ಅಪಾಯಕಾರಿ ಕಟ್ಟಡದಲ್ಲಿ ಅನಧಿಕೃತವಾಗಿ ಹೋಟೆಲ್ ವ್ಯವಹರಿಸುತ್ತಿರುವ ಆರೋಪ- ನ್ಯಾಯಾಲಯದ ಆದೇಶದಂತೆ ಬೀಗ ಜಡಿದ ನಗರಸಭಾ ಅಧಿಕಾರಿಗಳು

0

ಪುತ್ತೂರು: ಅಪಾಯಕಾರಿ ಕಟ್ಟಡವೊಂದರಲ್ಲಿ ಹೋಟೆಲ್ ಒಂದು ಅನಧಿಕೃತವಾಗಿ ಕಾರ್ಯಾಚರಿಸುತ್ತಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಬಂಟ್ವಾಳ ನ್ಯಾಯಾಲಯದ ಆದೇಶದಂತೆ ಹೋಟೆಲನ್ನು ಮುಚ್ಚಿಸಿದ ಘಟನೆ ಎ.11ರಂದು ಬೆಳಿಗ್ಗೆ ಪುತ್ತೂರಿನಲ್ಲಿ ನಡೆದಿದೆ.


ಮುಖ್ಯರಸ್ತೆಯ ಮಹಿಳಾ ಪೊಲೀಸ್ ಠಾಣೆಯ ಮುಂಭಾಗದ ಹಳೆಯ ಕಟ್ಟಡದಲ್ಲಿ ವ್ಯವಹರಿಸುತ್ತಿದ್ದ ನಿರಾಲ ವೆಜ್ ರೆಸ್ಟೋರೆಂಟನ್ನು ಕಾರ್ಯಾಚರಣೆ ನಡೆಸಿ ಬಂದ್ ಮಾಡಿಸಿದ್ದಾರೆ. ಈ ಹೋಟೆಲ್ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದ ಹಿನ್ನಲೆಯಲ್ಲಿ ಬಂಟ್ವಾಳ ನ್ಯಾಯಾಲಯದ ರಿಸೀವರ್ ಈ ಪ್ರಕ್ರಿಯೆ ನಡೆಸಿದ್ದು ನ್ಯಾಯಾಲಯದ ಆದೇಶದಂತೆ ನಗರ ಸಭೆ ಕಾರ್ಯಾಚರಣೆ ನಡೆಸಿದೆ.


ಹೋಟೆಲ್ ಬಂದ್ ಮಾಡಿ, ಅದರ ಕೀಲಿ ಕೈಯನ್ನು ರಿಸೀವರ್ ಕೈಗೆ ನೀಡುವಂತೆ ಬಂಟ್ವಾಳ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದ ಹಿನ್ನಲೆಯಲ್ಲಿ ಪುತ್ತೂರು ನಗರ ಸಭೆಯ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿ ಹೋಟೆಲ್ ಬಂದ್ ಮಾಡಿ ಬೀಗ ಜಡಿದಿದ್ದಾರೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಹೋಟೆಲ್ ಬಿಟ್ಟು ತೆರಳುವುದಿಲ್ಲ ಎಂದು ಹೋಟೆಲ್ ಮಾಲಕಿ ಪಟ್ಟು ಹಿಡಿದ ಘಟನೆಯೂ ನಡೆದಿದೆ. ಇದೇ ವೇಳೆ ಹೊಟೇಲ್ ಮ್ಹಾಲಕಿ, ಪೊಲೀಸರು, ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿಯು ನಡೆದಿದ್ದು ಹೊಟೇಲ್‌ಗೆ ಬೀಗ ಮಾತ್ರ ಹಾಕಬೇಕು. ಸೀಲ್ ಹಾಕಬಾರದು ಎಂದು ಮ್ಹಾಲಕಿಯವರು ಪಟ್ಟುಹಿಡಿದರು. ಇದಕ್ಕೆ ಒಪ್ಪಿಕೊಂಡ ಬಳಿಕ ಮ್ಹಾಲಕಿ ಹೊಟೇಲ್‌ನಿಂದ ಹೊರಬಂದಿದ್ದರೂ ನಂತರ ಬೀಗ ಹಾಕಿ ಸೀಲ್ ಹಾಕಲಾಗಿದೆ.


ಅಪಾಯಕಾರಿ ಕಟ್ಟಡದಲ್ಲಿ ಬಾಡಿಗೆ ನೆಲೆಯಲ್ಲಿ ವ್ಯವಹರಿಸುತ್ತಿದ್ದ ಹೊಟೇಲನ್ನು ನ್ಯಾಯಾಲಯ ಬಂದ್ ಮಾಡಲಾಗಿದೆ. ಆಕ್ಷೇಪದ ಹಿನ್ನೆಲೆಯಲ್ಲಿ ನಗರ ಸಭೆಯು ಪರವಾನಿಗೆ ನೀಡಿಲ್ಲ ಎಂದು ಹೇಳಲಾಗುತ್ತಿದ್ದರೂ ಅದೇ ಕಟ್ಟಡದಲ್ಲಿ ಇನ್ನಷ್ಟು ಅಂಗಡಿ ಮಳಿಗೆಗಳು ವ್ಯವಹರಿಸುತ್ತಿದೆ. ಆದರೆ ಅವುಗಳ ಮೇಲೆ ಯಾವುದೇ ಕ್ರಮ ವಹಿಸದೇ ಇರುವುದು ಸಾರ್ವಜನಿಕರಲ್ಲಿ ನಾನಾ ಅನುಮಾನಗಳಿಗೆ ಎಡೆಮಾಡಿದೆ.

