ಕಾವು ಪ್ರಾ.ಕೃ.ಪ.ಸ ಸಂಘಕ್ಕೆ ಸಂಸದ ಕ್ಯಾ| ಬ್ರಿಜೇಶ್ ಚೌಟ ಭೇಟಿ-ಸಂಘದ ಸಾಧನೆಗೆ ಮೆಚ್ಚುಗೆ

0

ಕಾವು: 111 ವರ್ಷಗಳ ಇತಿಹಾಸವಿರುವ ಮತ್ತು 2024-25ರ ಆರ್ಥಿಕ ವರ್ಷಾಂತ್ಯಕ್ಕೆ ಶೇ.100 ಸಾಲ ವಸೂಲಾತಿಯೊಂದಿಗೆ ತಾಲೂಕಿನಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮಂಗಳೂರು ಸಂಸದ ಕ್ಯಾ| ಬ್ರಿಜೇಶ್ ಚೌಟರವರು ಭೇಟಿ ನೀಡಿದ್ದಾರೆ.


ಅವರು ಎ.8ರಂದು ರಾಜ್ಯಹೆದ್ದಾರಿಯ ರಸ್ತೆ ನವೀಕರಣದ ಗುದ್ದಲಿಪೂಜೆಗೆ ಕಾವು ಅಮ್ಚಿನಡ್ಕಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿದರು.


ಸಂಘದ ಸಾಧನೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದರು, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಗ್ಗೆ ನಾನು ಬಾಲ್ಯದಲ್ಲಿಯೇ ತಿಳಿದವನಾಗಿದ್ದೇನೆ, ನನ್ನ ದೊಡ್ಡಪ್ಪ ಪುತ್ತೂರು ಬಿಜೆಪಿಯ ಪ್ರಥಮ ಅಧ್ಯಕ್ಷ, ಕಾವು ಸಹಕಾರ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಸಾಂತ್ಯ ಜಯರಾಮ ರೈಯವರ ಮನೆಗೆ ಬಾಲ್ಯದ ರಜಾದಿನದಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ದೊಡ್ಡಪ್ಪರವರ ಮೂಲಕ ಕಾವು ಸಹಕಾರ ಸಂಘದ ಬಗ್ಗೆ ತಿಳಿದವನಾಗಿದ್ದೇನೆ, ಇವತ್ತು ನನ್ನ ದೊಡ್ಡಪ್ಪ ಅಧ್ಯಕ್ಷರಾಗಿದ್ದ ಸಹಕಾರ ಸಂಘಕ್ಕೆ ಸಂಸದನಾಗಿ ಭೇಟಿ ನೀಡಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಪ್ರಸ್ತುತ ಅಧ್ಯಕ್ಷರಾಗಿರುವ ನನ್ಯ ಅಚ್ಚುತ ಮೂಡೆತ್ತಾಯರವರ ಬಗ್ಗೆಯೂ ದೊಡ್ಡಪ್ಪರವರಲ್ಲಿ ತಿಳಿದಿದ್ದೇನೆ, ನನ್ಯ ಅಚ್ಚುತ ಮೂಡೆತ್ತಾಯರವರು ಸಂಘದ ಅಧ್ಯಕ್ಷರಾಗಿ ಕಾವು ಸಹಕಾರ ಸಂಘವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದರ ಜತೆಗೆ ಸಂಘವು ಸಾಕಷ್ಟು ಸಾಧನೆಯನ್ನು ಮಾಡಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾವು ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮುಡೆತ್ತಾಯರವರು ಮಾತನಾಡಿ, ನಮ್ಮ ಸಂಘಕ್ಕೆ ಸಂಸದ ಬ್ರಿಜೇಶ್ ಚೌಟರವರು ಭೇಟಿ ನೀಡಿ ಸಂಘದ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ತುಂಬಾ ಸಂತೋಷವಾಗಿದೆ, ಸಂಸದರ ದೊಡ್ಡಪ್ಪರಾಗಿರುವ ಸಾಂತ್ಯ ಜಯರಾಮ ರೈಯವರು ಕೂಡ ಕಾವು ಸಹಕಾರ ಸಂಘದ ಅಧ್ಯಕ್ಷರಾಗಿ ಸಂಘದ ಪ್ರಗತಿ, ಅಭಿವೃದ್ಧಿಗೆ ಶ್ರಮವಹಿಸಿದ್ದಾರೆ ಎಂದು ಹೇಳಿದರು.


ಸಂಸದರಿಗೆ ಸನ್ಮಾನ:
ಸಂಸದರಾದ ಬಳಿಕ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿದ ಕ್ಯಾ| ಬ್ರಿಜೇಶ್ ಚೌಟರವರಿಗೆ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಸಂಸದರಿಗೆ ಶಾಲು ಹೊದಿಸಿ, ಪೇಟ ತೊಡಿಸಿ, ಏಲಕ್ಕಿ ಹಾರ ಹಾಕಿ, ಫಲಪುಷ್ಪ ಕಾಣಿಕೆ, ಸ್ಮರಣಿಕೆ ನೀಡಿ ಸನ್ಮಾನಿಸಿದರು.


ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಶಿವರಾಮ ಪಿ. ಈಶ್ವರಮಂಗಲ ಸ್ವಾಗತಿಸಿ, ನಹುಷ ಭಟ್ ಪಳನೀರು ವಂದಿಸಿದರು.


ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಅರಿಯಡ್ಕ ಗ್ರಾ.ಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ಲೋಕೇಶ್ ಚಾಕೋಟೆ, ರಾಮಣ್ಣ ನಾಯ್ಕ, ಪ್ರಫುಲ್ಲಾ ರೈ, ನವೀನ ಎನ್, ಮೋಹನಾಂಗಿ, ಲೋಹೀತ್ ಅಮ್ಚಿನಡ್ಕ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿ, ಸಿಬ್ಬಂದಿಗಳು ಹಾಗೂ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here