ನೆಲ್ಯಾಡಿ: ರಾಜ್ಯ ಮೀಸಲು ಪೊಲೀಸ್ ತಂಡದ ಏಳನೇ ಮಂಗಳೂರು ಪಡೆಯ ಸಹಾಯಕ ಉಪ ನಿರೀಕ್ಷಕ, ಕಡಬ ತಾಲೂಕು ಕೊಣಾಲು ಗ್ರಾಮದ ನಿವಾಸಿ ಕೆ.ಸಿ.ಬೆನ್ನಿಯವರ ಕಾರ್ಯಕ್ಷಮತೆಗೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಕಮಾಂಡೆಂಟ್ ಸತ್ಯನಾರಾಯಣ ಅವರು ತಿಂಗಳ ಪೊಲೀಸ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಕೆ.ಸಿ.ಬೆನ್ನಿ ಅವರು 1997ರಲ್ಲಿ ರಾಜ್ಯ ಮೀಸಲು ಪೊಲೀಸ್ ವಿಭಾಗ ಮೈಸೂರಿನಲ್ಲಿ ಪೊಲೀಸ್ ಕಾನ್ಸ್‌ಸ್ಟೇಬಲ್ ಆಗಿ ಸೇವೆಗೆ ಸೇರ್ಪಡೆಗೊಂಡಿದ್ದರು. ನಾಲ್ಕು ವರ್ಷಗಳ ಸೇವೆಯ ಬಳಿಕ ಮಂಗಳೂರಿಗೆ ವರ್ಗಾವಣೆಗೊಂಡು 2015ರಲ್ಲಿ ಪೊಲೀಸ್ ಹೆಡ್‌ಕಾನ್ಸ್‌ಸ್ಟೇಬಲ್ ಆಗಿ ಮುಂಬಡ್ತಿ ಪಡೆದು ಮಂಗಳೂರಿನಲ್ಲಿಯೇ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. 2022ರಲ್ಲಿ ಎಆರ್‌ಎಸ್‌ಐ ಹುದ್ದೆಗೆ ಮುಂಬಡ್ತಿಗೊಂಡು ಹಾಸನಕ್ಕೆ ವರ್ಗಾವಣೆಗೊಂಡಿದ್ದರು. 1 ವರ್ಷ 6 ತಿಂಗಳ ಕಾಲ ಹಾಸನದಲ್ಲಿ ಸೇವೆ ಸಲ್ಲಿಸಿ ೨೦೨೩ ನವೆಂಬರ್ ತಿಂಗಳಲ್ಲಿ ಮರಳಿ ಮಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ. ಕೆ.ಸಿ.ಬೆನ್ನಿ ಅವರು ದಿನದ 24 ಗಂಟೆಯೂ ಗಸ್ತು ಕಾರ್ಯದಲ್ಲಿ ತೋರಿದ ಶಿಸ್ತಿನ ಕಾರ್ಯವೈಖರಿಗಾಗಿ ’ಗಸ್ತಿನ ಪಡೆಯೊಳಗೊಬ್ಬ ಶಿಸ್ತಿನ ಅಧಿಕಾರಿ’ ಎಂಬ ಪ್ರಶಂಸೆಗೆ ಪಾತ್ರರಾಗಿದ್ದರು.
ಕೆ.ಸಿ.ಬೆನ್ನಿ ಅವರು ಇಲಾಖೆಯೊಳಗಿನ ನಾನಾ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರಲ್ಲದೆ, ಚುನಾವಣೆಯಂತಹ ಬಿರುಸಿನ ಕರ್ತವ್ಯ ಸೇರಿದಂತೆ ಇಲಾಖೆಯೊಳಗಡೆ ನಡೆಯುತ್ತಿದ್ದ ಪೊಲೀಸ್ ರಿಕ್ರೂಟ್ಮೆಂಟ್, ಪೊಲೀಸ್ ಕ್ರೀಡೋತ್ಸವ ಮತ್ತಿತರ ಉನ್ನತ ಅಧಿಕಾರಿಗಳ ಭೇಟಿ ಸಂದರ್ಭಗಳಲ್ಲಿ ಕೆ.ಸಿ.ಬೆನ್ನಿಯವರ ಕಾರ್ಯವೈಖರಿ ಪ್ರಮುಖವಾಗಿದ್ದು, ಹಿರಿಯ ಅಧಿಕಾರಿಗಳಿಂದ ಹಲವಾರು ಪಾರಿತೋಷಕ ಫಲಕಗಳಿಗೆ ಭಾಜನರಾಗಿದ್ದರು.
ರಕ್ತದಾನದ ಮೂಲಕವೂ ಗುರುತಿಸಿಕೊಂಡಿರುವ ಕೆ.ಸಿ.ಬೆನ್ನಿಯವರು ಸತತ 30 ಸಲ ರಕ್ತದಾನ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಇಲಾಖೆಯ ವಸತಿಗೃಹವೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡದ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಮನೆಯೊಳಗೆ ಪ್ರವೇಶಿಸಿ ವಿದ್ಯುತ್ ಸ್ವಿಚ್‌ಗಳನ್ನು ಬಂದ್ ಮಾಡುವುದರೊಂದಿಗೆ ಅಡುಗೆ ಕೋಣೆಯೊಳಗೆ ತಂಬಿಸಿಟ್ಟಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಿದ್ದರು.
ಕೆ.ಸಿ.ಬೆನ್ನಿ ಅವರು ಕೊಣಾಲು ಗ್ರಾಮದ ಕಲಾಯಿ ವದಕಟ್ಟೇಲ್ ನಿವಾಸಿ ದಿ.ಕೆ.ಸಿ.ಚೇರಿಯನ್ ಹಾಗೂ ದಿ.ಮರಿಯಮ್ಮ ಅವರ ಪುತ್ರ. ಕೆ.ಸಿ.ಬೆನ್ನಿ ಅವರ ಪತ್ನಿ ಸಿನಿ ಅವರು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದು, ಪುತ್ರಿಯರಾದ ಅಭಿನಿ ಮತ್ತು ಅಂಜನಿ ಅವರು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ.
