ತು ಸಂಸ್ಕೃತಿಗೆ ಅಗಣಿತ ಸೇವೆ ಮಾಡಿರುವ ಸಾಧಕರಿಗೆ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ ನೀಡುವ ತುಳುನಾಡ್ ಕಾನ್ಕ್ಲೇವ್ ವಾರ್ಷಿಕ ಪುರಸ್ಕಾರವನ್ನು ಈ ಬಾರಿ ತುಳು ಲಿಪಿ ಶಾಸನ ತಜ್ಞರಾದ ಸುಭಾಸ್ ನಾಯಕ್ ಇವರಿಗೆ ನೀಡಲಾಗುವುದು ಹಾಗೂ ವಿದ್ಯಾರ್ಥಿ ತುಳು ಸಂಘಟನೆಗಳನ್ನು ಗುರುತಿಸುವ ನೆಲೆಯಲ್ಲಿ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ತುಳು ಸಂಘಟನೆಯಾದ “ತುಡರ್” ಹಾಗೂ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ “ತುಳು ಸಂಘ”ವನ್ನು ವಿಶೇಷವಾಗಿ ಗೌರವಿಸಲಾಗುವುದು. ಒಟ್ಟಿನಲ್ಲಿ ಒಂದು ದಿನ ಸಂಪೂರ್ಣವಾಗಿ ತುಳುವಿನ ಕುರಿತಾದ ಚಿಂತನ, ಮಂಥನ ಮತ್ತು ಘೋಷ್ಠಿಗಳು ನಡೆಯುವುದು ಎಂದು ಆಯೋಜಕರು ತಿಳಿಸಿದ್ದಾರೆ.
ತುಳುವಿನ ಯುವಕರೇ ಸೇರಿ ನಡೆಸುವ ಈ ಕಾರ್ಯಕ್ರಮದಕ್ಕೆ ತುಳುವಿನ ಬಗ್ಗೆ ಆಸಕ್ತಿಯಿರುವ, ತುಳುವಿನ ಅಭಿಮಾನಿಗಳಿಗೆ ಮುಕ್ತ ಪ್ರವೇಶ, ಹಾಗೂ ಮಧ್ಯಾಹ್ನದ ಅನ್ನದಾನ ವ್ಯವಸ್ಥೆಯೂ ಇರುವುದು. ಕಾರ್ಯಕ್ರಮವನ್ನು ಬೆಂಬಲಿಸುವಂತೆ ಆಯೋಜಕರು ತುಳುನಾಡಿನ ಸರ್ವ ಜನತೆಯನ್ನು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸುಕೇಶ್ ಪುತ್ತೂರು ದೂ: 9632588459, ನಿಶ್ಚಿತ್ ರಾಮಕುಂಜ ದೂ:8722229750 ರವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.