ಕಳೆದ 40 ವರ್ಷದಿಂದ ಹೊಟೇಲ್ ಉದ್ಯಮ ನಡೆಸುತ್ತಿದ್ದೇವೆ. ವಿದ್ಯುತ್ ಬಿಲ್, ಕಟ್ಟಡ ತೆರಿಗೆ ಪಾವತಿಸುತ್ತಿದ್ದೇನೆ. ಆದರೆ ನೋಟೀಸ್ ಇಲ್ಲದೆ ಕಾನೂನು ಬಾಹಿರವಾಗಿ ನಮ್ಮನ್ನು ಹೊರಹಾಕಿದ್ದಾರೆ. ನಮಗೂ ರಿಸೀವರ್‌ಗೂ ಕೋರ್ಟ್‌ನಲ್ಲಿ ಯಾವುದೇ ವ್ಯಾಜ್ಯವಿಲ್ಲ. ಅವರವರ ಕುಟುಂಬದ ವ್ಯಾಜ್ಯವಿದೆ. ಈಗ ಕಟ್ಟಡ ಸರಿಯಿಲ್ಲ ಎಂದು ಹೇಳಿ ಒಬ್ಬಳನ್ನೇ ಇಲ್ಲಿಂದ ಹೊರಹಾಕಿದ್ದಾರೆ. ರಿಸೀವರ್ ನನ್ನಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಣ ಕೊಡದಕ್ಕೆ ಈ ರೀತಿ ಮಾಡಿದ್ದಾರೆ. ಕಟ್ಟಡ ಸರಿಯಾಗಿಲ್ಲದಿದ್ದರೆ ಎಲ್ಲವನ್ನು ತೆರವುಗೊಳಿಸಬೇಕಿತ್ತು. ಆದರೆ ನನ್ನನ್ನು ಒಬ್ಬಳನ್ನೇ ಟಾರ್ಗೆಟ್ ಮಾಡಿ ತೆರವುಗೊಳಿಸಿದ್ದಾರೆ.
-ನವೀನಾ ಹೊಟೇಲ್ ಮ್ಹಾಲಕರು

ಅನಧಿಕೃತವಾಗಿ ಹೊಟೇಲ್ ಉದ್ಯಮ ನಡೆಸುತ್ತಿದ್ದರು. ಈ ಹಿಂದೆ ನಡೆಸುತ್ತಿದ್ದ ಬಾರ್‌ಗೆ ಅಬಕಾರಿ ಇಲಾಖೆಯವರು ಪರವಾನಿಗೆ ನೀಡದಿರುವ ಹಿನ್ನೆಲೆಯಲ್ಲಿ ಬಾರ್‌ನ್ನು ಸ್ಥಳಾಂತರಿಸಿದರು. ಆದರೂ ಅವರು ಜಾಗ ಖಾಲಿ ಮಾಡಿಲ್ಲ. ಅದರಲ್ಲಿ ಈಗ ಮತ್ತೊಂದು ಹೊಟೇಲ್ ಪ್ರಾರಂಭಿಸಿದರು. ಅದರ ಮೇಲೆ ಆಕ್ಷೇಪಣೆಯಿದ್ದು ನಗರ ಸಭೆಯಿಂದ ಟ್ರೇಡ್ ಲೈಸನ್ಸ್ ನೀಡಿಲ್ಲ. ಅವರ ವಿರುದ್ಧ ಪಾರ್ಟಿಯವರು ಕೋರ್ಟ್‌ಗೆ ಹೋಗಿದ್ದು ತಕ್ಷಣ ತೆರವುಗೊಳಿಸುವಂತೆ ನ್ಯಾಯಾಲಯ ಆದೇಶ ಮಾಡಿದ್ದು ಮಾಹಿತಿ ಬಂದ ತಕ್ಷಣ ತೆರವುಗೊಳಿಸಲಾಗಿದೆ. ಹೊಟೇಲ್ ಹೆಸರು ಉಲ್ಲೇಖಿಸಿಯೇ ಆದೇಶ ನೀಡಿದ್ದು ಅದನ್ನು ಮಾತ್ರ ತೆರವುಗೊಳಿಸಲಾಗಿದೆ.
-ಮಧು ಎಸ್ ಮನೋಹರ್ ಪೌರಾಯುಕ್ತರು

LEAVE A REPLY

Please enter your comment!
Please enter your name here